ADVERTISEMENT

ಅಂಬೇಡ್ಕರ್‌ ಪುತ್ಥಳಿ ತೆರವು: ಇಂದು ಚಿಂತಾಮಣಿ ಬಂದ್‌

ಚಿಂತಾಮಣಿ ಸರ್ಕಾರಿ ಶಾಲೆ ಆವರಣದಲ್ಲಿ ಇಟ್ಟಿದ್ದ ಪುತ್ಥಳಿ

​ಪ್ರಜಾವಾಣಿ ವಾರ್ತೆ
Published 22 ಮೇ 2025, 0:20 IST
Last Updated 22 ಮೇ 2025, 0:20 IST
ಚಿಂತಾಮಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು
ಚಿಂತಾಮಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು   

ಚಿಂತಾಮಣಿ: ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ತಿಂಗಳ ಹಿಂದೆ ರಾತ್ರೋರಾತ್ರಿ ತಂದು ಇಟ್ಟಿದ್ದ ಅಂಬೇಡ್ಕರ್‌ ಪುತ್ಥಳಿಯನ್ನು ನ್ಯಾಯಾಲಯದ ಆದೇಶದಂತೆ ಬುಧವಾರ ನಸುಕಿನಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಪೊಲೀಸ್‌ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದೆ.

ಶಾಲೆಯಲ್ಲಿ ಯಾವುದೇ ಅನುಮತಿ ಇಲ್ಲದೆ ಕೆಲವರು ರಾತ್ರಿ ಸಮಯದಲ್ಲಿ ಅಂಬೇಡ್ಕರ್‌ ಪುತ್ಥಳಿಯನ್ನು ತಂದು ಇಟ್ಟಿದ್ದರು. ತಾಲ್ಲೂಕು ಆಡಳಿತವು ಅದಕ್ಕೆ ಬಟ್ಟೆಹೊದಿಸಿ ಮುಚ್ಚಿತ್ತು. ಕೆಲವು ದಲಿತ ಸಂಘಟನೆಗಳು ಅಂಬೇಡ್ಕರ್‌ ಪುತ್ಥಳಿಗೆ ಹೊದಿಸಿರುವ ಬಟ್ಟೆ ತೆರವುಗೊಳಿಸಿ ಅಧಿಕೃತವಾಗಿ ಪ್ರತಿಷ್ಠಾಪಿಸಬೇಕು ಎಂದು ಮನವಿ, ಪ್ರತಿಭಟನೆ, ಹೋರಾಟ ನಡೆಸಿದ್ದರು. ಅಂದಿನಿಂದಲೂ ಪುತ್ಥಳಿ ಒಂದಲ್ಲ ಒಂದು ರೀತಿಯಲ್ಲಿ ವಿವಾದದ ಕೇಂದ್ರ ಬಿಂದುವಾಗಿತ್ತು.

ಅಂಬೇಡ್ಕರ್‌ ಅಥವಾ ಯಾವುದೇ ನಾಯಕರ, ರಾಷ್ಟ್ರೀಯ ವ್ಯಕ್ತಿಗಳ ಪುತ್ಥಳಿ ಪ್ರತಿಷ್ಠಾಪಿಸಬೇಕಾದರೆ ಕಾನೂನಿನಂತೆ ಅನುಮತಿ ಪಡೆದುಕೊಳ್ಳಬೇಕು. ಹೀಗಾಗಿ ರಾತ್ರೋರಾತ್ರಿ ಅಂಬೇಡ್ಕರ್‌ ಪುತ್ಥಳಿಯನ್ನು ತಂದಿಟ್ಟು ಸಮಾಜದಲ್ಲಿ ಅಶಾಂತಿಗೆ ಕಾರಣವಾದವರ ವಿರುದ್ಧ ತಾಲ್ಲೂಕು ಆಡಳಿತ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಕಾನೂನಿನಂತೆ ಆರೋಪಿಗಳನ್ನು ಪತ್ತೆಮಾಡಿ ಮೊಕದ್ದಮೆ ಹೂಡಿದೆ.

ADVERTISEMENT

ಸರ್ಕಾರಿ ಶಾಲೆ ಆವರಣದಲ್ಲಿ ಅನುಮತಿ ಪಡೆಯದೆ ಪುತ್ಥಳಿ ಪ್ರತಿಷ್ಠಾಪಿಸಲು ಸಾಧ್ಯವಿಲ್ಲ ಎಂಬುದು ತಾಲ್ಲೂಕು ಮತ್ತು ಜಿಲ್ಲಾಡಳಿತದ ವಾದ. ಪ್ರತಿಮೆಯನ್ನು ಕೊಳಕು ಬಟ್ಟೆಯಿಂದ ಮುಚ್ಚಿರುವುದು ಖಂಡನೀಯ. ತಾಲ್ಲೂಕು ಮತ್ತು ಜಿಲ್ಲಾಡಳಿತವೇ ಅಧಿಕೃತವಾಗಿ ಪ್ರತಿಷ್ಠಾಪಿಸಲಿ ಎಂದು ಕೆಲವು ದಲಿತಪರ ಸಂಘಟನೆಗಳ ಒತ್ತಾಯ.

ಚಿಂತಾಮಣಿ ಬಂದ್‌: ಅಂಬೇಡ್ಕರ್‌ ಪುತ್ಥಳಿಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಕೆಲವು ದಲಿತಪರ ಸಂಘಟನೆಗಳು ಮೇ 22 ಗುರುವಾರ ಚಿಂತಾಮಣಿ ಬಂದ್‌ಗೆ ಕರೆ ನೀಡಿವೆ. ದಲಿತ ಸಂಘಟನೆಗಳು ಎರಡು ಬಣಗಳಾಗಿವೆ. ಒಂದು ಬಣದವರು ತಾಲ್ಲೂಕು ಮತ್ತು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ್ದರೆ ಮತ್ತೊಂದು ಬಣ ಆರಂಭದಿಂದ ತಟಸ್ಥ ನೀತಿಯನ್ನು ಅನುಸರಿಸುತ್ತಿದೆ.

ಬಂದ್‌ಗೆ ಬೆಂಬಲ: ಅಂಬೇಡ್ಕರ್ ಪುತ್ಥಳಿಯನ್ನು ರಾತ್ರೋರಾತ್ರಿ ತಾಲ್ಲೂಕು ಆಡಳಿತ ತೆರವುಗೊಳಿಸಿದ್ದನ್ನು ಖಂಡಿಸಿ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಕರೆ ನೀಡಿರುವ ಬಂದ್‌ಗೆ ಕ್ಷೇತ್ರದ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಬೆಂಬಲ ಘೋಷಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿ, ತಾಲ್ಲೂಕು ಆಡಳಿತಕ್ಕೆ ಒಂದು ವೇಳೆ ನ್ಯಾಯಾಲಯದ ಆದೇಶವಾಗಿದ್ದರೆ ರಾತೋರಾತ್ರಿ ತೆರವುಗೊಳಿಸುವ ಪರಿಸ್ಥಿತಿ ಯಾಕೆ ಬಂತು. ನ್ಯಾಯಾಲಯದ ಆದೇಶ ಏನಿದೆ ಎಂಬುದನ್ನು ಪರಿಶೀಲನೆ ನಡೆಸಿ ಮುಂದಿನ ಹೋರಾಟಗಳಿಗೆ ಬೆಂಬಲ ನೀಡಲಾಗುವುದು ಎಂದರು.

ಬಿಜೆಪಿ ಬೆಂಬಲ: ಬಿಜೆಪಿ ಸಹ ಚಿಂತಾಮಣಿ ಬಂದ್‌ಗೆ ಬೆಂಬಲ ನೀಡುವುದಾಗಿ ಮುಖಂಡ ವೇಣುಗೋಪಾಲ್‌ ತಿಳಿಸಿದ್ದಾರೆ.

ಚಿಂತಾಮಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿದ್ದ ಅಂಬೇಡ್ಕರ್‌ ಪುತ್ಥಳಿಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ ದಲಿತಪರ ಮುಖಂಡರು ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.