ಚಿಂತಾಮಣಿ: ನಗರದ ನೂತನ ಸರ್ಕಾರಿ ಪ್ರೌಢಶಾಲೆ ರೂಪಿಸಿರುವ ‘ನಮ್ಮ ಶಾಲೆ ನಮ್ಮ ಪ್ರಪಂಚ’ ಕಾರ್ಯಕ್ರಮಕ್ಕೆ ವಿವಿಧ ಸಂಘಸಂಸ್ಥೆಗಳು ಹಾಗೂ ದಾನಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಕ್ಷಾಂತರ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳು ಪೂರ್ಣಗೊಂಡಿದ್ದು ಶಾಲೆಗೆ ಹೊಸ ರೂಪ ಬಂದಿದೆ.
ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಶಿಸ್ತು, ಬದ್ಧತೆ, ಕಾಳಜಿಯಿಂದ ಕೆಲಸ ಮಾಡಿದರೆ ಸರ್ಕಾರಿ ಶಾಲೆ ಯಾವ ರೂಪ ಪಡೆಯುತ್ತದೆ ಎಂಬುದಕ್ಕೆ ನೂತನ ಸರ್ಕಾರಿ ಪ್ರೌಢಶಾಲೆ ಸಾಕ್ಷಿಯಾಗಿದೆ. ಕಾರ್ಯಕ್ರಮ ಜಾರಿಯಾದ ನಂತರ ಶಾಲೆಯ ಶ್ರೇಯೋಭಿವೃದ್ಧಿಗೆ ವಿವಿಧ ಸಂಘಸಂಸ್ಥೆಗಳು, ದಾನಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿವಿಧ ಕಾರ್ಪೋರೇಟ್ ಕಂಪನಿಗಳು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದೆ.
ನಗರದ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ 600 ವಿದ್ಯಾರ್ಥಿಗಳು ಓದುತ್ತಿದ್ದಾರೆ. 16 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಅತ್ಯಂತ ಹೆಚ್ಚಿನ ವಿದ್ಯಾರ್ಥಿಗಳಿರುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಗರದ ವೆಂಕಟಗಿರಿಕೋಟೆಯಲ್ಲಿರುವ ನೂತನ ಸರ್ಕಾರಿ ಪ್ರೌಢಶಾಲೆ 6 ವರ್ಷಗಳ ಹಿಂದೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಒಂದಾಗಿತ್ತು. ಕೊಠಡಿ ಚಾವಣಿ ಸೋರುತ್ತಿತ್ತು. ಕಿಟಕಿ, ಬಾಗಿಲುಗಳು ಕಿತ್ತು ಹೋಗಿದ್ದವು. ನೆಲದ ಸಿಮೆಂಟ್ ಸಹ ಅಲ್ಲಲ್ಲಿ ಕಿತ್ತು ಹೋಗಿತ್ತು. ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿರುವ ಮುಖ್ಯ ಶಿಕ್ಷಕ ಮಂಜುನಾಥ್ ಇಲ್ಲಿಗೆ ವರ್ಗಾವಣೆಯಾಗಿ ಬಂದ ನಂತರ ಸರ್ಕಾರಿ ಶಾಲೆಗೆ ಹೊಸ ರೂಪ ಕೊಡುವ ಕನಸು ಕಂಡರು.
ಬೆಂಗಳೂರಿನ ವಿವಿಧ ಕಾರ್ಪೋರೇಟ್ ಕಂಪನಿಗಳನ್ನು ಸಂಪರ್ಕಿಸಿದರು. ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರನ್ನು ಶಾಲೆ ಆಹ್ವಾನಿಸಿ ಕಾರ್ಯಕ್ರಮದ ರೂಪುರೇಷೆ ವಿವರಿಸಿ ನೆರವು ಕೋರಿದರು.
ಬೆಂಗಳೂರಿನ ‘ಓ ಸಾಟ್’ ಕಂಪನಿಯು ಸುಮಾರು ₹1.5 ಕೋಟಿ ವೆಚ್ಚದಲ್ಲಿ 6 ಕೊಠಡಿ ಮತ್ತು ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಆಧುನಿಕ ಸೌದಭ್ಯದ ಶೌಚಾಲಯ ನಿರ್ಮಿಸಿಕೊಟ್ಟಿದೆ.
ಬೆಂಗಳೂರಿನ ಟ್ರಿನಿಟಿ ಕೇರ್ ಫೌಂಡೇಷನ್ ವತಿಯಿಂದ ಇಡೀ ಶಾಲೆಗೆ ₹40 ಲಕ್ಷ ವೆಚ್ಚದಲ್ಲಿ ಸೋಲಾರ್ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ವಿದ್ಯುತ್ ಬಿಲ್ ಪಾವತಿಸುವ ಅಥವಾ ವಿದ್ಯುತ್ ಕಡಿತದ ಸಮಸ್ಯೆ ದೂರವಾಗಿದೆ. 12 ಕಂಪ್ಯೂಟರ್ ಹಾಗೂ ಶಿಕ್ಷಕರನ್ನು ನೀಡಿದೆ. ಕಂಪ್ಯೂಟರ್ ಶಿಕ್ಷಕರಿಗೆ ವೇತನವನ್ನು ಅವರೇ ಭರಿಸುತ್ತಿದ್ದಾರೆ.
ಮಹಾರಾಷ್ಟ್ರದ ಅಂತಲಜಿ ಮತ್ತು ಚೈಲ್ಡ್ ಹೆಲ್ತ್ ಫೌಂಡೇಶನ್ ವತಿಯಿಂದ ಹಳೆ ಶಾಲಾ ಕೊಠಡಿಗಳಿಗೆ ಶಿಥಿಲಗೊಂಡಿದ್ದ ಕಿಟಕಿ, ಬಾಗಿಲು, ಟೈಲ್ಸ್, ಪ್ರತಿ ಕೊಠಡಿಗೆ ತಲಾ 2 ಪ್ಯಾನ್ ಮತ್ತು 3 ಟ್ಯೂಬ್ ಲೈಟ್ ಹಾಕಿಸಿಕೊಟ್ಟಿದೆ.
ಬೆಂಗಳೂರಿನ ವ್ಯಾಬ್ ಟೆಕ್ ಕಂಪನಿಯವರು ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಸ್ಟೆಮ್ ಲ್ಯಾಬ್ ಸ್ಥಾಪನೆ, ಶೌಚಾಲಯಗಳ ರಿಪೇರಿ ಮಾಡಿಕೊಟ್ಟಿದ್ದಾರೆ.
ಶ್ರೀರಾಮನಾಗ ಫೌಂಡೇಷನ್‌ನ ಎನ್ ಜಯರಾಂ ₹7.5 ಲಕ್ಷ ವೆಚ್ಚದಲ್ಲಿ ಅಕ್ಷರ ದಾಸೋಹ ಅಡುಗೆ ಕೊಠಡಿ ಮತ್ತು ದಾಸ್ತಾನು ಕೊಠಡಿ ನಿರ್ಮಿಸಿಕೊಟ್ಟಿದ್ದಾರೆ.
ಬೆಂಗಳೂರಿನ ರೋಟರಿ ಸಂಸ್ಥೆ ಕುಡಿಯುವ ನೀರಿನ ದೊಡ್ಡ ಪ್ಲಾಂಟ್ ನಿರ್ಮಿಸಿಕೊಟ್ಟಿದೆ. ಜತೆಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿಕೊಟ್ಟಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್, ಟೀಚಿಂಗ್ ಇಂಟ್ರಾಕ್ಟಿವ್ ಪ್ಯಾನಲ್, ಸ್ಮಾರ್ಟ್ ಕ್ಲಾಸ್ ತರಗತಿಗಳ ಸ್ಥಾಪನೆ ಮಾಡಿಸಿಕೊಟ್ಟಿದ್ದಾರೆ. ಕಾರ್ಪೋರೇಟ್ ಸಂಸ್ಥೆಗಳ ಕೊಡುಗೆಗೂ ಸಹಕಾರ ನೀಡಿದ್ದಾರೆ ಎಂದು ಮುಖ್ಯ ಶಿಕ್ಷಕ ಮಂಜುನಾಥ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಟ್ರಸ್ಟ್‌ನ ಉಶಾಶೆಟ್ಟಿ ಮಳೆ ನೀರಿನ ಸಂಗ್ರಹ, ನೀರಿನ ಸಂಪ್ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಬುಕ್ಸ್, ಲೇಖನ ಸಾಮಗ್ರಿ ನೀಡಿದ್ದಾರೆ.
ಬೆಂಗಳೂರಿನ ಗ್ಲೋಬಲ್ ಫೌಂಡ್ರೀಸ್ ವತಿಯಿಂದ 5 ಕಂಪ್ಯೂಟರ್, ಶಾಲೆಯ ಎಲ್ಲ 625 ಮಕ್ಕಳಿಗೆ ಸಮವಸ್ತ್ರ, ಬ್ಯಾಗ್, ನೋಟ್ ಪುಸ್ತಕ ಪ್ರತಿವರ್ಷ ನೀಡುತ್ತಿದೆ.
ಲಕ್ಷ್ಮೀ ಗ್ರೂಪ್ ಕಂಪನಿಯ ಸುರೇಂದ್ರರೆಡ್ಡಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ತಲಾ 12ರಂತೆ ಅರುಣ್ ಗೋಲ್ಡ್ ನೋಟ್ ಬುಕ್, ಶಾಲಾ ಬ್ಯಾಗ್ ಹಾಗೂ ಇತರೆ ಲೇಖನ ಸಾಮಗ್ರಿ ನೀಡಿದ್ದಾರೆ ಎಂದು ಮುಖ್ಯ ಶಿಕ್ಷಕರು ಹೇಳಿದರು.
ಸಂತೃಪ್ತಿ ಇದೆ:
ವಿವಿಧ ಸಂಸ್ಥೆ ಹಾಗೂ ದಾನಿಗಳನ್ನು ಸಂಪರ್ಕಿಸಿ ಸರ್ಕಾರಿ ಶಾಲೆಗೆ ಸಹಾಯ ಕೋರಿದ್ದೇವೆ. ಅಭಿವೃದ್ಧಿ ಕಾಮಗಾರಿಗಳನ್ನು ಅವರಿಂದಲೇ ಮಾಡಿಸಿದ್ದೇವೆ. ವಸ್ತುಗಳನ್ನು ದಾನವಾಗಿ ಪಡೆದಿದ್ದೇವೆ. ಶಾಲೆಯ ಚಟುವಟಿಕೆಗಳನ್ನು ಕಂಡು ಸ್ವಯಂಪ್ರೇರಿತರಾಗಿ ಸಹಾಯ ಮಾಡಿದ್ದಾರೆ. ನಗದು ರೂಪದಲ್ಲಿ ಸಹಾಯ ಸ್ವೀಕರಿಸಿಲ್ಲ. ಖಾಸಗಿ ಶಾಲೆಯನ್ನು ಮೀರಿಸುವಂತೆ ಬದಲಾವಣೆ ಮಾಡಿರುವ ಸಂತೃಪ್ತಿ ಇದೆ ಎಂದು ಮುಖ್ಯ ಶಿಕ್ಷಕ ಮಂಜುನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.