ADVERTISEMENT

ಮೂಲಸೌಕರ್ಯ ವಂಚಿತ ಅಕ್ಕಮ್ಮಬೆಟ್ಟ: ಸಂರಕ್ಷಣೆ, ಅಭಿವೃದ್ಧಿಗೆ ಗ್ರಾಮಸ್ಥರ ಒತ್ತಾಯ

ದೇವಿಕುಂಟೆ ಬಳಿಯ ಸ್ಮಾರಕ, ಶಾಸನಕ್ಕೆ ಧಕ್ಕೆ; ನಾಶವಾಗುವ ಆತಂಕ

ಪಿ.ಎಸ್.ರಾಜೇಶ್
Published 6 ಫೆಬ್ರುವರಿ 2021, 3:44 IST
Last Updated 6 ಫೆಬ್ರುವರಿ 2021, 3:44 IST
ಬಾಗೇಪಲ್ಲಿ ತಾಲ್ಲೂಕಿನ ದೇವಿಕುಂಟೆ ಗ್ರಾಮದ ಬಳಿಯ ಅಕ್ಕಮ್ಮಬೆಟ್ಟದಲ್ಲಿ ಪಾಳೇಗಾರರು ನಿರ್ಮಿಸಿರುವ ಕೋಟೆಯ ದುಃಸ್ಥಿತಿ
ಬಾಗೇಪಲ್ಲಿ ತಾಲ್ಲೂಕಿನ ದೇವಿಕುಂಟೆ ಗ್ರಾಮದ ಬಳಿಯ ಅಕ್ಕಮ್ಮಬೆಟ್ಟದಲ್ಲಿ ಪಾಳೇಗಾರರು ನಿರ್ಮಿಸಿರುವ ಕೋಟೆಯ ದುಃಸ್ಥಿತಿ   

ಬಾಗೇಪಲ್ಲಿ: ತಾಲ್ಲೂಕಿನ ದೇವಿಕುಂಟೆ ಗ್ರಾಮದ ಬಳಿಯ ಅಕ್ಕಮ್ಮಗಾರಿಬೆಟ್ಟದಲ್ಲಿ ವಿಜಯನಗರ ಸಾಮ್ರಾಜ್ಯ ಕಾಲದ ಅವಶೇಷಗಳು, ಶಾಸನಗಳು, ಸ್ಮಾರಕಗಳು ಹಾಗೂ ಕೋಟೆಗಳು ಇದೆ. ಆದರೆ ಸೂಕ್ತ ನಿರ್ವಹಣೆ, ಭದ್ರತೆಯಿಲ್ಲದೆ ಎಲ್ಲವೂ ನಾಶವಾಗುವ ಹಂತಕ್ಕೆ ತಲುಪಿದೆ.

ತಾಲ್ಲೂಕು ಕೇಂದ್ರಸ್ಥಾನದಿಂದ ಗೂಳೂರು, ಮಾರ್ಗಾನುಕುಂಟೆ ಗ್ರಾಮಗಳ ಮೂಲಕ ಸಂಚರಿಸಿದರೆ ದೇವಿಕುಂಟೆ ಗ್ರಾಮ ಇದೆ. ಅತಿ ಹಿಂದುಳಿದ ಹಾಗೂ ಕನಿಷ್ಠ ಮೂಲಸೌಲಭ್ಯ ವಂಚಿತವಾದ ಗ್ರಾಮ ಆಗಿದೆ. ಕುಡಿಯಲು ನೀರು ಇಲ್ಲ. ಸಮರ್ಪಕವಾದ ರಸ್ತೆಗಳು ಇಲ್ಲ. ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿ ಗ್ರಾಮ ಇದೆ. ಕೃಷಿಕೂಲಿ ಕಾರ್ಮಿಕರು ನೆಲೆಸಿದ್ದಾರೆ. ಇಂತಹ ದೇವಿಕುಂಟೆ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಹಾಗೂ ಪಾಳೇಗಾರರು ಆಳ್ವಿಕೆ ಮಾಡಿದ್ದಾರೆ.

ಅಕ್ಕಮ್ಮಬೆಟ್ಟದಲ್ಲಿ ಅಕ್ಕಮ್ಮ ದೇವರ ಒಂದು ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ಭಕ್ತರು ಆಗಮಿಸಿ ಪೂಜೆಗಳನ್ನು ಮಾಡುತ್ತಿದ್ದಾರೆ. ವಿಶೇಷವಾಗಿ 2 ಶಾಸನಗಳನ್ನು ಹಾಗೂ ವಿವಿಧ ಕೆತ್ತನೆಗಳನ್ನು ಕಾಣಬಹುದು. ಅಕ್ಕಮ್ಮ ದೇವಾಲಯಕ್ಕೆ ಮತ್ತು ನೀರಿನ ದೊಣೆ(ಚಿಲುಮೆ) ಹೋಗುವ ದಾರಿಯಲ್ಲಿ ಮೊದಲ ಶಾಸನವನ್ನು ಕೆತ್ತಿದ್ದಾರೆ. ಬಲಭಾಗಕ್ಕೆ ‘ವಿಗಸಿಯದಂ ನಾಯಕರ ದೊಣೆ’ ಎಂದು ಕೆತ್ತಿದ್ದಾರೆ.

ADVERTISEMENT

ಅಕ್ಕಮ್ಮ ಬೆಟ್ಟದ ಪಶ್ಚಿಮ ದಿಕ್ಕಿಗೆ ದೊಡ್ಡ ಬುರುಜು ಇದೆ. ಬಂಡೆಯ ಮೇಲೆ ಶಾಸನವಿದೆ ಹಾಗೂ ರಾಜರು ಪಗಡೆ ಆಟದಲ್ಲಿ ಕುಳಿತುಕೊಂಡಿರುವ ಗುರುಗಳನ್ನು ಕಾಣಬಹುದು. ಈ ಶಾಸನದ ಮೇಲೆಯ ಭಾಗದಲ್ಲಿ ಕೆಲವು ಚಿಹ್ನೆಗಳು ಇದೆ. ಸೂರ್ಯನ, ಹಸುವಿನ, ಹೆಣ್ಣಿನ ತಲೆ ಕೊಪ್ಪು, ಹುಲಿಯ ಕೈ ಮುಷ್ಠಿಯ ಚಿಹ್ನೆಗಳ ಕೆಳಗೆ ಶಾಸನವನ್ನು ಕೆತ್ತಿದ್ದಾರೆ.

ಅಕ್ಕಮ್ಮಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಲಂಜಗುಂಡಿನ ಮೇಲೆ ಹೆಣ್ಣಿನ ತಲೆ ಕೊಪ್ಪು ಕೆತ್ತಲಾಗಿದೆ. ಮಾರ್ಗಾನುಕುಂಟೆ ದಾರಿಯಲ್ಲಿ ಇರುವ ಗ್ರಾಮ ದೇವತೆ ಮಾರಿಯಮ್ಮ ಬಳಿ ಹೆಣ್ಣಿನ ಚಿಹ್ನೆ ಕೆತ್ತನೆ ಮಾಡಲಾಗಿದೆ. 3 ವೀರಗಲ್ಲುಗಳನ್ನು ಕಾಣಬಹುದು. ಈ ಐತಿಹಾಸಿಕ ಶಾಸನಗಳು, ಕೆತ್ತನೆಗಳು ಪ್ರಾಚೀನ ಕಾಲದ ಆರ್ಥಿಕ, ಆಡಳಿತ, ಸಾಮಾಜಿಕ, ರಾಜಕೀಯ, ಸಂಸ್ಕøತಿಯನ್ನು ವಿವರಿಸುವ ಶಾಸನಗಳು ಕಾಣಬಹುದಾಗಿದೆ.

ಇದೇ ತಾಣದಲ್ಲಿ ಅಕ್ಕಮ್ಮ ದೇವಾಲಯ, ದೊಣೆ, ಗಿಳಿಗಳ ಮುಖದ್ವಾರ, ಶಿವ-ಪಾರ್ವತಿ, ಆಂಜನೇಯ ದೇವಾಲಯಗಳು ಇದೆ. ಗೊಲ್ಲರ ಚಿತ್ರಕತೆ, ಬೆಟ್ಟದ ಸುತ್ತಲೂ 20ಕ್ಕೂ ಹೆಚ್ಚು ಕೋಟೆಗಳು ಇದೆ. ನ್ಯಾಯ ತೀರ್ಪು ಮಾಡುವ ರಚ್ಚಬಂಡೆ, ಮೊಹರಂ ಮನೆ, ಭಕ್ತರ, ಸಿಡಿಮದ್ದಿನ ಮನೆಗಳು ಇದೆ. ಸುತ್ತಲೂ ವೃತ್ತಾಕಾರದ ರಕ್ಷಣಾ ಗೋಡೆಗಳು ಕಾಣಬಹುದು. ಶಿಲಾಶಾಸನಗಳ ಮೇಲೆ ಹಸು, ಸೂರ್ಯ, ಸಿಂಹಗಳನ್ನು ಕೆತ್ತನೆ ಮಾಡಲಾಗಿದೆ. ಮುಕ್ಕಡಿಮಲ್ಮಮ್ಮ ಗೃಹ ಇದೆ. ಮುಸ್ಲಿಂ ಸಮುದಾಯದವರ ನಮಾಜು(ಪ್ರಾರ್ಥನೆ) ಕಟ್ಟೆ, ಸಂಜೀವಮ್ಮ ಕೆರೆ ಇದೆ.

‘ಗುಮ್ಮ ನಾಯಕಪಾಳ್ಯದ ಪಾಳೇಗಾರರ ಕೋಟೆಯಂತೆ ಅಕ್ಕಮ್ಮಬೆಟ್ಟದ ಕೋಟೆಗಳು ಪಾಳು ಬಿದ್ದಿದೆ. ಸುಂದರವಾದ ತಾಣಗಳಲ್ಲಿ ಕಳೆ-ಮುಳ್ಳಿನ ಗಿಡಗಳು ಬೆಳೆದಿದೆ. ಕೋಟೆಯ ಕಲ್ಲುಗಳು ಉರುಳಿದೆ.
ಸಮರ್ಪಕವಾದ ರಸ್ತೆ ಇಲ್ಲ. ಬೃಹತ್ ಗುಂಡಿಗಳು ಬಿದ್ದಿದೆ. ಶಾಸನಗಳು, ಸ್ಮಾರಕಗಳು ಕಾಣಸಿಗುತ್ತಿಲ್ಲ. ಕೆಲ ನಿಧಿಗಳ್ಳರು ಬೃಹತ್ ಗುಂಡಿಗಳನ್ನು ಅಗೆದಿದ್ದಾರೆ. ದೇವಿಕುಂಟೆ ಗ್ರಾಮಕ್ಕೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ, ಅಕ್ಕಮ್ಮ ಬೆಟ್ಟವನ್ನು ಸುಂದರ ತಾಣವನ್ನಾಗಿ ಮಾಡಬೇಕು’ ಎಂದು ಗ್ರಾಮಸ್ಥರು ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.