ADVERTISEMENT

ಕಂಬಾಲಪಲ್ಲಿ ಪರಿಶಿಷ್ಟರ ಸಜೀವ ದಹನಕ್ಕೆ 25 ವರ್ಷ

ಹತ್ಯಾಕಾಂಡ ನಡೆದು ಕಾಲು ಶತಮಾನವಾದರೂ ಆರೋಪಿಗಳಿಗಿಲ್ಲ ಶಿಕ್ಷೆ * ಸುಪ್ರೀಂ ಕೋರ್ಟ್‌ನಲ್ಲಿದೆ ಮೇಲ್ಮನವಿ

ಡಿ.ಎಂ.ಕುರ್ಕೆ ಪ್ರಶಾಂತ
Published 14 ಮಾರ್ಚ್ 2025, 0:30 IST
Last Updated 14 ಮಾರ್ಚ್ 2025, 0:30 IST
ಕಂಬಾಲಪಲ್ಲಿಯಲ್ಲಿ ದಹನವಾದ ಮನೆ
ಕಂಬಾಲಪಲ್ಲಿಯಲ್ಲಿ ದಹನವಾದ ಮನೆ   

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ಗ್ರಾಮದಲ್ಲಿ ನಡೆದ ಪರಿಶಿಷ್ಟರ ಸಜೀವ ದಹನ ಅಮಾನುಷ ಘಟನೆ ನಡೆದು 25 ವರ್ಷವಾಗಿದೆ. ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಹತ್ಯಾಕಾಂಡದ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತವೆ. ಆದರೆ ಇಲ್ಲಿಯವರೆಗೆ  ಆರೋಪಿಗಳಿಗೆ ಶಿಕ್ಷೆ ಆಗಿಲ್ಲ.

ರಾಜ್ಯದಲ್ಲಿ ನಡೆದ ಪರಿಶಿಷ್ಟರ ಮೇಲಿನ ಹತ್ಯೆಗಳ ವಿಚಾರದಲ್ಲಿ ಕಂಬಾಲಪಲ್ಲಿ ಪ್ರಕರಣ ಪ್ರಮುಖವಾದುದು. ಸಾಕ್ಷ್ಯಾಧಾರವಿಲ್ಲ ಎಂದು ಆರೋಪಿಗಳು ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್‌ನಿಂದ ಖುಲಾಸೆಗೊಂಡಿದ್ದಾರೆ.

ನಂತರ ದಲಿತ ಸಂಘರ್ಷ ಸಮಿತಿಯ ಒತ್ತಡದಿಂದ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಆದರೆ ಮೇಲ್ಮನವಿ ಸಲ್ಲಿಸಿ ದಶಕ ಕಳೆದರೂ ಪ್ರಕರಣದ ವಿಚಾರಣೆ ನಡೆದಿಲ್ಲ. ಹಲವಾರು ಹೋರಾಟ ನಡೆದರೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. 

ADVERTISEMENT

ಆ ರಾತ್ರಿ ನಡೆದದ್ದು ಏನು?: ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿ ಕಂಬಾಲಪಲ್ಲಿ ಗ್ರಾಮವಿದೆ. 2000ದ ಮಾರ್ಚ್ 13ರ ಶನಿವಾರ ರಾತ್ರಿ ಎಂಟು ಗಂಟೆಗೆ ಒಕ್ಕಲಿಗ ‌ಸಮುದಾಯದ ಗುಂಪು ಪರಿಶಿಷ್ಟರ ಮನೆಗಳ ಮೇಲೆ ದಾಳಿ ನಡೆಸಿತ್ತು. 

ಒಕ್ಕಲಿಗರು ಹಾಗೂ ಪರಿಶಿಷ್ಟರ ನಡುವಿನ ಹಳೆಯ ವೈಷಮ್ಯ ಅಂದು ಸ್ಫೋಟವಾಗಿತ್ತು. ಪರಿಶಿಷ್ಟರ ಮನೆಗೆ ಬೆಂಕಿ ಹಚ್ಚಲಾಯಿತು. ಮೂವರು ಮಹಿಳೆಯರೂ ಸೇರಿದಂತೆ ಏಳು ಪರಿಶಿಷ್ಟರನ್ನು ಸಜೀವವಾಗಿ ದಹಿಸಲಾಗಿತ್ತು. 

ಚಿಂತಾಮಣಿಯಿಂದ ಕಂಬಾಲಪಲ್ಲಿಗೆ ರಾತ್ರಿ ಬಸ್‌ನಲ್ಲಿ ಬಂದು ಇಳಿದ ಗ್ರಾಮದ ನೀರಗಂಟಿ ಕೃಷ್ಣಾರೆಡ್ಡಿ ಅವರಿಗೆ ಗುಂಪೊಂದು ಚೂರಿಯಿಂದ ಇರಿಯಿತು. ಅವರು ಸ್ಥಳದಲ್ಲಿಯೇ ಮೃತಪಟ್ಟರು.

ಈ ಘಟನೆಯಿಂದ ಕೆರಳಿದ ಒಕ್ಕಲಿಗರು ದಲಿತರ ಕೇರಿಗೆ ನುಗ್ಗಿದರು. ಜೀವಭಯದಿಂದ ಮೂರು ಪರಿಶಿಷ್ಟ ಜಾತಿಯ ಕುಟುಂಬಗಳ ಏಳು ಸದಸ್ಯರು ಮೂರು ಮನೆಗಳ ಒಳಗೆ ಸೇರಿ ಚಿಲಕ ಹಾಕಿ ಬಾಗಿಲು ಭದ್ರಪಡಿಸಿಕೊಂಡರು.

ಆಕ್ರೋಶಗೊಂಡ ಗುಂಪು ಸೀಮೆಎಣ್ಣೆ ಸುರಿದು ಮನೆಗೆ ಬೆಂಕಿ ಇಟ್ಟರು. ಶ್ರೀರಾಮ, ಅಂಜಿನಪ್ಪ, ಚಿಕ್ಕಪಾಪಣ್ಣ, ನರಸಿಂಹಯ್ಯ, ಪಾಪಮ್ಮ, ಸುಬ್ಬಮ್ಮ, ರಾಮಕ್ಕ ಸುಟ್ಟು ಕರಕಲಾದರು. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ಸಿಬ್ಬಂದಿಯನ್ನು ತಡೆಯಲಾಯಿತು.

ದುರ್ಘಟನೆ ಕುರಿತು ಲೋಕಸಭೆಯಲ್ಲಿ ಚರ್ಚೆಗಳು ನಡೆದವು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಕಂಬಾಲಪಲ್ಲಿಗೆ ಭೇಟಿ ನೀಡಿದ್ದರು. 

ಘಟನೆಯಲ್ಲಿ 32 ಜನರನ್ನು ಆರೋಪಿಗಳನ್ನಾಗಿ ಗುರುತಿಸಲಾಯಿತು. ದೀರ್ಘ ವಿಚಾರಣೆ ನಂತರ 2007ರ ಡಿ.4ರಂದು ಕೋಲಾರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗಳ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲದ ಕಾರಣ ಆರೋಪಮುಕ್ತಗೊಳಿಸಿ ತೀರ್ಪು ನೀಡಿತು.

ವಿಚಾರಣೆ ಅವಧಿಯಲ್ಲಿ 40 ಸಾಕ್ಷಿಗಳು ವಿರುದ್ಧ ಹೇಳಿಕೆ ನೀಡಿದ್ದರು. ಆ ಪರಿಣಾಮ 32 ಆರೋಪಿಗಳನ್ನು ಆರೋಪಮುಕ್ತ
ಗೊಳಿಸಲಾಗಿತ್ತು. 

ಈ ತೀರ್ಪಿನ ವಿರುದ್ಧ ಸರ್ಕಾರ ಸಲ್ಲಿಸಿದ್ದ ಮೇಲ್ಮವಿಯ ವಿಚಾರಣೆ ನಡೆಸಿದ ಹೈಕೋರ್ಟ್ 2014ರ ಆ.21ರಂದು ಕೋಲಾರ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು. 14 ವರ್ಷಗಳ ಅವಧಿಯಲ್ಲಿ ಪ್ರಕಟವಾದ ಎರಡನೇ ತೀರ್ಪಿನಲ್ಲಿಯೂ ಆರೋಪಿಗಳು ಆರೋಪ ಮುಕ್ತರಾಗಿದ್ದರು.

ಹೀಗೆ ಪರಿಶಿಷ್ಟರ ಮೇಲೆ ನಡೆದ ಅಮಾನುಷ ಹತ್ಯಾಕಾಂಡ ಕಾಲು ಶತಮಾನ ಪೂರ್ಣಗೊಳಿಸಿದೆ. ಮೇಲ್ಮನವಿ ಸುಪ್ರೀಂಕೋರ್ಟ್‌ನಲ್ಲಿದೆ. ದಸಂಸ ನೇತೃತ್ವದಲ್ಲಿ ಹೋರಾಟಗಳು ನಡೆದರೂ ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿಲ್ಲ. ದಲಿತ ಚಳವಳಿಗಳ ಒಡಲಿನಲ್ಲಿ ಕಂಬಾಲಪಲ್ಲಿಯ ಹತ್ಯಾಕಾಂಡ ಆರದಕೆಂಡವಾಗಿದೆ. 

ನ್ಯಾಯದ ಹಂಬಲದಲ್ಲಿಯೇ ಜೀವಬಿಟ್ಟ ವೆಂಕಟರಾಯಪ್ಪ

ಕಂಬಾಲಪಲ್ಲಿ ದಲಿತರ ಹತ್ಯಾಕಾಂಡದ ಪ್ರಮುಖ ಸಾಕ್ಷಿ ಹಾಗೂ ಕುಟುಂಬದ 5 ಜನರನ್ನು ಕಳೆದುಕೊಂಡು ನ್ಯಾಯಕ್ಕಾಗಿ ಕೊನೆಯವರೆಗೂ ಹೋರಾಟ ನಡೆಸಿದ ವೆಂಕಟರಾಯಪ್ಪ 2017ರಲ್ಲಿ ನಿಧನರಾದರು. ನ್ಯಾಯಕ್ಕಾಗಿ ಅವರ ಹಂಬಲ ಇಂದಿಗೂ ಈಡೇರಿಲ್ಲ. ವೆಂಕಟರಾಯಪ್ಪ ಅವರ ಪತ್ನಿ ರಾಮಕ್ಕ ಪುತ್ರಿ ಪಾಪಮ್ಮ ಪುತ್ರರಾದ ಅಂಜನಪ್ಪ ಶ್ರೀರಾಮ ವೆಂಕಟರಮಣಪ್ಪ ಸಜೀವವಾಗಿ ದಹನವಾಗಿದ್ದರು. ವೆಂಕಟರಾಯಪ್ಪ 78ನೇ ವರ್ಷದಲ್ಲಿ ಮೃತಪಟ್ಟರು. ಸಾಯುವವರೆಗೂ ಅವರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರು. ಕೊನೆಗೂ ನ್ಯಾಯ ಅವರಿಗೆ ಮರೀಚಿಕೆಯಾಯಿತು.

ಮರೀಚಿಕೆ ಆಯಿತೇ ನ್ಯಾಯ?

ಕಂಬಾಲಪಲ್ಲಿ ದಲಿತರ ಹತ್ಯಾಕಾಂಡದ ಪ್ರಮುಖ ಸಾಕ್ಷಿ ಹಾಗೂ ಕುಟುಂಬದ 5 ಜನರನ್ನು ಕಳೆದುಕೊಂಡು ನ್ಯಾಯಕ್ಕಾಗಿ ಕೊನೆಯವರೆಗೂ ಹೋರಾಟ ನಡೆಸಿದ ವೆಂಕಟರಾಯಪ್ಪ 2017ರಲ್ಲಿ ನಿಧನರಾದರು. ನ್ಯಾಯಕ್ಕಾಗಿ ಅವರ ಹಂಬಲ ಇಂದಿಗೂ ಈಡೇರಿಲ್ಲ.

ವೆಂಕಟರಾಯಪ್ಪ ಅವರ ಪತ್ನಿ ರಾಮಕ್ಕ, ಪುತ್ರಿ ಪಾಪಮ್ಮ, ಪುತ್ರರಾದ ಅಂಜನಪ್ಪ, ಶ್ರೀರಾಮ, ನರಸಿಂಹಯ್ಯ ಸಜೀವವಾಗಿ ದಹನವಾಗಿದ್ದರು. ವೆಂಕಟರಾಯಪ್ಪ 78ನೇ ವರ್ಷದಲ್ಲಿ ಮೃತಪಟ್ಟರು. ಸಾಯುವವರೆಗೂ ಅವರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರು. ಕೊನೆಗೂ ನ್ಯಾಯ ಅವರಿಗೆ ಮರೀಚಿಕೆಯಾಯಿತು.

ವ್ಯವಸ್ಥೆಯನ್ನೇ ಪರವಾಗಿಸಿಕೊಳ್ಳುವ ಪ್ರಬಲರು

‘ಜಿಲ್ಲಾ ನ್ಯಾಯಾಲಯದಲ್ಲಿ ಮತ್ತು ಹೈಕೋರ್ಟ್‌ನಲ್ಲಿ ಪ್ರಕರಣ ಖುಲಾಸೆ ಆಯಿತು. ನಂತರ ಸರ್ಕಾರದ ಮೇಲೆ ಒತ್ತಡ ತಂದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವಂತೆ ಮಾಡಿದ್ದೇವೆ. ಎಂ.ಎನ್.ರಾವ್ ಪ್ರಕರಣದ ವಕಾಲತ್ತುವಹಿಸಿದ್ದಾರೆ’ ಎಂದು ಕಂಬಾಲಪಲ್ಲಿ ಪ್ರಕರಣದಲ್ಲಿ ಹೋರಾಟ ನಡೆಸುತ್ತಿರುವ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗಡ್ಡಂ ಎನ್‌.ವೆಂಕಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಾತಿ ಆಧಾರಿತ ಸಮಾಜ ನಮ್ಮದು. ಕೊಲೆಗಡುಕರ ಪರವಾಗಿಯೂ ಪ್ರಬಲ ಸಮುದಾಯಗಳು ನಿಲ್ಲುತ್ತವೆ. ಇವರು ವ್ಯವಸ್ಥೆಯ ಎಲ್ಲ ವಿಚಾರದಲ್ಲಿಯೂ ಪ್ರಭಾವ ಬೀರುತ್ತಾರೆ. ವ್ಯವಸ್ಥೆಯನ್ನು ತಮಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳುತ್ತಾರೆ’ ಎಂದರು. ದಹನವಾದ ಕುಟುಂಬಗಳ ಅಕ್ಕ ತಂಗಿಯರು ಇದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಆ ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಆದರೆ ಅಂದಿನ ದುರ್ಘಟನೆ ಆ ಕುಟುಂಬಗಳ ಸ್ಮೃತಿಯಿಂದ ಮಾಸಿಲ್ಲ. ಅವರ ಮನೆಯಲ್ಲಿ ದಹನವಾದವರ ಚಿತ್ರಗಳು ಇವೆ ಎಂದು ತಿಳಿಸಿದರು.

‘25’ರ ದಿನವೇ ದಲಿತರ ಪಾದಯಾತ್ರೆ

ಕಂಬಾಲಪಲ್ಲಿ ಹತ್ಯಾಕಾಂಡಕ್ಕೆ 25 ವರ್ಷಗಳು ಪೂರ್ಣವಾದ ದಿನವೇ (ಮಾರ್ಚ್‌13) ಅಂಬೇಡ್ಕರ್ ಪುತ್ಥಳಿಗೆ ಹೊದಿಸಿರುವ ಕೊಳಕು ಬಟ್ಟೆ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಚಿಂತಾಮಣಿಯಿಂದ ಬೆಂಗಳೂರಿಗೆ ದಲಿತ ಸಂಘರ್ಷ ಸಮಿತಿ ಮುಖಂಡರು ಪಾದಯಾತ್ರೆ ನಡೆಸಿದರು. ಚಿಂತಾಮಣಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಹೊದಿಸಿರುವ ಕೊಳಕು ಬಟ್ಟೆ ತೆರವುಗೊಳಿಸಿ ಎಂದು ವಿಧಾನ ಸೌಧಕ್ಕೆ ಮುತ್ತಿಗೆ ಕಾರ್ಯಕ್ರಮವನ್ನು ದಲಿತ ಸಂಘಟನೆಗಳ ಮುಖಂಡರು ಹಮ್ಮಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.