ADVERTISEMENT

ವಿಭಿನ್ನ ರುಚಿ ಪರಿಚಯಿಸಿದ ಆಹಾರ ಮೇಳ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 3:20 IST
Last Updated 9 ಮಾರ್ಚ್ 2021, 3:20 IST
ಮೇಳ ಉದ್ದೇಶಿಸಿ ಮಾತನಾಡಿದ ಸಿ. ಗಂಗಲಕ್ಷ್ಮಮ್ಮ
ಮೇಳ ಉದ್ದೇಶಿಸಿ ಮಾತನಾಡಿದ ಸಿ. ಗಂಗಲಕ್ಷ್ಮಮ್ಮ   

ಗೌರಿಬಿದನೂರು: ನಗರದ ಶ್ರೀಶನೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಸಮೃದ್ಧಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ರುಚಿ ರುಚಿಯ ತಂಬಿಟ್ಟು ಹಾಗೂ ವೈವಿಧ್ಯಮಯ ತಿಂಡಿ ತಿನಿಸುಗಳ ಮೇಳಕ್ಕೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ವಿ. ಶಿವಶಂಕರ್ ಚಾಲನೆ ನೀಡಿದರು.

ಈ ತಿಂಡಿ ಮೇಳವು ತಾಲ್ಲೂಕಿನ ಜನತೆಗೆ ವೈವಿಧ್ಯಮಯ ಖಾದ್ಯಗಳ ರುಚಿಯ ವಿನೂತನ ಅನುಭವ ನೀಡುವ ಜತೆಗೆ ಮನೆ ಮನೆಗಳಲ್ಲಿ ಮಾಡುವ ತಂಬಿಟ್ಟು, ಹಪ್ಪಳ, ಚಕ್ಕುಲಿ, ಕೋಡುಬಳೆ, ರವೆ ಉಂಡೆ, ಬುರುಗುಂಡೆ, ಮದ್ದೂರು ವಡೆ ಸೇರಿದಂತೆ ಇನ್ನಿತರ ಅನೇಕ ವೈವಿಧ್ಯಮಯ ತಿಂಡಿಗಳ ರುಚಿ ಎಲ್ಲರಿಗೂ ವಿಶೇಷ ಅನುಭವ ನೀಡಿತು.

ಬಳಿಕ ಮಾತನಾಡಿದ ಶಿವಶಂಕರ್, ಯಾವ ದೇಶವು ಹೆಣ್ಣುಮಕ್ಕಳಿಗೆ ಗೌರವ ಹಾಗೂ ಮರ್ಯಾದೆ ಕೊಡುತ್ತದೆಯೋ ಅಂತಹ ದೇಶ ಸಂತೋಷ ಹಾಗೂ ಸುಭದ್ರತೆಯಿಂದ ಇರುತ್ತದೆ. ಹೆಣ್ಣಿಗೆ ಗೌರವ ಕೊಡುವುದರಲ್ಲಿ ಭಾರತ ಉನ್ನತ ಸ್ಥಾನದಲ್ಲಿದೆ. ಹಾಗೆಯೇ ಆಧುನಿಕ ಕಾಲದಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲೂ ಮುಂದೆ ಇದ್ದಾರೆ. ಸ್ವತಂತ್ರವಾಗಿ ಹಾಗೂ ಸ್ವಾವಲಂಬಿಯಾಗಿ ಇಂತಹ ಮೇಳಗಳಲ್ಲಿ ಅವರ ವೈಶಿಷ್ಟ್ಯತೆಯನ್ನು ಇತರರಿಗೂ ತೋರಿಸುವುದರ ಮುಖಾಂತರ ಬೆಳವಣಿಗೆಯಾಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ADVERTISEMENT

ಇದೇ ವೇಳೆ ಆಹಾರ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಈ‌ ಭಾಗದ ಮಹಿಳೆಯರಿಗೆ ಒದಗಿಸುವುದಾಗಿ ಭರವಸೆ ನೀಡಿದರು.

ಸಮೃದ್ಧಿ ಮಹಿಳಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷೆ ಸಿ. ಗಂಗಲಕ್ಷ್ಮಮ್ಮ ಮಾತನಾಡಿ, ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕಾಗಿದೆ. ಮಹಿಳೆಯರ ಪ್ರತಿಭೆ ಹಾಗೂ ಕಲೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿಯಾಗುವ ಮೂಲಕ ಇತರ ಎಲ್ಲ ರಂಗಗಳಲ್ಲಿ ಮುಂದುವರಿಯಬೇಕು. ಇದಕ್ಕಾಗಿ ಇಂತಹ ಆಹಾರ ಮೇಳಗಳು ಸಹಕಾರಿಯಾಗಲಿವೆ ಎಂದು ಹೇಳಿದರು

ಮೇಳದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ, ವಕೀಲ ಧನಂಜಯ್, ನಿವೃತ್ತ ಪ್ರಾಧ್ಯಾಪಕ ವರಾಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.