ADVERTISEMENT

ಜನಪದ ಉಳಿಸಿ ಬೆಳೆಸುವುದು ಯುವಜನರ ಆದ್ಯ ಕರ್ತವ್ಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 8:46 IST
Last Updated 6 ಜನವರಿ 2018, 8:46 IST

ಗೌರಿಬಿದನೂರು: ‘ತಲತಲಾಂತ ರಗಳಿಂದ ಬಾಯಿಂದ ಬಾಯಿಗೆ ಹರಿದು ಬಂದಿರುವ ಜನಪದ ಕಥೆ ಹಾಗೂ ಜನಪದ ಗೀತೆಗಳು ಇತ್ತೀಚೆಗೆ ಕಣ್ಮರೆಯಾಗುತ್ತಿರುವುದು ಕಳವಳದ ಸಂಗತಿ’ ಎಂದು ಪುರಸಭೆ ಅಧ್ಯಕ್ಷ ಕಲೀಂಉಲ್ಲಾ ಹೇಳಿದರು.

ಪಟ್ಟಣದ ಜ್ಞಾನ ಮಂದಿರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಶುಕ್ರವಾರ ಏರ್ಪಡಿಸಿದ್ದ ಜನಪದಗೀತೆ ಹಾಗೂ ಭಾವ ಗೀತೆಗಳ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅನಕ್ಷರಸ್ಥರಾದ ಜನಪದರು ರಾಗಿ ಬೀಸುವಾಗ, ಕಳೆ ತೆಗೆಯುವಾಗ, ಪೈರು ನಾಟಿ ಮಾಡುವ ಸಂದರ್ಭದಲ್ಲಿ ಅನೇಕ ಕಥೆಗಳು ಹೇಳುವ ಜತೆಗೆ ಗೀತೆಗಳನ್ನು ಹಾಡುತ್ತಿದ್ದರು. ಆದರೆ ಇಂದು ಜನಪದ ಕಲೆ, ಸಾಹಿತ್ಯ ನಶಿಸಿ ಹೋಗುತ್ತಿವೆ. ಯುವ ಪೀಳಿಗೆ ಅವುಗಳನ್ನು ಉಳಿಸಿ ಬೆಳೆಸಬೇಕಾಗಿದೆ’ ಎಂದರು.

ADVERTISEMENT

ಪುರ ಠಾಣೆ ಎಸ್‌ಐ ಸುಂದರ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಒಂದಲ್ಲ ಒಂದು ರೀತಿ ಕಲೆ ಅಡಗಿರುತ್ತದೆ. ಅದನ್ನು ಅಭಿವ್ಯಕ್ತಗೊಳಿಸಲು ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ. ಶಿಕ್ಷಣ ಎಂದರೆ ಕೇವಲ ಪಠ್ಯ ಪುಸ್ತಕದ ವಿಷಯವಲ್ಲ. ಇಂತಹ ಪಠ್ಯೇತರ ಚಟುವಟಿಕೆಗಳು ಮಕ್ಕಳ ಮನೋವಿಕಾಸಕ್ಕೆ ಬೇಕಾಗುತ್ತವೆ’ ಎಂದು ತಿಳಿಸಿದರು.

‘ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ಈ ಬಗ್ಗೆ ಬಹಳ ಎಚ್ಚರಿಕೆ ಮತ್ತು ಅರಿವು ಅಗತ್ಯ’ ಎಂದು ಹೇಳಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವಿ.ರವೀಂದ್ರನಾಥ್, ಜ್ಞಾನ ಮಂದಿರ ಶಾಲೆ ಕಾರ್ಯದರ್ಶಿ ಆವಲಪ್ಪ, ಪ್ರಾಥಮಿಕ ಶಾಲಾ  ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದರಾಮಯ್ಯ, ಬ್ಯಾಂಕ್ ಮಂಜುನಾಥ್, ಕನ್ನಡ ಸೇನೆ ಅಧ್ಯಕ್ಷ ರಾಮಕೃಷ್ಣಪ್ಪ, ನಾಗರಾಜ್, ಕೃಷ್ಣ ಕುಮಾರಿ, ಗೀತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.