ADVERTISEMENT

29ಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ

ಹೈಕೋರ್ಟ್ ಅಂತಿಮ ಆದೇಶದ ಷರತ್ತಿಗೆ ಒಳಪಟ್ಟು ನಡೆಯುವ ಚುನಾವಣೆ, ‘ಕೈ’ ಪಾಳೆಯದಲ್ಲಿ ಸಂಚಲನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 6:01 IST
Last Updated 21 ಡಿಸೆಂಬರ್ 2017, 6:01 IST
ಚಿಕ್ಕಬಳ್ಳಾಪುರ ನಗರಸಭೆ ಕಟ್ಟಡ
ಚಿಕ್ಕಬಳ್ಳಾಪುರ ನಗರಸಭೆ ಕಟ್ಟಡ   

ಚಿಕ್ಕಬಳ್ಳಾಪುರ: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಡಿಸೆಂಬರ್ 29 ರಂದು ಚುನಾವಣೆ ನಿಗದಿ ಮಾಡಿ ಚುನಾವಣಾ ಅಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಶಿವಸ್ವಾಮಿ ಅವರು ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.

29 ರಂದು ಬೆಳಿಗ್ಗೆ 9 ರಿಂದ 10ರ ವರೆಗೆ ನಾಮಪತ್ರ ಸ್ವೀಕರಿಸಲಾಗುತ್ತದೆ. ಮಧ್ಯಾಹ್ನ 12ರ ನಂತರ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಇದರಿಂದಾಗಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆ ವಿಚಾರ ‘ಪ್ರತಿಷ್ಠೆ’ಯ ವಿಚಾರವಾಗಿ ಮಾರ್ಪಟ್ಟು, ಸುಮಾರು 15 ತಿಂಗಳಿಂದ ಉನ್ನತ ನ್ಯಾಯಾಲಯಗಳಲ್ಲಿ ನಡೆದಿರುವ ಕಾನೂನು ಹೋರಾಟ ಮುಕ್ತಾಯಗೊಳ್ಳುವ ಸಾಧ್ಯತೆಗಳು ಗೋಚರಿಸುತ್ತಿವೆ.

ಏನಿದು ಪ್ರಕರಣ?: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಎರಡನೆಯ ಅವಧಿಯ ಚುನಾವಣೆಗಾಗಿ 2016ರ ಫೆಬ್ರುವರಿ 24 ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎಂಬಿ ಮಹಿಳೆಗೆ ಮೀಸಲಾಗಿತ್ತು. ಇದರಿಂದಾಗಿ ನಗರಸಭೆಯ 31 ಸದಸ್ಯರ ಪೈಕಿ ಏಕೈಕ ಪರಿಶಿಷ್ಟ ಮಹಿಳೆಯಾಗಿರುವ 22ನೇ ವಾರ್ಡ್‌ ಸದಸ್ಯೆ ಶ್ವೇತಾ ಮಂಜುನಾಥ್‌ ಅವರಿಗೆ ಯಾವುದೇ ಸ್ಪರ್ಧೆ ಇಲ್ಲದೇ ಅಧ್ಯಕ್ಷ ಹುದ್ದೆ ಒಲಿಯಲಿದೆ ಎನ್ನುವ ಸಂತಸದಲ್ಲಿ ಜೆಡಿಎಸ್ ಸದಸ್ಯರಿದ್ದರು.

ADVERTISEMENT

ಆದರೆ ಸರ್ಕಾರ ಮಾರ್ಚ್‌ 4 ರಂದು ಎರಡನೇ ಬಾರಿಗೆ ಹೊರಡಿಸಿದ ಅಧಿಸೂಚನೆಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಸಾಮಾನ್ಯ ಎಂದು ಬದಲಾಯಿಸಿದ್ದು, ಜೆಡಿಎಸ್‌ ಸದಸ್ಯರನ್ನು ಕೆರಳಿಸಿತ್ತು. ತಮ್ಮ ಕನಸು ಭಗ್ನಗೊಳ್ಳುತ್ತಿದ್ದಂತೆ ಕಾನೂನು ಹೋರಾಟಕ್ಕೆ ಮುಂದಾದ ಜೆಡಿಎಸ್‌ ಸದಸ್ಯರು 2016ರ ಆಗಸ್ಟ್‌ 8ರಂದು ಮೀಸಲಾತಿ ಬದಲಾವಣೆ ಪ್ರಶ್ನಿಸುವ ಜತೆಗೆ ಚುನಾವಣಾಧಿಕಾರಿ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು.

ಎರಡನೇ ಬಾರಿಗೆ ಹೊರಡಿಸಿದ ಅಧಿಸೂಚನೆ 7ನೇ ವಾರ್ಡ್ ಸದಸ್ಯ ಎಂ.ಮುನಿಕೃಷ್ಣಪ್ಪ ಅವರಿಗೆ ವರವಾಗುವಂತೆ ಇತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಚುನಾವಣೆಗೆ ತಡೆಯಾಜ್ಞೆ ನೀಡಿ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು.

ಈ ನಡುವೆ, ನಗರಸಭೆಯಲ್ಲಿದ್ದ ಒಂಬತ್ತು ಜೆಡಿಎಸ್‌ ಸದಸ್ಯರ ಪೈಕಿ, ಈ ಕಾನೂನು ಸಮರ ಸಾರಿದ್ದ ಶ್ವೇತಾ ಮಂಜುನಾಥ್ ಅವರು ಸೇರಿದಂತೆ ಆರು ಸದಸ್ಯರು ದಿಢೀರ್‌ ಬೆಳವಣಿಗೆಯಲ್ಲಿ ಕಾಂಗ್ರೆಸ್ ‘ಕೈ’ ಹಿಡಿದಾಗ ಈ ಪ್ರಕರಣ ಶೀಘ್ರದಲ್ಲಿಯೇ ಅಂತ್ಯಗೊಳ್ಳಲಿದೆ ಎನ್ನುವ ಮಾತುಗಳು ನಗರಸಭೆಯ ಆವರಣದಲ್ಲಿ ಹರಿದಾಡಿದವು.

ಜೆಡಿಎಸ್‌ ತೊರೆದು ‘ಕೈ’ ಹಿಡಿದುಕೊಂಡರೂ ಶ್ವೇತಾ ಮಂಜುನಾಥ್‌ ಅವರು ಮಾತ್ರ ತಮ್ಮ ಕಾನೂನು ಸಮರ ಮಾತ್ರ ಕೈ ಬಿಡದಿರುವುದು ‘ಕೈ’ ಪಾಳೆಯದವರಿಗೆ ಕೈಕೈ ಹಿಚುಕಿಕೊಳ್ಳುವಂತೆ ಮಾಡಿತ್ತು.

ಷರತ್ತಿಗೆ ಒಳಪಟ್ಟು ಚುನಾವಣೆ: ಒಂದು ತಿಂಗಳ ಹಿಂದಷ್ಟೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿ, ಜನವರಿ 15ರ ಒಳಗೆ ಈ ಪ್ರಕ
ರಣ ಇತ್ಯರ್ಥಗೊಳಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ನಿರ್ದೇಶನ ನೀಡಿತ್ತು.

ಇತ್ತೀಚೆಗೆ ಈ ವಿಚಾರವನ್ನು ಪ್ರಸ್ತಾಪಿಸಿ ಚುನಾವಣಾಧಿಕಾರಿ ಅವರು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಂದ ಸ್ಪಷ್ಟನೆ ಕೋರಿದ್ದರು. ಡಿ.16 ರಂದು ಕಾರ್ಯದರ್ಶಿ ಅವರು ‘ಪ್ರಕರಣದ ಇತ್ಯರ್ಥದಲ್ಲಿ ಬರುವ ಅಂತಿಮ ಆದೇಶದ ಷರತ್ತಿಗೆ ಒಳಪಟ್ಟು ಚುನಾವಣೆ ನಡೆಸಬಹುದು’ ಎಂದು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದಾರೆ.

ತೆರೆಮರೆಯಲ್ಲಿ ಸಂಧಾನ
ಶ್ವೇತಾ ಮಂಜುನಾಥ್‌ ಅವರು ಕೂಡ ಸದ್ಯ ಕಾಂಗ್ರೆಸ್‌ ಸೇರ್ಪಡೆಗೊಂಡಿರುವುದರಿಂದ ಮುನಿಕೃಷ್ಣಪ್ಪ ಮತ್ತು ಅವರ ನಡುವಿನ ಕಾನೂನು ಸಮರವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಶಾಸಕ ಸುಧಾಕರ್ ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಈ ಇಬ್ಬರ ಪೈಕಿ ಯಾರು ಅಧ್ಯಕ್ಷರಾಗುತ್ತಾರೆ ಎನ್ನುವುದು ಸದ್ಯದ ಕುತೂಹಲ.

*
ಈ ಚುನಾವಣೆ ನಂತರ ಹೈಕೋರ್ಟ್‌ ಆದೇಶ ತದ್ವಿರುದ್ಧವಾಗಿ ಬಂದರೆ ಚುನಾವಣಾ ಪ್ರಕ್ರಿಯೆ ರದ್ದುಪಡಿಸಿ, ಹೊಸದಾಗಿ ಚುನಾವಣೆ ನಡೆಸಲಾಗುತ್ತದೆ.
-ಶಿವಸ್ವಾಮಿ, ಉಪ ವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.