ADVERTISEMENT

ಸೌಹಾರ್ದವಾಗಿ ಬಾಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 3:37 IST
Last Updated 24 ನವೆಂಬರ್ 2020, 3:37 IST
ಶಿಡ್ಲಘಟ್ಟದ ಬಿ.ಆರ್.ಸಿ ಕೇಂದ್ರದಲ್ಲಿ ನಡೆದ ಭಾಷಾ ಸೌಹಾರ್ದತಾ ದಿನದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಶ್ರೀನಿವಾಸ್ ಮಾತನಾಡಿದರು
ಶಿಡ್ಲಘಟ್ಟದ ಬಿ.ಆರ್.ಸಿ ಕೇಂದ್ರದಲ್ಲಿ ನಡೆದ ಭಾಷಾ ಸೌಹಾರ್ದತಾ ದಿನದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಶ್ರೀನಿವಾಸ್ ಮಾತನಾಡಿದರು   

ಶಿಡ್ಲಘಟ್ಟ: ವೈವಿಧ್ಯವಾದ ಭಾಷೆ, ವೇಷ, ಆಹಾರ, ಸಂಸ್ಕೃತಿ ಹೊಂದಿದ ಭಾರತದಲ್ಲಿ ಸೌಹಾರ್ದ, ಏಕತೆಗೆ ಮನ್ನಣೆ ನೀಡಲಾಗಿದೆ. ಇದರಿಂದಾಗಿ ದೇಶ ಜಗತ್ತಿನಲ್ಲಿಯೇ ವಿಶಿಷ್ಟವೆನಿಸಿದ್ದು, ಸುಸಂಸ್ಕೃತಿಗೆ ಹೆಸರಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಶ್ರೀನಿವಾಸ್ ತಿಳಿಸಿದರು.

ರಾಷ್ಟ್ರೀಯ ಏಕತಾ ಸಪ್ತಾಹದ ಅಂಗವಾಗಿ ನಗರದ ಬಿ.ಆರ್.ಸಿ ಕೇಂದ್ರದಲ್ಲಿ ಇತ್ತೀಚೆಗೆ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ಭಾಷಾ ಸೌಹಾರ್ದತಾ ದಿನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಏಕತಾ ಸಪ್ತಾಹ ಆಚರಣೆ ಮೂಲಕ ನಮ್ಮೊಳಗಿನ ಭಿನ್ನತೆಗಳಿಗೆ ತೆರೆ ಹಾಡಿ ಸೌಹಾರ್ದ ಭಾರತದ ಕನಸನ್ನು ಮಾದರಿಯಾಗಿಸಬೇಕಾಗಿದೆ. ದೇಶದ ಸಂಸ್ಕೃತಿಯೇ ಸೌಹಾರ್ದಕ್ಕೆ ಹೆಸರಾದುದು. ಅದರಲ್ಲೂ ಕನ್ನಡಿಗರೂ ಇಡೀ ದೇಶದಲ್ಲಿಯೇ ಸೌಹಾರ್ದಕ್ಕೆ ಹೆಸರಾದವರು ಎಂದರು.

ADVERTISEMENT

ವಕೀಲರ ಸಂಘದ ಅಧ್ಯಕ್ಷ ಟಿ.ವಿ. ಚಂದ್ರಶೇಖರ ಗೌಡ ಮಾತನಾಡಿ, ಕನ್ನಡದ ಪರಿಶುದ್ಧತೆಯೊಂದಿಗೆ ಅನ್ಯಭಾಷೆ ಕಲಿಯಲು ತೊಡಕಿಲ್ಲ. ಆದರೆ, ನಮ್ಮ ಭಾಷೆ ಬಗ್ಗೆ ಪ್ರೀತಿ ಇರಲಿ. ಪರಭಾಷೆಯ ದ್ವೇಷ ಬೇಡ. ಭಾಷೆ, ಜಾತಿಯ ಹೆಸರಿನಲ್ಲಿ ವ್ಯಾಜ್ಯಗಳಾಗಿ ನೆಮ್ಮದಿ ಕದಡುವುದು ಬೇಡ ಎಂದು ಹೇಳಿದರು.

ಶಿಕ್ಷಕ ಕೆಂಪಣ್ಣ ಮಾತನಾಡಿ, ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಏಕತೆ ಕಾಪಾಡಲು ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸಬೇಕು. ಭಾರತ ಮಾತೆಯ ಸುಪುತ್ರರಾದ ನಾವು ಭೇದಭಾವ ಮರೆತು ಏಕತೆಯ ಡಿಂಡಿಮ ಬಾರಿಸಬೇಕು. ಸಪ್ತಾಹದ ನಿಮಿತ್ತ ಅಲ್ಪಸಂಖ್ಯಾತರ ಕಲ್ಯಾಣ ದಿನ, ಭಾಷಾ ಸೌಹಾರ್ದತಾ ದಿನ, ದುರ್ಬಲ ವರ್ಗಗಳ ದಿನ, ಸಾಂಸ್ಕೃತಿಕ ಏಕತಾ ದಿನ, ಮಹಿಳಾ ದಿನ, ಪರಿಸರ ರಕ್ಷಣಾ ದಿನಗಳ ಕುರಿತು ಚರ್ಚೆ, ಸಂವಾದ ಏರ್ಪಡಿಸುವುದರ ಮೂಲಕ ಏಕತೆಯ ಬೆಸುಗೆಗೆ ಮುನ್ನುಡಿ ಬರೆಯಲಾಗುತ್ತಿದೆ ಎಂದರು.

ವಕೀಲರಾದ ಲೋಕೇಶ್, ಸುಬ್ರಮಣ್ಯಪ್ಪ, ಆರ್.ವಿ. ವೀಣಾ, ರಾಮಕೃಷ್ಣ, ಶಿಕ್ಷಣ ಸಂಯೋಜಕರಾದ ಭಾಸ್ಕರ್ ಗೌಡ, ಪರಿಮಳಾ, ಕ್ಷೇತ್ರ ಸಮನ್ವಯಾಧಿಕಾರಿ ತ್ಯಾಗರಾಜು, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ವಿವಿಧ ಶಾಲೆಯ ಮುಖ್ಯಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.