
ಚಿಂತಾಮಣಿ: ತಾಲ್ಲೂಕಿನ ಚಿನ್ನಸಂದ್ರ ಗ್ರಾಮದ ಸುತ್ತಮುತ್ತಲು ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಶ್ ಸಾಕಾಣಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳದೆ ಕಂಡೂಕಾಣದೆ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.
ವಿದೇಶದಿಂದ ಅಕ್ರಮವಾಗಿ ಆಮದಾಗುವ ಈ ಕ್ಯಾಟ್‌ಫಿಷ್ ಮರಿಗಳನ್ನು ಪಶ್ಚಿಮ ಬಂಗಾಳ ಹಾಗೂ ಆಂಧ್ರದ ಮೂಲಕ ತಂದು ಕೃಷಿ ಜಮೀನುಗಳ ಹೊಂಡಗಳಲ್ಲಿ ಸಾಕಲಾಗುತ್ತಿದೆ. ಕೆಲವರು ರೈತರ ಜಮೀನುಗಳನ್ನು ಬಾಡಿಗೆಗೆ ಪಡೆದು ಹೊಂಡಗಳನ್ನು ಮಾಡಿಕೊಂಡು ಸಾಕಾಣಿಕೆ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ದೂರು ಕೇಳಿಬರುತ್ತಿವೆ.
ಆಫ್ರಿಕನ್ ಕ್ಯಾಟ್‌ಫಿಷ್ ಸ್ಥಳೀಯ ಮೀನಲ್ಲ. ಆಫ್ರಿಕಾ ಮತ್ತು ಬಾಂಗ್ಲಾದಿಂದ ಬಂದಿರುವುದು. ಯಾವುದೇ ಮೀನನ್ನು ಸಾಕಾಣಿಕೆ ಮಾಡಬೇಕಾದರೆ ವಿಜ್ಞಾನಿಗಳು ಅಧಿಕೃತವಾಗಿ ಮಾನ್ಯತೆ ನೀಡಬೇಕು. ಇದಕ್ಕೆ ಯಾವುದೇ ಮಾನ್ಯತೆ ನೀಡಿಲ್ಲ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಪರಿಸರ ಹಾಗೂ ಮನುಷ್ಯನ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಈ ಮೀನಿನ ಸಾಕಾಣಿಕೆ ಮತ್ತು ಮಾರಾಟ ನಿಷೇಧಿಸಲಾಗಿದೆ.
ಮೀನುಗಳಿಗೆ ಸತ್ತಕೋಳಿ, ರೇಷ್ಮೆಹುಳು, ಕೋಳಿ ಅಂಗಡಿಗಳ ತ್ಯಾಜ್ಯ ಆಹಾರವನ್ನಾಗಿ ನೀಡುತ್ತಾರೆ. ಹೊಂಡಗಳಿಂದ ಬರುವ ದುರ್ವಾಸನೆ ಕಿ.ಮೀ ಗಟ್ಟಲೇ ಹರಡುತ್ತದೆ. ಹೊಂಡಗಳಲ್ಲಿ ಉತ್ಪತ್ತಿಯಾಗುವ ಸೊಳ್ಳೆ, ನೊಣಗಳಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಈ ಮೀನು ಸೇವನೆಯಿಂದ ಮನುಷ್ಯರಿಗೆ ಕ್ಯಾನ್ಸರ್ ಮತ್ತಿತರ ಮಾರಕ ಕಾಯಿಲೆಗಳು ಬರುವ ಸಾಧ್ಯತೆ ಇರುವುದರಿಂದಲೂ ನಿಷೇಧಿಸಲಾಗಿದೆ.
ಕ್ಯಾಟ್‌ಫಿಶ್ ಸಾಕಾಣಿಕೆಯನ್ನು ತಕ್ಷಣ ನಿಲ್ಲಿಸಬೇಕು. ಸಾಕಾಣಿಕೆದಾರರ ಮೇಲೆ ಕ್ರಮಕೈಗೊಳ್ಳಬೇಕು ಎಂದು 2019ರಲ್ಲಿ ನವದೆಹಲಿಯ ಹಸಿರು ನ್ಯಾಯಾಧೀಕರಣ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು. ಅದರಂತೆ ಕಂದಾಯ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆ ಜಂಟಿಯಾಗಿ ಎಲ್ಲ ಹೊಂಡಗಳನ್ನು ನಾಶಪಡಿಸಿದ್ದರು.
ಗ್ರಾಮದ ಸುತ್ತಮುತ್ತಲು ಮತ್ತೆ ಈ ದಂದೆ ವ್ಯಾಪಕವಾಗಿ ಹರಡಿದೆ. ಒಂದು ವರ್ಷದ ಹಿಂದೆಯೇ ಈ ಬಗ್ಗೆ ದೂರು ನೀಡಲಾಗಿದ್ದರೂ ಮೀನುಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹೊಂಡಗಳನ್ನು ತೆರವುಗೊಳಿಸಲು ಕ್ರಮಕೈಗೊಂಡಿಲ್ಲ. ಸಾಕಾಣಿಕೆದಾರರಿಗೆ ಎಚ್ಚರಿಕೆಯ ನೋಟಿಸ್ ಸಹ ನೀಡಿಲ್ಲ. 2019ರಲ್ಲಿ ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು, ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಹೆಬ್ಬಾಳ ಮತ್ತು ಹೆಸರುಘಟ್ಟದ ವಿಜ್ಞಾನಿಗಳು, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಚಿಕ್ಕಬಳ್ಳಾಪುರ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ವಿಜ್ಞಾನಿಗಳ ತಂಡವು 2019 ಅಕ್ಟೋಬರ್‌ನಲ್ಲಿ ಚಿನ್ನಸಂದ್ರ ಗ್ರಾಮಕ್ಕೆ ಭೇಟಿ ನೀಡಿತ್ತು. ಹೊಂಡಗಳನ್ನು ಪರಿಶೀಲನೆ ನಡೆಸಿ, ಈ ಮೀನು ಆಫ್ರಿಕನ್ ಕ್ಯಾಟ್‌ಫಿಷ್ ಆಗಿದೆ. ಇದನ್ನು ಸಾಕುವುದು, ಮಾರಾಟ ಮಾಡುವುದನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ತೀರ್ಪಿನಂತೆ ನಿಷೇಧಿಸಲಾಗಿದೆ ಎಂದು ವರದಿಯನ್ನು ಜಿಲ್ಲಾಧಿಕಾರಿಗೆ ನೀಡಿತ್ತು. ಅಧಿಕಾರಿಗಳು ಕೂಡಲೇ ಕ್ರಮಕೈಗೊಂಡು ಹೊಂಡಗಳನ್ನು ನಾಶಪಡಿಸಿದ್ದರು.
ಈಗ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಯಾವುದೇ ಕ್ರಮಕೈಗೊಳ್ಳದೆ ಕೈಕಟ್ಟಿ ಕುಳಿತಿರುವುದನ್ನು ನೋಡಿದರೆ ಯಾವುದೋ ಕಾಣದ ಕೈಗಳ ಒತ್ತಡಗಳಿಗೆ ಮಣಿದು ತೆರವುಗೊಳಿಸುವುದನ್ನು ಸ್ಥಗಿತಗೊಳಿಸಿದ್ದಾರೆ ಎಂಬ ಟೀಕೆ ವ್ಯಾಪಕವಾಗಿ ಕೇಳಿ ಬರುತ್ತಿವೆ.
ವಿಷವರ್ತುಲ: ಕ್ಯಾಟ್‌ಫಿಷ್ ಸಾಕಾಣಿಕೆ ಮತ್ತು ಮಾರಾಟವನ್ನು ನಿಷೇಧಿಸಿದ್ದರೂ ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶದಿಂದ ಮೀನಿನ ಮರಿಗಳನ್ನು ತರುತ್ತಾರೆ. ಸಾಕಾಣಿಕೆ ಮಾಡಿದ ಮೀನುಗಳನ್ನು ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತಿತರ ಕಡೆಗೆ ಮಾರಾಟ ಮಾಡುತ್ತಾರೆ. ಇಷ್ಟೊಂದು ವ್ಯಾಪಕವಾಗಿ ನಡೆಯುತ್ತಿರುವ ದಂದೆಯನ್ನು ಪೊಲೀಸ್ ಮತ್ತು ಆರ್‌ಟಿಒ ಇಲಾಖೆಗಳ ಕಣ್ಣುತಪ್ಪಿಸಿ ಮಾಡಲು ಸಾಧ್ಯವೇ? ಈ ಇಲಾಖೆಗಳ ಶಾಮೀಲಿನಿಂದಲೇ ದಂದೆ ಬಹಿರಂಗವಾಗಿ ನಡೆಯುತ್ತಿದೆ ಎಂಬುದು ಪರಿಸರವಾದಿಗಳ ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.