ADVERTISEMENT

ಜನಪದ ಕಲೆ ಉಳಿಸಲು ಸಲಹೆ: ತಹಶೀಲ್ದಾರ್ ವೆಂಕಟೇಶಯ್ಯ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:37 IST
Last Updated 29 ಮೇ 2022, 4:37 IST
ಚಿಂತಾಮಣಿ ತಾಲ್ಲೂಕಿನ ಅಟ್ಟೂರಿನ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ಪಡೆದ ಮಕ್ಕಳು
ಚಿಂತಾಮಣಿ ತಾಲ್ಲೂಕಿನ ಅಟ್ಟೂರಿನ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ಪಡೆದ ಮಕ್ಕಳು   

ಚಿಂತಾಮಣಿ: ‘ಗ್ರಾಮೀಣ ಭಾಗದ ಜನಪದ ಕಲೆಗಳನ್ನು ಪುನರುಜ್ಜೀವನಗೊಳಿಸಬೇಕಿದೆ’ ಎಂದು ನಿವೃತ್ತ ತಹಶೀಲ್ದಾರ್ ವೆಂಕಟೇಶಯ್ಯ ಸಲಹೆ ನೀಡಿದರು.

ತಾಲ್ಲೂಕಿನ ಅಟ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್‌ನ ತಾಲ್ಲೂಕು ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಪದ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೂರ್ವಿಕರ ಕಾಲದಲ್ಲಿ ಹಲವಾರು ಕಲೆಗಳಿದ್ದವು. ಗ್ರಾಮಗಳಲ್ಲಿ ಹಲಗೆ ಒಡೆಯುವುದು, ಸೋಬಾನೆ ಪದ ಹಾಡುವುದು, ಕುಂಬಾರ ಮಡಿಕೆ ಮಾಡುವುದು, ಗದ್ದೆ, ತೋಟ, ಹೊಲಗಳಲ್ಲಿ ಕೃಷಿಯಲ್ಲಿ ತೊಡಗಿದ್ದವರು ಹಾಡುತ್ತಿದ್ದ ಹಾಡುಗಳು ಜನಪದ ಕಲೆಗಳಲ್ಲಿ ಸೇರುತ್ತವೆ. ಪ್ರಾಚೀನ ಹಾಗೂ ಗ್ರಾಮೀಣ ಸೊಗಡಿನ ಜನಪದ ಕಲೆಯು ಆಧುನಿಕ ಮತ್ತು ಉದಾರೀಕರಣದ ಯುಗದಲ್ಲಿ ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು.

ADVERTISEMENT

ಜನಪದ ಕಲೆಯನ್ನು ಉಳಿಸಿಕೊಳ್ಳಲು ಕರ್ನಾಟಕ ಜಾನಪದ ಪರಿಷತ್ ಸಂಘಟನೆಯನ್ನು ಹುಟ್ಟುಹಾಕಲಾಗಿದೆ. ಪರಿಷತ್ ಅಧ್ಯಕ್ಷ ತಿಮ್ಮೇಗೌಡ ಜನಪದ ಕಲೆಗಳನ್ನು ಪುನರುಜ್ಜೀವನಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು
ತಿಳಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷೆ ಲೀಲಾ ಲಕ್ಷ್ಮೀನಾರಾಯಣ್ ಮಾತನಾಡಿ, ಜನಪದ ಕಲೆಯನ್ನು ಉಳಿಸಿ ಬೆಳೆಸಲು ಡಾ.ಎಚ್.ಎಲ್. ನಾಗೇಗೌಡ ಶ್ರಮಿಸಿದ್ದಾರೆ. ರಾಮನಗರದಲ್ಲಿ 10 ಎಕರೆ ಸ್ಥಳದಲ್ಲಿ ಜಾನಪದ ಲೋಕ ಸ್ಥಾ‍ಪಿಸಿದ್ದಾರೆ. ಜನಪದ ಸಂಸ್ಕೃತಿಯ ವೈವಿಧ್ಯತೆಯನ್ನು ಪ್ರಸ್ತುತಪಡಿಸಿದ್ದಾರೆ ಎಂದರು.

‘ಅಮ್ಮಾನ ಮನೆಯಿಂದ ಅತ್ತೇಯ ಮನೆಗೋಗಿ ಮುತ್ತಂತೆ ಬಾಳಮ್ಮ’ ಮತ್ತು ‘ಕುದರೇನ ತಂದ್ವೀನಿ’ ಎಂಬ ಜನಪದ ಹಾಡುಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು.

ಜನಪದ ಗಾಯನದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯಶಿಕ್ಷಕ ಶಮೀಉಲ್ಲಾ, ಯುವಕ ಸಂಘದ ಕಾರ್ಯದರ್ಶಿ ವೆಂಕಟೇಶ್, ಶಿಕ್ಷಕರಾದ ಮಲ್ಲಪ್ಪ, ವೈ.ಎಂ. ಅನಿತಾ, ಆರ್. ಇಂದುಮತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.