ADVERTISEMENT

ಚಿಕ್ಕಬಳ್ಳಾಪುರ: ಇ-ಲೋಕ ಅದಾಲತ್‍ನಲ್ಲಿ 623 ಪ್ರಕರಣಗಳು ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 13:11 IST
Last Updated 19 ಸೆಪ್ಟೆಂಬರ್ 2020, 13:11 IST
ಇ-ಲೋಕ ಅದಾಲತ್‍ನಲ್ಲಿ ನ್ಯಾಯಾಧೀಶರು ವ್ಯಾಜ್ಯಗಳನ್ನು ಆಲಿಸಿದರು.
ಇ-ಲೋಕ ಅದಾಲತ್‍ನಲ್ಲಿ ನ್ಯಾಯಾಧೀಶರು ವ್ಯಾಜ್ಯಗಳನ್ನು ಆಲಿಸಿದರು.   

ಚಿಕ್ಕಬಳ್ಳಾಪುರ: ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಶನಿವಾರ ಆಯೋಜಿಸಿದ್ದ ಇ-ಲೋಕ ಅದಾಲತ್‍ನಲ್ಲಿ 623 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.

ಇ-ಲೋಕ ಅದಾಲತ್‍ನಲ್ಲಿ ರಸ್ತೆ ಅಪಘಾತ, ಚೆಕ್ ಬೌನ್ಸ್, ನೀರಿನ ಬಿಲ್, ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟಾರು ವಾಹನ, ನಿವೇಶನ ಮಾರಾಟ ಒಳಗೊಂಡಂತೆ ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 5ರ ವರೆಗೆ ಅದಾಲತ್ ನಡೆಯಿತು. ಕೆಲ ಅರ್ಜಿದಾರರು ವಕೀಲರ ಜತೆ ಅದಾಲತ್‍ನಲ್ಲಿ ಭಾಗವಹಿಸಿದ್ದರು. ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಸರದಿಯಲ್ಲಿ ಅರ್ಜಿದಾರರ ಪ್ರಕರಣಗಳ ಇತ್ಯರ್ಥ ನಡೆಯಿತು.

ADVERTISEMENT

ಪ್ರಧಾನ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಬೈರಪ್ಪ ಶಿವಲಿಂಗ ನಾಯಿಕ ಅವರ ನೇತೃತ್ವದಲ್ಲಿ ಜಿಲ್ಲಾ ನ್ಯಾಯಾಲಯದ ಎಲ್ಲ ನ್ಯಾಯಾಧೀಶರು ಮತ್ತು ಎಲ್ಲ ತಾಲ್ಲೂಕುಗಳ ನ್ಯಾಯಾಧೀಶರು ಇ-ಲೋಕ ಅದಾಲತ್‍ನಲ್ಲಿಸಂಧಾನಕಾರರಾಗಿ ಭಾಗವಹಿಸಿದ್ದರು.

ಇ-ಲೋಕ ಅದಾಲತ್‍ನಲ್ಲಿ ವಾದಿ-ಪ್ರತಿವಾದಿಗಳು ಮತ್ತು ವಕೀಲರು ತಮ್ಮ ಕಚೇರಿ, ಮನೆಗಳಿಂದ ಮೊಬೈಲ್‌, ಅಂತರ್ಜಾಲದ ಮೂಲಕ ಅದಾಲತ್‌ನಲ್ಲಿ ಭಾಗಹಿಸಿದ್ದರು.

ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದ ಬೈರಪ್ಪ ಶಿವಲಿಂಗ ನಾಯಿಕ, ‘ಸರ್ವರಿಗೂ ನ್ಯಾಯ ಎಂಬುದು ಕಾನೂನು ಸೇವೆಗಳ ಪ್ರಾಧಿಕಾರಗಳ ಧ್ಯೇಯೋದ್ದೇಶ. ಆರ್ಥಿಕವಾಗಿ ದುರ್ಬಲರಾದವರಿಗೂ ಉಚಿತ ಮತ್ತು ಸಕ್ಷಮ ಕಾನೂನು ಸೇವೆಗಳನ್ನು ಒದಗಿಸುವ ಕೆಲಸವನ್ನು ಪ್ರಾಧಿಕಾರ ಮಾಡುತ್ತಿದೆ. ಆ ನಿಟ್ಟಿನಲ್ಲಿ ಇ-ಲೋಕ ಅದಾಲತ್ ಜನರ ಪಾಲಿಗೆ ಒಂದು ಸುವರ್ಣಾವಕಾಶವಾಗಿದೆ’ ಎಂದು ಹೇಳಿದರು.

‘ಕೋವಿಡ್‌ ಕಾರಣಕ್ಕೆ ಕಕ್ಷಿದಾರರು ಮತ್ತು ವಕೀಲರ ಹಿತವನ್ನು ಗಮನದಲ್ಲಿಟ್ಟುಕೊಂಡು ಇ- ಅದಾಲತ್ ಆಯೋಜಿಸಲಾಗಿದೆ. ಕಕ್ಷಿದಾರರು ಕೋವಿಡ್‌ ಮಾರ್ಗಸೂಚಿಸಗಳನ್ನು ಪಾಲನೆ ಮಾಡಿ ಆರೋಗ್ಯ ಮತ್ತು ಸುರಕ್ಷೆಯನ್ನು ಕಾಪಾಡಿಕೊಳ್ಳುವ ಜತೆಗೆ ತಾವಿದ್ದ ಸ್ಥಳದಿಂದಲೇ ತಮ್ಮ ವ್ಯಾಜ್ಯಗಳನ್ನು ವಿದ್ಯುನ್ಮಾನ ತಂತ್ರಜ್ಞಾನಗಳ ಮೂಲಕ ಅದಾಲತ್‌ನಲ್ಲಿ ಭಾಗವಹಿಸಿ ಇತ್ಯರ್ಥಪಡಿಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.