ADVERTISEMENT

ಕಲ್ಲುಪುಡಿ ಘಟಕ: ಎಸಿ ಸ್ಥಳ ಪರಿಶೀಲನೆ, ಎಸಿ ನೇತೃತ್ವದಲ್ಲಿ ಜಂಟಿ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 4:02 IST
Last Updated 20 ಮಾರ್ಚ್ 2021, 4:02 IST
ಕೋಟಗಲ್ ಬಳಿ ಕಲ್ಲುಪುಡಿ ಘಟಕ ಆರಂಭಕ್ಕೆ ಅನುಮತಿ ಕೊಡಬಾರದೆಂದು ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡವನ್ನು ಒತ್ತಾಯಿಸಿದ ಗ್ರಾಮಸ್ಥರು
ಕೋಟಗಲ್ ಬಳಿ ಕಲ್ಲುಪುಡಿ ಘಟಕ ಆರಂಭಕ್ಕೆ ಅನುಮತಿ ಕೊಡಬಾರದೆಂದು ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡವನ್ನು ಒತ್ತಾಯಿಸಿದ ಗ್ರಾಮಸ್ಥರು   

ಸಾದಲಿ: ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದ ಸಮೀಪ ಕೋಟಗಲ್ ಬಳಿ ವೆಂಕಟೇಶ್ವರ ಸ್ಟೋನ್ ಕ್ರಷರ್‌ನವರು ಕಲ್ಲುಪುಡಿ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶದಂದತೆ ಉಪವಿಭಾಗಾಧಿಕಾರಿ ಸ್ಥಳ ಪರಿಶೀಲನೆ ಮಾಡಿದರು.

ಘಟಕ ಸ್ಥಾಪನೆ ವಿರೋಧಿಸಿ ಗ್ರಾಮಸ್ಥರು ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಸ್ಥಳ ಮರುಪರಿಶೀಲನೆ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದರು.

‘ಸುಪ್ರೀಂಕೋರ್ಟ್ ಯಾವುದೇ ಡೀಮ್ಡ್ ಫಾರೆಸ್ಟ್‌ನಲ್ಲಿ ಕಲ್ಲು ಗಣಿಗಾರಿಕೆಯನ್ನು ಮಾಡಬಾರದೆಂದು ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಇದು ಮಾಡಿರುವುದು ನ್ಯಾಯವೇ’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ADVERTISEMENT

ಸಾದಲಿ ಗ್ರಾಮದ ಸರ್ವೆ ನಂಬರ್ 72ರಲ್ಲಿ ಕಲ್ಲುಪುಡಿ ಘಟಕ ಸ್ಥಾಪಿಸಲು ಸ್ಥಳ ಸೂಕ್ತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಡಿವೈಎಸ್ಪಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಂಜುಂಡಸ್ವಾಮಿ, ಜಿಲ್ಲಾ ಅರಣ್ಯಾಧಿಕಾರಿ ಹರಿಸಾಲನ್ ಹಾಗೂ ಶಿಡ್ಲಘಟ್ಟ ವಲಯಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಒಳಗೊಂಡ ಅಧಿಕಾರಿಗಳ ತಂಡ ಸ್ಥಳ ಮರು ಪರಿಶೀಲನೆ ನಡೆಸಿದರು.

ಉಪವಿಭಾಗಾಧಿಕಾರಿ ರಘುನಂದನ್ ಮಾತನಾಡಿ, ‘ಜಿಲ್ಲಾಧಿಕಾರಿಯವರ ಆದೇಶದಂತೆ ನಾನು ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಇಲಾಖೆ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿದ್ದೇವೆ. ಕಲ್ಲುಪುಡಿ ಘಟಕ ಸ್ಥಾಪನೆಗೆ ಅನುಮತಿ ನೀಡಬಾರದೆಂದು ತಕರಾರು ತೆಗೆದಿರುವ ಗ್ರಾಮಸ್ಥರ ಹೇಳಿಕೆಗಳನ್ನು ಸಹ ಪಡೆದುಕೊಂಡಿದ್ದೇವೆ. ಈ ಎಲ್ಲಾ ಮಾಹಿತಿ ಪ್ರಕಾರ ಎಲ್ಲವೂ ರೈತರ ಪರವಾಗಿದ್ದು ವಾಸ್ತವ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.