ADVERTISEMENT

ರಾಸು ಸಾಕಣೆ: ವೈಜ್ಞಾನಿಕ ಪದ್ಧತಿಗೆ ಸಲಹೆ

ಪಶುಪಾಲನ ಇಲಾಖೆಯಿಂದ ಜಾನುವಾರು ಫಲೀಕರಣ ಉಚಿತ ಶಿಬಿರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 5:20 IST
Last Updated 4 ಫೆಬ್ರುವರಿ 2021, 5:20 IST
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಾನುವಾರು ಫಲೀಕರಣ ಉಚಿತ ಶಿಬಿರ ಆಯೋಜಿಸಲಾಗಿತ್ತು
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಾನುವಾರು ಫಲೀಕರಣ ಉಚಿತ ಶಿಬಿರ ಆಯೋಜಿಸಲಾಗಿತ್ತು   

ಶಿಡ್ಲಘಟ್ಟ: ಉತ್ತಮವಾದ ಆಹಾರ ನಿರ್ವಹಣೆ ಸೇರಿದಂತೆ ರೋಗರುಜಿನ ಬಾರದಂತೆ ಕಾಲಕಾಲಕ್ಕೆ ಲಸಿಕೆ ಹಾಕಿಸುವ ಮೂಲಕ ವೈಜ್ಞಾನಿಕ ಪದ್ಧತಿಯಲ್ಲಿ ರಾಸುಗಳನ್ನು ಸಾಕಿದ್ದೇ ಆದಲ್ಲಿ ರೈತರು ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಸಹಕಾರಿಯಾಗುತ್ತದೆ ಎಂದು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್ ತಿಳಿಸಿದರು.

ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಪಶುಪಾಲನ ಇಲಾಖೆ ಮತ್ತು ಪಶು ವೈದ್ಯಕೀಯ ಇಲಾಖೆ ಮೇಲೂರು, ಮೇಲೂರು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಭಾರತೀಯ ಸೀನಿಯರ್ ಚೇಂಬರ್ ವಿಜಯಪುರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಜಾನುವಾರು ಫಲೀಕರಣ ಉಚಿತ ಶಿಬಿರದಲ್ಲಿ ಅವರು ಮಾತನಾಡಿದರು.

ಲವಣಾಂಶಗಳ ಕೊರತೆ, ಹಾರ್ಮೋನ್‌ಗಳ ಕೊರತೆ ಸೇರಿದಂತೆ ಹಸು ಬೆದೆಗೆ (ಹೀಟ್ ಡಿಟೆಕ್ಷನ್) ಬರುವುದನ್ನು
ಸರಿಯಾಗಿ ಪತ್ತೆ ಹಚ್ಚದೇ ಸೆಮೆನ್ ನೀಡುವುದರಿಂದ ಬಹುತೇಕ ಹಸುಗಳಲ್ಲಿ ಕರು ಹಾಕಿ ಎರಡು ಮೂರು ವರ್ಷವಾದರೂ ಫಲ ನಿಲ್ಲುವುದಿಲ್ಲ ಎಂದರು.

ADVERTISEMENT

ಪ್ರತಿಯೊಬ್ಬ ರೈತರು ತಮ್ಮ ಹಸುಗಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಲಾಖೆಯಿಂದ ಆಯೋಜಿಸಲಾಗುವ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶಿಬಿರದಲ್ಲಿ ಫಲ ನಿಲ್ಲದೇ ಇರುವ ಸುಮಾರು 72 ರಾಸುಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಉಚಿತವಾಗಿ ಔಷಧಿಗಳನ್ನು ನೀಡಲಾಯಿತು.

ಮೇಲೂರು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ತಿಮ್ಮರಾಜು, ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಲಕ್ಷ್ಮಣ್, ಪಶು ವೈದ್ಯಾಧಿಕಾರಿಗಳಾದ ಡಾ.ಮುನಿಸ್ವಾಮಿಗೌಡ, ಡಾ.ವಿನೋದ್, ಮೇಲೂರು ಎಂಪಿಸಿಎಸ್‌ನ ಅಧ್ಯಕ್ಷ, ಉಪಾಧ್ಯಕ್ಷರೂ ಸೇರಿದಂತೆ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.