ADVERTISEMENT

ಕೊರೆಸಿದ್ದು 139 ಕೊಳವೆಬಾವಿ, 116 ವಿಫಲ, 23 ಸಫಲ: ಇದು ಚಿಕ್ಕಬಳ್ಳಾಪುರದ ಕತೆ

ಅತಿಯಾದ ಅಂತರ್ಜಲ ಕುಸಿತದ ಪರಿಣಾಮದಿಂದ ಬಿಗಡಾಯಿಸುತ್ತಿರುವ ನೀರಿನ ಸಮಸ್ಯೆ, ನೀರು ಸಿಗದೆ ಕೋಟಿಗಟ್ಟಲೇ ದುಡ್ಡು ಪೋಲು

ಈರಪ್ಪ ಹಳಕಟ್ಟಿ
Published 30 ಏಪ್ರಿಲ್ 2020, 19:30 IST
Last Updated 30 ಏಪ್ರಿಲ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಒಂದು ದಶಕದಲ್ಲಿ ಅತಿಯಾದ ಮಳೆಯ ಜೂಜಾಟ, ಅಧಿಕಾರಿ–ಜನಪ್ರತಿನಿಧಿಗಳ ಅನಾದರ, ಮಿತಿ ಮೀರಿದ ಅಂತರ್ಜಲದ ದುರ್ಬಳಕೆ ವರ್ಷದಿಂದ ವರ್ಷಕ್ಕೆ ಜನರ ದಿನಬಳಕೆಯ ನೀರಿಗೆ ದುರ್ಭಿಕ್ಷ ಕಾಲ ತಂದೊಡ್ಡುತ್ತಿದೆ.

ಪ್ರತಿ ಬೇಸಿಗೆಯಲ್ಲಿ ನೂರಾರು ಹಳ್ಳಿಗಳಲ್ಲಿ ಕಾಣಿಸಿಕೊಳ್ಳುವ ನೀರಿನ ಹಾಹಾಕಾರ ನೀಗಲು ಕೊರೆಯಿಸುವ ನೂರಾರು ಕೊಳವೆಬಾವಿಗಳ ಪೈಕಿ ಬಹುಪಾಲು ಒಣ ಹುಡಿ ಹಾಕುತ್ತಿದ್ದು, ಇದರಿಂದಾಗಿ ಕೋಟಿಗಟ್ಟಲೇ ಹಣ ಪ್ರತಿ ಬೇಸಿಗೆಯಲ್ಲಿ ಪೋಲಾಗುತ್ತಿದೆ.

ಈ ವರ್ಷ ಜಿಲ್ಲೆಯಲ್ಲಿ ನೀರಿನ ಬವಣೆ ನೀಗಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗವು ಕಳೆದ ಜನವರಿಯಿಂದ ಈವರೆಗೆ 139 ಕೊಳವೆಬಾವಿಗಳನ್ನು ಕೊರೆಯಿಸಿದೆ. ಇವುಗಳಲ್ಲಿ ಶೇ 83.45 ರಷ್ಟು (116) ಕೊಳವೆಬಾವಿಗಳು ನೀರು ಸಿಗದೆ ವಿಫಲವಾಗಿವೆ.

ADVERTISEMENT

ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಹೊಸದಾಗಿ ಕೊರೆಯಿಸಿದ ಕೊಳವೆಬಾವಿಗಳ ಪೈಕಿ ಬರೀ 23ರಲ್ಲಿ (ಶೇ 16.55) ಮಾತ್ರ ಸ್ವಲ್ಪ ಪ್ರಮಾಣದ ನೀರು ಲಭ್ಯವಾಗಿದೆ. ಹೊಸದಾಗಿ ಬೋರ್‌ವೆಲ್‌ಗಳ ಕೊರೆಯಿಸಲು ಸುಮಾರು ₹3 ಕೋಟಿ ವೆಚ್ಚವಾಗಿದೆ. ಈ ಪೈಕಿ ₹2.50 ಕೋಟಿಯಷ್ಟು ಹಣ ನೀರು ಸಿಗದೆ ಪೋಲಾಗಿದೆ.

ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೆರೆಗಳು ಮತ್ತು ನಿಸರ್ಗ ನಿರ್ಮಿತ ಕಾಲುವೆಗಳ ಜಾಲ ಹೊಂದಿರುವ ಪ್ರದೇಶದ ಭಾಗವಾಗಿರುವ ಜಿಲ್ಲೆಯಲ್ಲಿ ಕೆಲ ದಶಕಗಳ ಹಿಂದೆ ಕಣ್ಣು ಹಾಯಿಸಿದೆಡೆಯೆಲ್ಲ ನೀರು ತುಂಬಿದ ಕೆರೆಗಳು ನೀಲ ಹಾಸಿಗೆಯಂತೆ ಗೋಚರಿಸುತ್ತಿದ್ದವು. ಅದೀಗ ಕನಸಾಗಿ ಕಾಡುತ್ತಿದೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 201 ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 1,402 ಸೇರಿದಂತೆ ಒಟ್ಟು 1,603 ಕೆರೆಗಳಿವೆ. ಈ ಪೈಕಿ ಕಳೆದ ಬೇಸಿಗೆಯಲ್ಲಿ ಶೇ 95 ರಷ್ಟು ಕೆರೆಗಳು ಬತ್ತಿ ಬರಡಾಗಿದ್ದವು.

ಜಿಲ್ಲೆಯಲ್ಲಿ ಕಳೆದ ಕೆಲ ದಶಕಗಳಿಂದ ‘ಶಾಶ್ವತ ನೀರಾವರಿ’ ಹೆಸರಿನಲ್ಲಿ ಈವರೆಗೆ ನಡೆದ ಚಳವಳಿ, ಪ್ರತಿಭಟನೆ, ಮುತ್ತಿಗೆ, ಧರಣಿ ಸತ್ಯಾಗ್ರಹಗಳಿಗೆ ಲೆಕ್ಕ ಇಟ್ಟವರಿಲ್ಲ. ಇಷ್ಟಾದರೂ ಈ ಭಾಗದ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮಾತ್ರ ನೀರಿನ ವಿಚಾರದಲ್ಲಿ ಗಂಭೀರ ಚಿಂತನೆ ನಡೆಸುತ್ತಲೇ ಇಲ್ಲ ಆರೋಪ ಹೋರಾಟಗಾರರದು.

ಜಿಲ್ಲೆಯ ಕೆಲ ಪ್ರದೇಶಗಳಲ್ಲಿ 1,800 ಅಡಿ ತೂತು ಕೊರೆದರೂ ಇವತ್ತು ನೀರ ಪಸೆ ಕಾಣುತ್ತಿಲ್ಲ. ಕಾಯಂ ಅತಿಥಿಯಂತಾಗಿರುವ ‘ಬರ’ ಅಂತರ್ಜಲ ಕುಸಿತದ ಮೇಲೆ ಎಳೆಯುತ್ತಿರುವ ‘ಬರೆ’ ಅಷ್ಟಿಷ್ಟಲ್ಲ. ಜತೆಗೆ ‘ದುರ್ಭಿಕ್ಷದಲ್ಲಿ ಅಧಿಕ ಮಾಸ’ ಎಂಬ ಗಾದೆಯಂತೆ ಫ್ಲೋರೈಡ್‌ ಹಾವಳಿ. ಆಗಂತುಕನನ್ನು ಆಹ್ವಾನಿಸಿಕೊಂಡಂತಾಗುತ್ತಿದೆ.

ಬೆರಳೆಣಿಕೆಯ ಕೆರೆಗಳಲ್ಲಿ ನಡೆಸಿದ ‘ಅಭಿವೃದ್ಧಿ’ಪಡಿಸುವ ‘ಶಾಸ್ತ್ರ’ದ ಕಾಮಗಾರಿಗಳು ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾಗಿವೆ. ಪರಿಣಾಮ, ಜಿಲ್ಲೆಯಲ್ಲಿ ಸಾವಿರಾರು ಕೆರೆಗಳಿದ್ದರೂ ನೀರಿಗಾಗಿ ಮಹಾನಗರದ ಕೊಳಚೆ ನೀರು ಆಶ್ರಯಿಸುವ ಸ್ಥಿತಿ ಬಂದಿರುವುದು ನೋಡಿ ಜನರು ‘ಅಂಗೈಯಲ್ಲಿ ತುಪ್ಪ, ಬೆಣ್ಣೆಗಾಗಿ ಅಲೆದಾಟ’ ಎಂಬ ಗಾದೆ ಮೆಲುಕು ಹಾಕುತ್ತಿದ್ದಾರೆ.

ಪರಿಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ನಾವು ಭಾರಿ ಬೆಲೆ ತೆರಬೇಕಾಗುತ್ತದೆ. ಅದಕ್ಕಾಗಿ ಹೊತ್ತು ಹೋಗುವ ಮುನ್ನವೇ ಎಚ್ಚೆತ್ತುಕೊಂಡು ಅಮೂಲ್ಯವಾದ ಮಳೆ ನೀರು ಸಂಗ್ರಹಿಸುವ ಕೆಲಸದಲ್ಲಿ ಪ್ರತಿಯೊಬ್ಬರನ್ನು ತೊಡಗಿಸಿಕೊಳ್ಳಬೇಕಾದದ್ದು ಇಂದಿನ ತುರ್ತು ಅಗತ್ಯ ಎನ್ನುತ್ತಾರೆ ಪರಿಸರ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.