ಬಾಗೇಪಲ್ಲಿ: ಡಾ.ಎಚ್.ಎನ್.ವೃತ್ತದ ಚರಂಡಿಗಳಲ್ಲಿ ಹೂಳು, ಕಸ ತುಂಬಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಸಣ್ಣ ಕೆರೆಯಂತಾಗಿದ್ದ ಚರಂಡಿಗಳನ್ನು ಪುರಸಭಾ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಲೆಕ್ಕಾಧಿಕಾರಿ ಶ್ರೀಧರ್, ಕಂದಾಯ ಅಧಿಕಾರಿ ಅಥಾವುಲ್ಲಾ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಪರಿಶೀಲನೆ ಮಾಡಿ, ಯಂತ್ರದಿಂದ ಚರಂಡಿಗಳಲ್ಲಿ ತುಂಬಿದ್ದ ಕಸ, ಹೂಳನ್ನು ಹೊರತೆಗೆದು ಸ್ವಚ್ಛತೆ ಮಾಡಿಸಿದರು.
ಭಾರಿ ಮಳೆ, ಡಾ.ಎಚ್.ಎನ್.ವೃತ್ತ ಜಲಾವೃತ, ರಸ್ತೆಗೆ ಹರಿದ ಚರಂಡಿ ನೀರು ಶೀರ್ಷಿಕೆಯಲ್ಲಿ ಮೇ 15 ರಂದು ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಸುದ್ದಿ ಪ್ರಕಟ ಆಗಿತ್ತು.
ಪಟ್ಟಣದ ಗೂಳೂರು ರಸ್ತೆ, ಮಿನಿ ಕ್ರೀಡಾಂಗಣದ ಎತ್ತರ ಪ್ರದೇಶದಿಂದ ವಾಲ್ಮೀಕಿ ನಗರದ ಚರಂಡಿಗಳಲ್ಲಿ ಮಳೆಯ ನೀರು ಹರಿದು ಡಾ.ಎಚ್.ಎನ್.ವೃತ್ತದ ಚರಂಡಿಗೆ ಹರಿಯುತ್ತದೆ. ಅನೇಕ ವರ್ಷಗಳಿಂದ ವೃತ್ತದ ಚರಂಡಿಗಳನ್ನು ಸ್ವಚ್ಛತೆ ಮಾಡಿಲ್ಲ. ಅಂಗಡಿಯವರು ಪ್ಲಾಸ್ಟಿಕ್, ಕಸ ಸುರಿದಿರುವುದರಿಂದ ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಮಳೆ ಬಂದಾಗ ಚರಂಡಿಯ ನೀರು ರಸ್ತೆಗೆ ಹರಿಯುತ್ತಿತ್ತು.
5 ದಿನಗಳಿಂದ ನಿರಂತರವಾಗಿ ಮಳೆ ಬಿದ್ದ ಕಾರಣ ಡಾ.ಎಚ್.ಎನ್.ವೃತ್ತ ಜಲಾವೃತ ಆಗಿತ್ತು. ಗುಂಡಿಗಳಲ್ಲಿ ಮಳೆ, ಕಲುಷಿತ ನೀರು ಆವರಿಸಿತ್ತು. ವಾಹನ ಸವಾರರು, ಜನರು ಮಳೆ, ಕಲುಷಿತ ನೀರಿನಲ್ಲಿ ಸಂಚರಿಸಲು ಪರದಾಡಿದ್ದರು.
ಮಳೆಯಿಂದ ಡಾ.ಎಚ್.ಎನ್.ವೃತ್ತದ ಚರಂಡಿಗಳನ್ನು ಸ್ವಚ್ಛತೆ ಮಾಡಿಸಲು ಆಗಿಲ್ಲ. ಆಡಳಿತ ಮಂಡಳಿ ಜೊತೆ ಚರ್ಚೆ ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.