ADVERTISEMENT

ಎತ್ತಿನಹೊಳೆ ಯೋಜನೆ ಅಧ್ಯಯನಕ್ಕೆ ಬೈಕ್‌ನಲ್ಲಿ 4 ದಿನ ಪ್ರವಾಸ ಮಾಡಿದ ಪರಿಸರವಾದಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 13:57 IST
Last Updated 26 ಫೆಬ್ರುವರಿ 2025, 13:57 IST
ಎತ್ತಿನಹೊಳೆ ಅಧ್ಯಯನ ಪ್ರವಾಸದಲ್ಲಿ ಚೌಡಪ್ಪ
ಎತ್ತಿನಹೊಳೆ ಅಧ್ಯಯನ ಪ್ರವಾಸದಲ್ಲಿ ಚೌಡಪ್ಪ   

ಚಿಕ್ಕಬಳ್ಳಾಪುರ: ಗೌರಿಬಿದನೂರಿನ ಪರಿಸರವಾದಿ ಚೌಡಪ್ಪ ಎತ್ತಿನಹೊಳೆ ಯೋಜನೆಯ ಅಧ್ಯಯನಕ್ಕೆ ಬೈಕ್‌ನಲ್ಲಿ ಇತ್ತೀಚೆಗೆ ಪ್ರವಾಸ ನಡೆಸಿದ್ದಾರೆ. ನಾಲ್ಕು ದಿನಗಳ ಪ್ರವಾಸದಲ್ಲಿ ವಾಣಿವಿಲಾಸ ಸಾಗರ, ಸಕಲೇಶಪುರ, ಕಾಡುಮನೆ ಹೊಳೆ, ಎತ್ತಿನಹೊಳೆ, ಕೇರಿ ಹೊಳೆ, ಹೊಂಗಡಹಳ್ಳ, ಗುಂಡ್ಯ, ಉಪ್ಪಿನಂಗಡಿಯವರೆಗೆ ಬೈಕ್‌ನಲ್ಲಿ ತೆರಳಿದ್ದರು.

ರೈತರು, ಸಕಲೇಶಪುರ ಹಾಗೂ ಎತ್ತಿನಹೊಳೆ ವ್ಯಾಪ್ತಿಯಲ್ಲಿನ ಮಳೆಯ ಬಗ್ಗೆ ಅಧ್ಯಯನ ನಡೆಸಿದವರು, ಅಧಿಕಾರಿಗಳು...ಹೀಗೆ ನಾನಾ ವರ್ಗದ ಜನರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ತಾವು ನಡೆಸಿದ ಈ ಬೈಕ್ ಯಾತ್ರೆ ವೇಳೆ ಕಂಡ ಎತ್ತಿನಹೊಳೆ ಯೋಜನೆಯ ನೀರಿನ ಪ್ರಮಾಣ ಮತ್ತಿತರ ವಿಚಾರಗಳನ್ನು ಸರ್ಕಾರದ ಗಮನಕ್ಕೂ ತರಲು ಮುಂದಾಗಿದ್ದಾರೆ. ಎತ್ತಿನಹೊಳೆ ಯೋಜನೆಯ ನೀರು ಚಿಕ್ಕಬಳ್ಳಾಪುರ ಜಿಲ್ಲೆಗೆ ಬರುವುದಿಲ್ಲ. ಒಂದು ವೇಳೆ ಒಂದರೂ ಅಂತರ್ಜಲ ಅಭಿವೃದ್ಧಿ ಅಸಾಧ್ಯ ಎನ್ನುವುದು ಅವರ ಖಚಿತ ಅಭಿಪ್ರಾಯ.

ADVERTISEMENT

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ನಡೆಯುವ ಸಂವಾದಗಳಲ್ಲಿ, ವಾದ ಪ್ರತಿವಾದಗಳಲ್ಲಿ ಈ ಹಿಂದಿನಿಂದಲೂ ಚೌಡಪ್ಪ ಭಾಗಿ ಆಗುತ್ತಿದ್ದಾರೆ.

‘ವಾಣಿ ವಿಲಾಸ ಸಾಗರಕ್ಕೆ ಎಷ್ಟು ನೀರು ಬಂದಿದೆ ಎನ್ನುವುದನ್ನು ಗಮನಿಸುವ ಮತ್ತು ಅಂಕಿ ಅಂಶ ಸಂಗ್ರಹಿಸುವ ಮೂಲಕ ಪ್ರವಾಸ ಆರಂಭಿಸಿದೆ. ಹುಳಿಯಾರು, ತಿಪಟೂರು, ಹಾಸನದ ಮೂಲಕ ಸಕಲೇಶಪುರ ತಲುಪಿದೆ. ಅಲ್ಲಿಂದ ಉಪ್ಪಿನಂಗಡಿಗೆ ತೆರಳಿದೆ’ ಎಂದು ತಮ್ಮ ಅಧ್ಯಯನ ಪ್ರವಾಸದ ಬಗ್ಗೆ ತಿಳಿಸುವರು ಚೌಡಪ್ಪ.

ಎತ್ತಿನಹೊಳೆ ಅಸಂಬದ್ಧ ಮತ್ತು ಅವೈಜ್ಞಾನಿಕ ಯೋಜನೆ. ರನ್ನು ಸಂಗ್ರಹಿಸಲು ಯೋಜನೆ ಸ್ಥಳದಲ್ಲಿ ಯಾವುದೇ ಜಲಾಶಯ ಸಹ ನಿರ್ಮಿಸಿಲ್ಲ. 24 ಟಿಎಂಸಿ ಅಡಿ ನೀರು ದೊರೆಯುತ್ತದೆ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ. ಆದರೆ ಆ ಪ್ರಮಾಣದ ನೀರು ಖಂಡಿತ ದೊರೆಯುವುದಿಲ್ಲ. ವಾರ್ಷಿಕ 6,250 ಮಿ.ಮೀ ಪ್ರಮಾಣದಲ್ಲಿ ಇಲ್ಲಿ ಮಳೆ ಬೀಳುವುದಿಲ್ಲ. 75 ವರ್ಷಗಳಲ್ಲಿ ಈ ಭಾಗದಲ್ಲಿ ಬಿದ್ದ ಮಳೆ ಪ್ರಮಾಣ ಗಮನಿಸಿದರೆ ಇದು ತಿಳಿಯುತ್ತದೆ ಎಂದು ವಿವರಿಸಿದರು.

‘2030ನೇ ಸಾಲಿಗೆ  ಎತ್ತಿನಹೊಳೆ ಯೋಜನೆ ವ್ಯಾಪ್ತಿಯ 28 ತಾಲ್ಲೂಕುಗಳಲ್ಲಿ ಜನಸಂಖ್ಯೆ 90 ಲಕ್ಷವಾಗುತ್ತದೆ. ಈ ಎಲ್ಲ ತಾಲ್ಲೂಕಿಗೆ ನೀರು ಕೊಡುವುದಾಗಿ ಸರ್ಕಾರ ಹೇಳುತ್ತದೆ. ಆದರೆ ಇಂದಿಗೂ ನೀರು ಸಂಗ್ರಹಕ್ಕೆ ಡ್ಯಾಂ, ಅಣೆಕಟ್ಟೆ ನಿರ್ಮಾಣವಾಗಿಲ್ಲ. ಹೀಗಿದ್ದ ಮೇಲೆ ಎಲ್ಲಿ ನೀರು ಸಂಗ್ರಹವಾಗುತ್ತದೆ ಎಂದು ಪ್ರಶ್ನಿಸಿದರು.

ರೈತರು, ನೀರಾವರಿ ಹೋರಾಟಗಾರರು, ಕಾಫಿ ಎಸ್ಟೇಟ್ ಮಾಲೀಕರು, ಮಳೆ ಪ್ರಮಾಣದ ಬಗ್ಗೆ ಆಸಕ್ತಿ ಹೊಂದಿರುವವರು ಹೀಗೆ ಹಲವು ಜನರನ್ನು ಭೇಟಿ ಮಾಡಿದೆ. 14 ಟಿಎಂಸಿ ಅಡಿ ನೀರು ದೊರೆಯುತ್ತದೆ. ಆದರೆ 24 ಟಿಎಂಸಿ ಅಡಿ ಎಂದು ಏಕೆ ಸುಳ್ಳು ಹೇಳಿದ್ದಾರೆ? ಯೋಜನೆಯ ವೆಚ್ಚ ಹೆಚ್ಚುತ್ತಲೇ ಇದೆ. ₹ 33 ಸಾವಿರ ಕೋಟಿ ವೆಚ್ಚ ಮಾಡಿದರೂ ಕೋಲಾರ, ಚಿಕ್ಕಬಳ್ಳಾಪುರದತ್ತ ನೀರು ಬರುವುದಿಲ್ಲ ಎಂದರು.

ಈ ಯೋಜನೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಪ್ರಮುಖವಾಗಿ ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸಿದ್ದು. ಇಲ್ಲಿನ ನೀರು ನೋಡಿದರೆ ನಿಮ್ಮ ಜಿಲ್ಲೆಗಳಿಗೆ ನೀರು ಹರಿಯುತ್ತದೆಯೇ ಎನ್ನುವುದು ಅನುಮಾನ ಎಂದು ನಾನು ಭೇಟಿ ಮಾಡಿದ ಯೋಜನೆಯ ಭಾಗದ ನೀರಾವರಿ ತಜ್ಞರು ತಿಳಿಸಿದರು ಎಂದರು.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಅಂತರ್ಜಲ ಅಭಿವೃದ್ಧಿ ಮತ್ತು ಕುಡಿಯುವ ನೀರಿಗೆ ಎತ್ತಿನಹೊಳೆ ಯೋಜನೆ ರೂಪಿಸುತ್ತೇವೆ ಎಂದು ಸರ್ಕಾರ ಆರಂಭದಿಂದಲೂ ತಿಳಿಸುತ್ತಿದೆ. ಈಗ ನಮ್ಮ ಜಿಲ್ಲೆಗೆ ನೀರು ಬರುವುದೇ ಅನುಮಾನ ಎನ್ನುವ ಸ್ಥಿತಿ ಇದೆ. ಒಂದು ವೇಳೆ ನೀರು ಬಂದರೂ ಶೇ 5ರಷ್ಟು ನೀರು ತುಂಬಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ವರದಿ ಬಿಡುಗಡೆ ಮಾಡುವೆ

ನನ್ನ ಅಧ್ಯಯನ ಪ್ರವಾಸದ ವರದಿಯನ್ನು ಸಿದ್ಧಗೊಳಿಸುತ್ತಿದ್ದೇನೆ. ಈ ವರದಿಯನ್ನು ಜಿಲ್ಲಾಧಿಕಾರಿ ಜಿಲ್ಲೆಯ ಎಲ್ಲ ತಹಶೀಲ್ದಾರರು ಮತ್ತು ಸರ್ಕಾರಕ್ಕೆ ಸಲ್ಲಿಸಲಾಗುವುದು. ಬಹಿರಂಗವಾಗಿ ಬಿಡುಗಡೆ ಸಹ ಮಾಡುವೆ. ನಂತರ ಈ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು ಎಂದು ಚೌಡಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.