ADVERTISEMENT

ಕೈ ತುಂಬ ಆದಾಯ: ನಿವೃತ್ತ ಅಧಿಕಾರಿಯ ಕೃಷಿ ಪ್ರವೃತ್ತಿ

ಜೀವನ ಸಂಧ್ಯಾಕಾಲದಲ್ಲಿ ಬೇಸಾಯದಲ್ಲಿ ಖುಷಿ ಕಂಡುಕೊಂಡ ನಂಜುಂಡಪ್ಪ

ಈರಪ್ಪ ಹಳಕಟ್ಟಿ
Published 25 ಜೂನ್ 2019, 19:45 IST
Last Updated 25 ಜೂನ್ 2019, 19:45 IST
ತಮ್ಮ ಪಾಲಿಹೌಸ್‌ನಲ್ಲಿ ಬೆಳೆದ ದೊಣ್ಣೆ ಮೆಣಸಿನಕಾಯಿಗಳನ್ನು ತೋರಿಸಿದ ನಂಜುಂಡಪ್ಪ
ತಮ್ಮ ಪಾಲಿಹೌಸ್‌ನಲ್ಲಿ ಬೆಳೆದ ದೊಣ್ಣೆ ಮೆಣಸಿನಕಾಯಿಗಳನ್ನು ತೋರಿಸಿದ ನಂಜುಂಡಪ್ಪ   

ಚಿಕ್ಕಬಳ್ಳಾಪುರ: ದುಡಿಮೆಗೆ ಸೂಕ್ತ ಪ್ರತಿಫಲ ಸಿಗುತ್ತಿಲ್ಲ ಎಂದು ಅನೇಕ ರೈತರು ಇವತ್ತು ಬೇಸತ್ತು ಕೃಷಿಯಿಂದ ವಿಮುಖರಾಗಿ ನಗರ, ಪಟ್ಟಣ ಸೇರಿ ವಿವಿಧ ಕೆಲಸಗಳ ಮೂಲಕ ಹೊಟ್ಟೆ ಹೊರೆಯಲು ಮುಂದಾಗುತ್ತಿದ್ದಾರೆ. ಆದರೆ ಇಲ್ಲೊಬ್ಬ ನಿವೃತ್ತ ಅಧಿಕಾರಿ ಜೀವನದ ಸಂಧ್ಯಾಕಾಲದಲ್ಲಿ ತುಂಬು ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮ ಆದಾಯ ಪಡೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ರಿಸರ್ವ್ ಬ್ಯಾಂಕ್‌ನಲ್ಲಿ 35 ವರ್ಷ ನೌಕರಿ ಮಾಡಿ, ಕೆಲ ವರ್ಷಗಳ ಹಿಂದೆ ನಿವೃತ್ತಿ ಹೊಂದಿದ ಬೆಂಗಳೂರಿನ ಹೆಬ್ಬಾಳದ ನಿವಾಸಿ ನಂಜುಂಡಪ್ಪ ಅವರು ಸದ್ಯ ನಂದಿ ಕ್ರಾಸ್‌ ಬಳಿ ಕೋಲಾರ ರಸ್ತೆಯಲ್ಲಿ ಡಿ.ಹೊಸೂರು ಗೇಟ್ ಸಮೀಪ ಪಾಲಿಹೌಸ್‌ನಲ್ಲಿ ಬಣ್ಣದ ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಳೆಯುತ್ತ ಸ್ಥಳೀಯ ರೈತರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಕೃಷಿಕ ಕುಟುಂಬದಲ್ಲಿ ಹುಟ್ಟಿದ ನಂಜುಂಡಪ್ಪನವರಿಗೆ ಸ್ವಂತ ಜಮೀನು ಇಲ್ಲದ ಕೊರಗು ಚಿಕ್ಕಂದಿನಿಂದಲೇ ಕಾಡಿತ್ತು. ಹೀಗಾಗಿ ಅವರು ಉದ್ಯೋಗದಲ್ಲಿ ಇರುವಾಗಲೇ 2005ರಲ್ಲಿಯೇ ಡಿ.ಹೊಸೂರು ಗೇಟ್ ಬಳಿ ಒಂದು ಎಕರೆ ಜಮೀನು ಖರೀದಿಸಿದ್ದರು. 2016ರಲ್ಲಿ ನಿವೃತ್ತಿ ಹೊಂದುತ್ತಿದ್ದಂತೆ ಮುಂದೇನು ಎಂಬ ಯೋಚನೆ ಬಂದಾಗ ಅವರಿಗೆ ಹೊಳೆದದ್ದೇ ಕೃಷಿ.

ADVERTISEMENT

2018ರ ನವೆಂಬರ್‌ನಲ್ಲಿ ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಿದ ನಂಜುಂಡಪ್ಪನವರು ₹18 ಲಕ್ಷ ಬ್ಯಾಂಕ್ ಸಾಲ ತೆಗೆದು 2019ರ ಜನವರಿಯಲ್ಲಿ ಒಂದು ಎಕರೆಯ ಪೈಕಿ 23 ಗುಂಟೆ ಜಾಗದಲ್ಲಿ ಪಾಲಿಹೌಸ್‌ ಮತ್ತು 60*45 ಚದರಡಿ ಅಳತೆಯ ಕೃಷಿ ಹೊಂಡ ನಿರ್ಮಾಣ ಮಾಡಿದರು. ಬಳಿಕ ಇವರಿಗೆ ತೋಟಗಾರಿಕೆ ಇಲಾಖೆ ₹10 ಲಕ್ಷ ಸಬ್ಸಿಡಿ ಸಹ ಒದಗಿಸಿತು.

ಕಳೆದ ಫೆಬ್ರುವರಿ 6 ರಂದು ಸಸಿಗಳನ್ನು ನಾಟಿ ಮಾಡಿದ ನಂಜುಂಡಪ್ಪನವರು ಏಪ್ರಿಲ್ 24 ರಿಂದ ಕೊಯ್ಲು ಆರಂಭಿಸಿದ್ದಾರೆ. ವಾರದಲ್ಲಿ ಮೂರು ದಿನ ದೊಣ್ಣೆ ಮೆಣಸಿನಕಾಯಿ ಕೊಯ್ಲು ಮಾಡುತ್ತಾರೆ. ಪ್ರತಿ ಬಾರಿಯ ಕೊಯ್ಲಿಗೆ 400–500 ಕೆ.ಜಿ ಕಾಯಿ ಸಿಗುತ್ತಿದೆ. ಅದನ್ನು ಚಿಕ್ಕಬಳ್ಳಾಪುರದ ವರ್ತಕರೊಬ್ಬರು ಜಮೀನಿಗೆ ಬಂದು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ.

ನಂಜುಂಡಪ್ಪನವರು ಕಳೆದ ಒಂದೂವರೆ ತಿಂಗಳಲ್ಲಿ 7 ಟನ್ ಕಾಯಿ ಮಾರಾಟ ಮಾಡಿದ್ದಾರೆ. ಅವರಿಗೆ ಒಂದು ಕೆ.ಜಿಗೆ ಗರಿಷ್ಠ ₹130 ಬೆಲೆ ದೊರೆತಿದೆ. ಸದ್ಯ ₹60 ಬೆಲೆ ಸಿಗುತ್ತಿದೆ. ಪಾಲಿಹೌಸ್‌ಗಾಗಿ ₹8 ಲಕ್ಷ ಖರ್ಚು ಮಾಡಿರುವ ಇವರಿಗೆ ಈಗಾಗಲೇ ₹6.50 ಲಕ್ಷ ಆದಾಯ ಬಂದಿದೆ. ಇನ್ನು ಸುಮಾರು 8 ತಿಂಗಳು ಕೊಯ್ಲು ನಡೆಯುತ್ತದೆ.

ನೀರಿನ ಮಹತ್ವ ಅರಿತಿರುವ ಇವರು ಕೃಷಿ ಹೊಂಡಕ್ಕೆ ಕೂಡ ಹಸಿರು ಮನೆ ನಿರ್ಮಿಸಿ ನೀರು ಆವಿಯಾಗುವುದು ತಡೆಗಟ್ಟಿದ್ದಾರೆ. ಜತೆಗೆ ಕೊಳವೆಬಾವಿ ಮತ್ತು ಪಾಲಿಹೌಸ್‌ ಮೇಲೆ ಬೀಳುವ ಮಳೆ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿ, ಸೂಕ್ಷ್ಮ ಹನಿ ನೀರಾವರಿ ವ್ಯವಸ್ಥೆ ಮೂಲಕ ಮಿತವಾಗಿ ಬಳಕೆ ಮಾಡಿ ಉತ್ತಮ ಫಸಲು ತೆಗೆಯುತ್ತಿದ್ದಾರೆ. ಕಷ್ಟಕಾಲದಲ್ಲಿ ನೆರೆಹೊರೆಯ ರೈತರಿಗೆ ಸಹ ನೀರು ಒದಗಿಸಿರುವುದಾಗಿ ಹೇಳುತ್ತಾರೆ.

ರಿಸರ್ವ್ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕ ಹುದ್ದೆಯಲ್ಲಿದ್ದು ಬಂದರೂ ಸರಳತೆ ಮೈಗೂಡಿಸಿಕೊಂಡಿರುವ ನಂಜುಂಡಪ್ಪನವರು ನಿತ್ಯ ಬೆಳಿಗ್ಗೆ ಹೆಬ್ಬಾಳದಿಂದ ತೋಟಕ್ಕೆ ಬಂದು ಆಳುಗಳೊಂದಿಗೆ ಆಳಾಗಿ ದುಡಿಯುತ್ತಾರೆ. ತೋಟಕ್ಕೆ ತಾವೇ ಮದ್ದು ಹೊಡೆಯುತ್ತಾರೆ. ಅವರ ಕುಟುಂಬದವರು ಸಹ ಕೃಷಿಯಲ್ಲಿ ಖುಷಿಯಿಂದ ತೊಡಗಿಸಿಕೊಂಡಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ.

ಸದ್ಯ 10–15 ಕಾರ್ಮಿಕರಿಗೆ ಕೆಲಸ ಒದಗಿಸುವ ನಂಜುಂಡಪ್ಪನವರು ಜಮೀನಿನಲ್ಲಿಯೇ ತಮ್ಮ ವಾಸಕ್ಕೆ, ಆಳಿಗಾಗಿ ಮನೆಯೊಂದನ್ನು ನಿರ್ಮಿಸಿದ್ದಾರೆ. ಕೃಷಿ ಕ್ಷೇತ್ರದ ಪರಿಣಿತರೊಬ್ಬರ ಸಲಹೆ ಮೆರೆಗೆ ಗಿಡಗಳಿಗೆ ಉಪಚಾರ ಮಾಡಿ ರೋಗ, ಕೀಟಗಳ ಹಾವಳಿ ನಿಯಂತ್ರಿಸಿ, ಗುಣಮಟ್ಟದ ಕಾಯಿ ಬೆಳೆದು ಸಣ್ಣ ಹಿಡುವಳಿಯಲ್ಲಿಯೇ ಸಂಬಳಕ್ಕಿಂತಲೂ ಮಿಗಿಲಾದ ಆದಾಯ ಪಡೆಯುತ್ತಿದ್ದಾರೆ.

ನಿವೃತ್ತಿ ಬಳಿಕ ಯಾವ ಕೆಲಸದಲ್ಲೂ ತೊಡಗಿಸಿಕೊಳ್ಳದೆ ಆರಾಮದಿಂದ ಜೀವನ ಕಳೆಯುವವರ ನಡುವೆ, 60 ದಾಟಿದ ನಂತರವೂ ಬತ್ತದ ಜೀವನೋತ್ಸಾಹದೊಂದಿಗೆ ಕೃಷಿಯಲ್ಲಿ ಕೈ ಹಾಕಿ ಎಲ್ಲರಿಂದಲೂ ಸೈ ಎನಿಸಿಕೊಳ್ಳುವ ರೀತಿ ಬದುಕುತ್ತಿರುವ ನಂಜುಂಡಪ್ಪನವರು, ಕೃಷಿ ಎಂದರೆ ಮೂಗು ಮುರಿಯುವ ಯುವಜನರಿಗೆ ಮಾದರಿಯಾಗಿದ್ದಾರೆ.

*
ನಾವು ಸೋಮಾರಿತನ ತೊಡೆದು ಪ್ರಾಮಾಣಿಕವಾಗಿ ದುಡಿದರೆ ಭೂಮಿ ಎಂದಿಗೂ ನಮಗೆ ಮೋಸ ಮಾಡುವುದಿಲ್ಲ. ಇದು ನನ್ನ ಸ್ವಂತ ಅನುಭವ.
-ನಂಜುಂಡಪ್ಪ, ನಿವೃತ್ತ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.