ADVERTISEMENT

ಸಾವಯವ ಗೊಬ್ಬರ ಬಳಸಲು ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 5:04 IST
Last Updated 16 ನವೆಂಬರ್ 2020, 5:04 IST
ಚಿಂತಾಮಣಿ ತಾಲ್ಲೂಕಿನ ಬೀರ್ಜೇನಹಳ್ಳಿಯಲ್ಲಿ ಆಯೋಜಿಸಿದ್ದ ಮಣ್ಣು ಅಭಿಯಾನ ಬೆಳೆ ಕ್ಷೇತ್ರೋತ್ಸವದಲ್ಲಿ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು
ಚಿಂತಾಮಣಿ ತಾಲ್ಲೂಕಿನ ಬೀರ್ಜೇನಹಳ್ಳಿಯಲ್ಲಿ ಆಯೋಜಿಸಿದ್ದ ಮಣ್ಣು ಅಭಿಯಾನ ಬೆಳೆ ಕ್ಷೇತ್ರೋತ್ಸವದಲ್ಲಿ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು   

ಚಿಂತಾಮಣಿ: ‘ರೈತರು ರಸಗೊಬ್ಬರದ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಗೊಬ್ಬರ ಹಾಗೂ ಲಘು ಪೋಷಕಾಂಶಗಳನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಶ್ರೀನಿವಾಸ್ ಸಲಹೆ ನೀಡಿದರು.

ತಾಲ್ಲೂಕಿನ ಕೈವಾರ ಹೋಬಳಿಯ ಬೀರ್ಜೇನಹಳ್ಳಿಯಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಮಣ್ಣು ಆರೋಗ್ಯ ಅಭಿಯಾನ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಬೆಳೆ ಬೆಳೆಯಲು, ಹೆಚ್ಚಿನ ಇಳುವರಿ ಪಡೆಯಲು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಮಣ್ಣು ಫಲವತ್ತತೆ ಹೊಂದಿದ್ದರೆ ಮಾತ್ರ ಒಳ್ಳೆಯ ಬೆಳೆಯಾಗುತ್ತದೆ. ಅಧಿಕ ಇಳುವರಿಯ ಆಸೆಯಿಂದ ಯಥೇಚ್ಛವಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸುವುದರಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ ಎಂದರು.

ADVERTISEMENT

ರೈತರು ಮಣ್ಣು ಪರೀಕ್ಷೆ ಮಾಡಿಸಿಕೊಂಡು ಕೃಷಿ ವಿಜ್ಞಾನಿಗಳು ಅಥವಾ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆಯಂತೆ ಬೆಳೆಗಳನ್ನು ಬೆಳೆಯಬೇಕು. ಕೃಷಿ ಇಲಾಖೆಯುತಾಂತ್ರಿಕ ಸಲಹೆ ನೀಡುತ್ತದೆ. ಬೆಳೆಯಿಂದ ಬೆಳೆಗೆ ಮಣ್ಣನ್ನು ತಿರುಗಿಸಬೇಕು ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ತನ್ವೀರ್ ಮಾತನಾಡಿ, ಸಾವಯವ ಕೃಷಿ ಅಳವಡಿಸಿಕೊಂಡರೆ ಉತ್ತಮ ಇಳುವರಿ ಬರುತ್ತದೆ. ಮಣ್ಣಿನ ಸಂರಕ್ಷಣೆ ಹಾಗೂ ಉತ್ತಮ ಬೆಳೆಗೆ ಜೀವಾಮೃತ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ವಿಜ್ಞಾನಿ ಸಿಂಧು ಮಾತನಾಡಿ, ಪೌಷ್ಟಿಕ ತೋಟದಿಂದ ಆರೋಗ್ಯಕರ ಆಹಾರ ದೊರೆಯುತ್ತದೆ. ರೈತರು ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯಬೇಕು. ಅದರ ಉತ್ಪನ್ನಗಳನ್ನು ಸೇವಿಸುವವರು ಆರೋಗ್ಯವಾಗಿರುತ್ತಾರೆ. ರೈತರು ಪೂರ್ವಿಕರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಗ್ರಾಮದ ಸೊಣ್ಣಮ್ಮ ರಾಮಕೃಷ್ಣಪ್ಪ ಎಂಬುವವರ ತೊಗರಿ ಬೆಳೆಯಲ್ಲಿ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿತ್ತು. ಅವರು ಒಂದು ಹೆಕ್ಟೇರ್ ವಿಸ್ತೀರ್ಣದಲ್ಲಿ ನಾಟಿ ಪದ್ಧತಿಯಲ್ಲಿ 6*3 ಅಡಿ ಅಂತರದಲ್ಲಿ ಬಿಆರ್‌ಜಿ-5 ತಳಿ ಬೆಳೆದಿರುವ ಕುರಿತು ಭಾಗವಹಿಸಿದ್ದ ರೈತರು ಸಂವಾದ ನಡೆಸಿದರು.

ಕೃಷಿ ಅಧಿಕಾರಿ ಎಂ.ಸಿ. ಪ್ರಸಾದ್, ರಂಗ ನರಸಿಂಹಪ್ಪ, ಆತ್ಮ ಯೋಜನೆಯ ಶ್ವೇತಾ, ದೇವರಾಜ್ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.