ADVERTISEMENT

ಮಂಚೇನಹಳ್ಳಿಯಲ್ಲಿ ಸದಾ ಸ್ವಚ್ಛತೆ ಮರೀಚಿಕೆ

ಎಲ್ಲೆಂದರಲ್ಲಿ ವಿಲೇವಾರಿಗೊಳ್ಳದೆ ಗಬ್ಬು ನಾರುವ ತ್ಯಾಜ್ಯದ ರಾಶಿಗಳು, ಕೊಚ್ಚೆ ನೀರನ್ನು ಸಾಗಿಸಲಾಗದೆ ಮಡುಗಟ್ಟಿ ಸೊಳ್ಳೆ ಸಂತಾನ ವರ್ಧಿಸುತ್ತಿರುವ ಚರಂಡಿಗಳು

ಎ.ಎಸ್.ಜಗನ್ನಾಥ್
Published 1 ಡಿಸೆಂಬರ್ 2019, 20:30 IST
Last Updated 1 ಡಿಸೆಂಬರ್ 2019, 20:30 IST
ಮಂಚೇನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ಇರುವ ಕಸದ ರಾಶಿ
ಮಂಚೇನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ಇರುವ ಕಸದ ರಾಶಿ   

ಮಂಚೇನಹಳ್ಳಿ (ಗೌರಿಬಿದನೂರು ತಾಲ್ಲೂಕು): ಇತ್ತೀಚೆಗೆ ರಾಜ್ಯ ಸರ್ಕಾರ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಿಸಿದ ಮಂಚೇನಹಳ್ಳಿಯಲ್ಲಿ ಸ್ವಚ್ಛತೆ ಎನ್ನುವುದು ಮೊದಲಿನಿಂದಲೂ ಮರೀಚಿಕೆಯಾಗಿದೆ.

ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಹೋಬಳಿ ಕೇಂದ್ರವಾಗಿರುವ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಸದಾ ಗೋಚರಿಸುತ್ತವೆ. ಇನ್ನೊಂದೆಡೆ ಚರಂಡಿಯುದ್ದಕ್ಕೂ ಮಡುಗಟ್ಟಿ ನಿಂತ ತ್ಯಾಜ್ಯ ನೀರಿನ ದರ್ಶನವಾಗುತ್ತದೆ. ಇದರ ಪರಿಣಾಮ, ಸ್ಥಳೀಯ ನಾಗರಿಕರಿಗೆ ಸದಾ ಸೊಳ್ಳೆಕಾಟ.

ಪಿನಾಕಿನಿ ನದಿಯ ದಡದಲ್ಲಿ ಮಂಚೇನಹಳ್ಳಿ ಇಡೀ ಜಿಲ್ಲೆಯಲ್ಲಿಯೇ ಸಂಪದ್ಭರಿತವಾದ ಪ್ರದೇಶವಾಗಿದೆ. ಇಲ್ಲಿ ಸುಮಾರು 7.50 ಸಾವಿರ ಜನಸಂಖ್ಯೆ ಇದೆ. ಆದರೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಅಸಡ್ಡೆಯಿಂದ ಇಡೀ ಪಟ್ಟಣ ಕೊಳೆಗೇರಿಯಂತೆ ಗೋಚರಿಸುತ್ತದೆ. ಪಟ್ಟಣದ ಯಾವುದೇ ಬೀದಿಯಲ್ಲಿ ಸಂಚರಿಸಿದರೂ ಕಸದ ರಾಶಿಕೈಬೀಸಿ ಕರೆಯುತ್ತವೆ. ಚರಂಡಚಂರಂಡಿಗಳಲ್ಲಿನ ತ್ಯಾಜ್ಯದ ಗಬ್ಬುನಾತ ವಾಕರಿಕೆ ತರಿಸಿದರೆ, ದಾಂಗುಡಿ ಇಡುವ ಸೊಳ್ಳೆಗಳ ಹಿಂಡು ಸಾಂಕ್ರಾಮಿಕ ರೋಗಗಳ ಭೀತಿ ಹುಟ್ಟಿಸುತ್ತಿವೆ.

ADVERTISEMENT

ಪಟ್ಟಣದ ಮಧ್ಯೆ ಭಾಗದಲ್ಲಿ ಹಾಯ್ದು ಹೋಗುವ ರಾಜ್ಯ ಹೆದ್ದಾರಿ 234ರ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದ ಪರಿಣಾಮ ಮುಖ್ಯರಸ್ತೆಯ ಪಕ್ಕದಲ್ಲಿರುವ ಚರಂಡಿಗಳೆಲ್ಲ ಹೂಳು ತುಂಬಿಕೊಂಡು ಮಳೆ ನೀರು, ತ್ಯಾಜ್ಯ ನೀರು ಸಾಗಿಸಲಾದಷ್ಟು ಕೆಟ್ಟ ಪರಿಸ್ಥಿತಿಗೆ ತಲುಪಿ, ಹೋಬಳಿ ಕೇಂದ್ರಕ್ಕೆ ಕಪ್ಪುಚುಕ್ಕೆಯಂತೆ ಗೋಚರಿಸುತ್ತಿವೆ. ಪಟ್ಟಣದ ಘನತೆಗೆ ಮಸಿ ಬಳಿಯಲು ಈ ಕಾಲುವೆಗಳೇ ಸಾಕು ಎನ್ನುತ್ತಿದ್ದಾರೆ ಪ್ರಜ್ಞಾವಂತ ಜನರು.

ಗಾಯದ ಮೇಲೆ ಬರೆ ಎಳೆದಂತೆ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಸ್ಥಳೀಯ ಬಾರ್, ಮೆಡಿಕಲ್ ಶಾಪ್, ಕಾಂಡಿಮೆಂಟ್ಸ್, ಹೋಟೆಲ್, ವಿವಿಧ ಮಳಿಗೆಗಳವರು ನಿತ್ಯ ಸುರಿಯುವ ತ್ಯಾಜ್ಯ ರಾಶಿ, ರಾಶಿಯಾಗಿ ಸಂಗ್ರಹವಾಗುತ್ತಿದೆ. ಅದನ್ನು ನಿಯಮಿತವಾಗಿ ಸಕಾಲಕ್ಕೆ ವಿಲೇವಾರಿ ಮಾಡುವ ಕೆಲಸ ನಡೆಯುತ್ತಿಲ್ಲ. ಇದರಿಂದಾಗಿ ಅನೇಕ ಕಡೆಗಳಲ್ಲಿ ರಸ್ತೆ ಬದಿಯ ಹೇವರಿಕೆ ಹುಟ್ಟಿಸುವ ತ್ಯಾಜ್ಯದ ರಾಶಿಗಳಿಂದ ಮುಜುಗರದಿಂದ ಹೆಜ್ಜೆ ಹಾಕಬೇಕಾದ ಸ್ಥಿತಿ ತಲೆದೋರುತ್ತಿದೆ.

ಇತ್ತೀಚೆಗೆ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಮಂಚೇನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ನಾಡಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಬ್ಯಾಂಕ್‌ಗಳು, ಖಾಸಗಿ ಶಾಲೆಗಳು ಸೇರಿದಂತೆ ಅನೇಕ ನಾಗರಿಕ ಸೇವಾ ಕೇಂದ್ರಗಳಿವೆ. ಅವುಗಳಿಗಾಗಿ ನಿತ್ಯ ವಿವಿಧ ಹಳ್ಳಿಗಳಿಂದ ಸಾವಿರಾರು ನಾಗರಿಕರು ಕೆಲಸದ ನಿಮಿತ್ತ ತಾಲ್ಲೂಕು ಕೇಂದ್ರಕ್ಕೆ ಆಗಮಿಸುತ್ತಾರೆ. ಇಲ್ಲಿನ ಅವ್ಯವಸ್ಥೆಯನ್ನು ಕಂಡು ಮೂಗು ಮುಚ್ಚಿಕೊಂಡು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೊಂದೆಡೆ ಬೀದಿನಾಯಿಗಳು ಆಹಾರದ ಆಸೆಗೆ ಕಸದ ರಾಶಿಗಳನ್ನು ಚೆಲ್ಲಾಪಿಲ್ಲಿ ಪಟ್ಟಣವನ್ನು ಅಲ್ಲಲ್ಲಿ ಮತ್ತಷ್ಟು ಗಲೀಜು ಮಾಡುತ್ತಿವೆ. ಇದು ಪಾದಚಾರಿಗಳನ್ನು ಮತ್ತಷ್ಟು ಸಂಕಟಕ್ಕೆ ನೂಕುತ್ತಿದೆ. ಇದೆಲ್ಲದರ ಪರಿಣಾಮ ಪಟ್ಟಣದ ಸೌಂದರ್ಯಕ್ಕೆ ಕುಂದುಂಟಾಗುತ್ತಿದೆ.

‘ಅನೇಕ ವರ್ಷಗಳ ಮಂಚೇನಹಳ್ಳಿ ತಾಲ್ಲೂಕಿನ ಬೇಡಿಕೆ ಈಡೇರಿದ್ದು ಸಂತಸದ ವಿಚಾರ. ಆದರೆ ಮೊದಲಿನಿಂದಲೂ ಸ್ವಚ್ಛತೆ ಕಾಣದೆ ಎಲ್ಲೆಂದರಲ್ಲಿ ಗಲೀಜು ತುಂಬಿಕೊಂಡಿರುವ ಮಂಚೇನಹಳ್ಳಿಯನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಆದ್ಯತೆ ನೀಡಬೇಕಾಗಿದೆ. ಮೂಲಸೌಕರ್ಯಗಳಿಗಿಂತಲೂ ಮುಖ್ಯವಾಗಿ ಕನಿಷ್ಠ ಪಕ್ಷ ಪಟ್ಟಣದಲ್ಲಿ ಸ್ವಚ್ಛತೆ ಕಾಯ್ದಕೊಳ್ಳುವ ಕೆಲಸ ಬೇಗ ಆಗಬೇಕಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೊಸ ತಾಲ್ಲೂಕಿಗೆ ಬೆಲೆ ಇರುವುದಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರಂಗನಾಥ್.

‘ಪಟ್ಟಣದ ನೈರ್ಮಲ್ಯ ಸ್ಥಿತಿಬಣ್ಣಿಸಲಾಗದಷ್ಟು ಕೆಟ್ಟು ಹೋಗುತ್ತಿದೆ. ಎಲ್ಲಿ ಹೋದರೂ ಗಲೀಜು ದರ್ಶನವಾಗುತ್ತದೆ. ದೊಡ್ಡದೊಡ್ಡ ಯೋಜನೆಗಳಿಗೆ ಆದ್ಯತೆ ನೀಡುವ ಪಂಚಾಯಿತಿಗಳ ಸದಸ್ಯರು, ರಾಜಕಾರಣಿಗಳಿಗೆ ಸ್ವಚ್ಛತೆ ಎನ್ನುವುದು ಬೇಡದ ವಿಚಾರವಾಗಿದೆ. ಹೀಗಾಗಿ ಅಧಿಕಾರಿಗಳು ತಮ್ಮ ಕರ್ತವ್ಯ ಮರೆತು, ಜನರ ಸಮಸ್ಯೆಗಳತ್ತ ಜಾಣ ಕುರುಡು ಪ್ರದರ್ಶನ ಮಾಡುತ್ತಿರುವುದು ನಮ್ಮ ದುರಾದೃಷ್ಟ. ಸ್ವಚ್ಛತೆಯ ವಿಚಾರದಲ್ಲಿ ವಿದೇಶಗಳ ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಕಂಡುಬರುವ ಇಚ್ಛಾಶಕ್ತಿ ನಮ್ಮಲ್ಲಿ ಏಕಿಲ್ಲ ಎನ್ನುವುದು ನನಗೆ ದೊಡ್ಡ ಯಕ್ಷಪ್ರಶ್ನೆಯಾಗಿದೆ’ ಎಂದು ಸ್ಥಳೀಯ ನಿವಾಸಿ ಮಂಜುಳಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.