ADVERTISEMENT

ಎರಡನೇ ಬಾರಿಯೂ ಅಂಗೀಕಾರವಾಗದ ರಾಜೀನಾಮೆ

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರಿಗೆ ಹಿಂಬರಹ ನೀಡಿದ ಆರ್‌.ಡಿ.ಪಿ.ಆರ್‌ ಇಲಾಖೆ ಅಧೀನ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 7:37 IST
Last Updated 26 ಜನವರಿ 2018, 7:37 IST
ಆರ್‌.ಡಿ.ಪಿ.ಆರ್‌ ಇಲಾಖೆ ಅಧೀನ ಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರಿಗೆ ನೀಡಿರುವ ಹಿಂಬರಹದ ಪ್ರತಿ
ಆರ್‌.ಡಿ.ಪಿ.ಆರ್‌ ಇಲಾಖೆ ಅಧೀನ ಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರಿಗೆ ನೀಡಿರುವ ಹಿಂಬರಹದ ಪ್ರತಿ   

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರು ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (ಆರ್‌.ಡಿ.ಪಿ.ಆರ್‌) ಇಲಾಖೆ ಪ್ರಧಾನ ಕಾರ್ಯದರ್ಶಿ ಅವರ ಕಚೇರಿಯಲ್ಲಿ ಸಲ್ಲಿಸಿದ ರಾಜೀನಾಮೆಯೂ ತಿರಸ್ಕೃತಗೊಂಡಿದೆ.

ಜ.18ರಂದು ಕೇಶವರೆಡ್ಡಿ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಗುರುದತ್ ಹೆಗ್ಡೆ ಅವರಿಗೆ ಮೊದಲ ಬಾರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಆದರೆ ಸಿಇಒ ಮಾರನೇ ದಿನವೇ ಕೇಶವರೆಡ್ಡಿ ಅವರಿಗೆ ಪತ್ರ ಬರೆದು, ‘ನೀವು ನೀಡಿದ ರಾಜೀನಾಮೆ ಪತ್ರ ಸ್ವೀಕರಿಸುವುದಾಗಲಿ, ಅಂಗೀಕರಿಸುವುದಾಗಲಿ ಮಾಡುವ ಅಧಿಕಾರ ನನಗಿಲ್ಲ’ ಎಂದು ತಿಳಿಸಿದ್ದರು.

ಬಳಿಕ ಕೇಶವರೆಡ್ಡಿ ಅವರು ಜ.20 ರಂದು ಆರ್‌.ಡಿ.ಪಿ.ಆರ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಈ ಪತ್ರಕ್ಕೆ ಸಂಬಂಧಿಸಿದಂತೆ ಜ.23 ರಂದು ಹಿಂಬರಹ ನೀಡಿರುವ ಆರ್‌.ಡಿ.ಪಿ.ಆರ್‌ ಇಲಾಖೆ ಅಧೀನ ಕಾರ್ಯದರ್ಶಿ, ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 179 (1) ರ ಪ್ರಕಾರ ಟೈಪಿಂಗ್ ಮಾಡಿ ಸಲ್ಲಿಸಿದ ರಾಜೀನಾಮೆ ಪತ್ರವನ್ನು ನಿಯಮಾನುಸಾರ ಅಂಗೀಕರಿಸಲು ಅವಕಾಶವಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಅಧ್ಯಕ್ಷನಾಗಿ ಹುದ್ದೆಯನ್ನು ಧಾರಣ ಮಾಡಿರುವ ಸದಸ್ಯರು ಯಾವುದೇ ಕಾಲದಲ್ಲಿ ತನ್ನ ಸಹಿ ಸಹಿತ ಬರಹದಲ್ಲಿ ಬರೆದು ತನ್ನ ಹುದ್ದೆಗೆ ರಾಜೀನಾಮೆ ಕೊಡಬಹುದು. ಆ ಹುದ್ದೆಯು ಅಂಥ ರಾಜೀನಾಮೆ ದಿನಾಂಕದಿಂದ 15 ದಿನಗಳ ಒಳಗೆ ಅಧ್ಯಕ್ಷ ತನ್ನ ಸಹಿ ಸಹಿತ ಬರಹದಲ್ಲಿ ಬರೆದು ಅಂಥ ರಾಜೀನಾಮೆಯನ್ನು ಹಿಂತೆಗೆದುಕೊಳ್ಳದೆ ಹೋದ ಪಕ್ಷದಲ್ಲಿ ಆ ಹುದ್ದೆಯು ತೆರವಾಗತಕ್ಕದ್ದು’ ಎಂದು ಹಿಂಬರಹದಲ್ಲಿ ಉಲ್ಲೇಖಿಸಲಾಗಿದೆ.

ಕೇಶವರೆಡ್ಡಿ ಅವರ ರಾಜೀನಾಮೆಗೆ ಸುಮಾರು ಒಂದು ವರ್ಷದಿಂದ ಆಗ್ರಹಿಸುತ್ತ ಬಂದಿದ್ದ ಜಿಲ್ಲಾ ಪಂಚಾಯಿತಿಯ ಆಡಳಿತಾರೂಢ ಕಾಂಗ್ರೆಸ್‌ನ 14 ಬಂಡಾಯ ಸದಸ್ಯರು ಮಂಗಳವಾರ ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಈ ರಾಜೀನಾಮೆಯನ್ನು ಅಂಗೀಕರಿಸದ ಪಕ್ಷದ ವರಿಷ್ಠರು ಎರಡು ದಿನಗಳಲ್ಲಿ ಕೇಶವರೆಡ್ಡಿ ಅವರಿಂದ ಕ್ರಮಬದ್ಧ ರಾಜೀನಾಮೆ ಕೊಡಿಸಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಅತೃಪ್ತ ಸದಸ್ಯರ ಮನವೊಲಿಸಿ ಕಳುಹಿಸಿದ್ದರು ಎನ್ನಲಾಗಿದೆ.

ಎರಡು ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಜಿಲ್ಲಾ ಪಂಚಾಯಿತಿ ಸದಸ್ಯತ್ವಕ್ಕೂ ನಾವು ರಾಜೀನಾಮೆ ನೀಡುತ್ತೇವೆ ಎಂದು ಬಂಡಾಯ ಸದಸ್ಯರು ಹೇಳುತ್ತಿದ್ದಾರೆ. ಗುರುವಾರ ಕೇಶವರೆಡ್ಡಿ ಅವರು ಕಾನೂನುಬದ್ಧವಾಗಿ ರಾಜೀನಾಮೆ ನೀಡುತ್ತಾರಾ ಅಥವಾ ಶುಕ್ರವಾರ ಸದಸ್ಯರು ತಮ್ಮ ಮಾತಿಗೆ ಬದ್ಧರಾಗಿ ರಾಜೀನಾಮೆಗೆ ಮುಂದಾಗುತ್ತಾರಾ ಎನ್ನುವುದು ಸದ್ಯ ಕಾಂಗ್ರೆಸ್ ವಲಯದಲ್ಲಿ ಕುತೂಹಲ ಮೂಡಿಸಿದೆ.

28 ಸದಸ್ಯ ಬಲ ಹೊಂದಿರುವ ಜಿಲ್ಲಾ ಪಂಚಾಯಿತಿಯಲ್ಲಿ 21 ಕಾಂಗ್ರೆಸ್‌ ಸದಸ್ಯರು, ಐದು ಜೆಡಿಎಸ್‌, ಬಿಜೆಪಿ ಮತ್ತು ಸಿಪಿಎಂ ತಲಾ ಒಬ್ಬ ಸದಸ್ಯರು ಇದ್ದಾರೆ. ಆದರೆ ರಾಜಕೀಯ ‘ಹಿತಾಸಕ್ತಿ’ ಸಂಘರ್ಷದಿಂದ ಜಿಲ್ಲೆಯ ಕಾಂಗ್ರೆಸ್‌ ಪಾಳೆಯದಲ್ಲಿ ಮೂರು ಬಣಗಳಾಗಿವೆ.

ಪರಿಣಾಮ, ಸ್ವಪಕ್ಷದ 14 ಸದಸ್ಯರು ಶಾಸಕ ಡಾ.ಕೆ.ಸುಧಾಕರ್ ಅವರ ತಂದೆಯಾಗಿರುವ ಕೇಶವರೆಡ್ಡಿ ಅವರ ಆಡಳಿತ ವೈಖರಿ ವಿರುದ್ಧ ಸಿಡಿದೆದ್ದು ಕಳೆದ ಒಂದು ವರ್ಷದಿಂದ ರಾಜೀನಾಮೆಗೆ ಒತ್ತಾಯಿಸುತ್ತಲೇ ಬಂದಿದ್ದರು. ವರಿಷ್ಠರ ಸಂಧಾನಗಳು ವಿಫಲಗೊಂಡ ನಂತರ ಇತ್ತೀಚೆಗೆ ಹೈಕಮಾಂಡ್ ನಿರ್ದೇಶನದಂತೆ ಕೇಶವರೆಡ್ಡಿ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

‘ಒಂದು ಮುಕ್ಕಾಲು ವರ್ಷದಿಂದ ಜಿಲ್ಲಾ ಪಂಚಾಯಿತಿಯಲ್ಲಿ ಈ ಆಂತರಿಕ ಕಲಹದಿಂದಾಗಿ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಸ್ವಪಕ್ಷೀಯರ ಬಹುದಿನಗಳ ಒತ್ತಾಯದ ಬಳಿಕ ರಾಜೀನಾಮೆಗೆ ಮುಂದಾಗಿರುವ ಕೇಶವರೆಡ್ಡಿ ಅವರು ಕ್ರಮಬದ್ಧ ರೀತಿಯಲ್ಲಿ ರಾಜೀನಾಮೆ ಸಲ್ಲಿಸದೆ ಎಲ್ಲರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್ ಅಸಮಾಧಾನ ವ್ಯಕ್ತಪಡಿಸಿದರು.

‘ತಾನು ಶಿಕ್ಷಕನಾಗಿ ಕೆಲಸ ಮಾಡಿರುವವನು ನನಗೆ ಎಲ್ಲಾ ಗೊತ್ತು ಎಂದು ತಾನೇ ಬುದ್ಧಿವಂತ ಎನ್ನುವ ರೀತಿ ಮಾತನಾಡುವ ಕೇಶವರೆಡ್ಡಿ ಅವರು ಎರಡು ಕಡೆಗಳಲ್ಲಿ ಸಲ್ಲಿಸಿದ ರಾಜೀನಾಮೆ ಏಕೆ ತಿರಸ್ಕೃತಗೊಂಡಿವೆ? ತಮ್ಮ ವೈಯಕ್ತಿಕ ಸ್ವಾರ್ಥ, ಹಿತಾಸಕ್ತಿಗಳಿಗಾಗಿ ಜಿಲ್ಲಾ ಪಂಚಾಯಿತಿ ಬಲಿ ಕೊಡುವ ಬದಲು ಕೂಡಲೇ ಅವರು ಪದತ್ಯಾಗ ಮಾಡಲಿ’ ಎಂದು ಆಗ್ರಹಿಸಿದರು.

**

ಕೇಶವರೆಡ್ಡಿ ಅವರು ಜನರಿಗೆ ಮಂಕುಬೂದಿ ಎರಚುವ ಕೆಲಸ ಆರಂಭಿಸಿದ್ದಾರೆ. ಇದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ.
-ಕೆ.ಸಿ.ರಾಜಾಕಾಂತ್, ಜಿಲ್ಲಾ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.