ADVERTISEMENT

ಚಿಕ್ಕಬಳ್ಳಾಪುರ: 18 ಗ್ರಾಮಗಳಿಗೆ ‘ಆದಿ ಆದರ್ಶ’ದ ಭಾಗ್ಯ

ಪರಿಶಿಷ್ಟ ಪಂಗಡದ ಜನರು ಹೆಚ್ಚಿರುವ ಹಳ್ಳಿಗಳ ಆಯ್ಕೆ; ಜಿಲ್ಲೆಗೆ ₹ 81 ಲಕ್ಷ ಬಿಡುಗಡೆ

ಡಿ.ಎಂ.ಕುರ್ಕೆ ಪ್ರಶಾಂತ
Published 23 ಜುಲೈ 2022, 7:54 IST
Last Updated 23 ಜುಲೈ 2022, 7:54 IST

ಚಿಕ್ಕಬಳ್ಳಾಪುರ: ‘ಪ್ರಧಾನ ಮಂತ್ರಿ ಆದಿ ಆದರ್ಶ’ ಗ್ರಾಮ ಯೋಜನೆ (ಪಿಎಂಎಎಜಿವೈ)ಯಡಿ ಜಿಲ್ಲೆಯ 18 ಗ್ರಾಮಗಳು ಅಭಿವೃದ್ಧಿಯ ಭಾಗ್ಯವನ್ನು ಕಾಣಲಿವೆ. ಮೊದಲ ಹಂತದಲ್ಲಿ ನಾಲ್ಕು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹ 81.52 ಲಕ್ಷ ಬಿಡುಗಡೆ ಮಾಡಿದೆ.

ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲಯವು ಪ್ರಸಕ್ತ ವರ್ಷದಿಂದ ಆದಿ ಆದರ್ಶ ಗ್ರಾಮ ಯೋಜನೆಯನ್ನು ರೂಪಿಸಿದೆ. ಪರಿಶಿಷ್ಟ ಪಂಗಡದ ಜನರು ಹೆಚ್ಚಿರುವ ಹಳ್ಳಿಗಳ ಸಮಗ್ರ ಅಭಿವೃದ್ಧಿ ಈ ಯೋಜನೆಯ ಉದ್ದೇಶವಾಗಿದೆ.

2021–22ರಿಂದ 2025–26ರ ನಡುವೆ ರಾಜ್ಯದ 507 ಹಳ್ಳಿಗಳಲ್ಲಿ ಆದಿ ಆದರ್ಶ ಗ್ರಾಮ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.ಈ ಭಾಗವಾಗಿ 2021–22ನೇ ಸಾಲಿನಲ್ಲಿ ರಾಜ್ಯದ 105 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಇಂತಿಷ್ಟು ಗ್ರಾಮಗಳನ್ನು ಆಯ್ಕೆಮ ಮಾಡಿಕೊಳ್ಳಬೇಕಾಗಿದೆ.

ADVERTISEMENT

ಯೋಜನೆಯಡಿ 2021ರಿಂದ 26ನೇ ಸಾಲಿನವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 18 ಗ್ರಾಮ ಅಭಿವೃದ್ಧಿಗೊ
ಳಿಸಬೇಕಾಗಿದೆ. ಇದರಲ್ಲಿ 2021–22ನೇ ಸಾಲಿನಲ್ಲಿ ನಾಲ್ಕು ಗ್ರಾಮಗಳ ಅಭಿವೃದ್ಧಿಗೆಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಸಿರು ನಿಶಾನೆ ತೋರಿ ಹಣ ಬಿಡುಗಡೆ ಮಾಡಿದೆ.

ಈಗಾಗಲೇ ಸಂಸದರ ಆದರ್ಶ ಗ್ರಾಮ ಯೋಜನೆ ಜಾರಿಯಲ್ಲಿದ್ದು ಈಗ‘ಆದಿ ಆದರ್ಶ’ ಯೋಜನೆಯಿಂದ ಮತ್ತಷ್ಟು ಹಿಂದುಳಿದ ಗ್ರಾಮಗಳ ಅಭಿವೃದ್ಧಿ ಆಗಲಿದೆ. ರಾಜ್ಯದಲ್ಲಿ ಯೋಜನೆಯಡಿ ಐದು ವರ್ಷಗಳಲ್ಲಿ ರಾಯಚೂರು ಜಿಲ್ಲೆಯ 89 ಗ್ರಾಮಗಳನ್ನು ಅಭಿವೃದ್ಧಿಗೊಳಿಸಲು ಯೋಜಿಸಲಾಗಿದೆ. ಈ ಜಿಲ್ಲೆಯಲ್ಲಿ ಯೋಜನೆಯಡಿ ಗರಿಷ್ಠ ಸಂಖ್ಯೆಯ ಗ್ರಾಮಗಳು ಸೇರಿವೆ.

ಹಳ್ಳಿಗಳ ಆಯ್ಕೆಯಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಅವರ ನಿರ್ಧಾರ ಪ್ರಮುಖವಾಗಿದೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ.

ಎಸ್‌ಟಿ ಹಳ್ಳಿಗಳ ಅಭಿವೃದ್ಧಿ: ಶೇ 50ರಷ್ಟು ಪರಿಶಿಷ್ಟ ಪಂಗಡದ ಜನರು ವಾಸಿಸುತ್ತಿರುವ ಹಳ್ಳಿಗಳನ್ನು ಯೋಜನೆಯಡಿ ಆಯ್ಕೆ ಮಾಡಬೇಕಾಗಿದೆ. ಈ ಗ್ರಾಮಗಳು 500ಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರಬೇಕು.

ಆದಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗುವ ಗ್ರಾಮಗಳಲ್ಲಿ ನಡೆಯುವು ಯಾವುದೇ ಕಾಮಗಾರಿಯ ಜಿಯೊ ಟ್ಯಾಗಿಂಗ್ ಮಾಡಬೇಕಾಗುತ್ತದೆ. ಟಿಎಸ್‌ಪಿ ಅಡಿಯಲ್ಲಿ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಜಲಸಂಪನ್ಮೂಲ ಮತ್ತು ಸಿಸಿ ರಸ್ತೆ, ಚರಂಡಿ ಸೇರಿದಂತೆ ಮೂಲಸೌಲಭ್ಯಗಳ ಕಾಮಗಾರಿಗಳನ್ನು ಪ್ರತ್ಯೇಕವಾಗಿ ಕೈಗೊಳ್ಳುವುದರಿಂದ ಆ ಕಾಮಗಾರಿಗಳನ್ನು ಆದಿ ಆದರ್ಶ ಯೋಜನೆಯ ಅನುದಾನದಲ್ಲಿ ನಡೆಸಬಾರದು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.