ADVERTISEMENT

ಬಾಗೇಪಲ್ಲಿ ಪುರಸಭೆ: ದಶಕ ಕಳೆದರೂ ಸಮಸ್ಯೆಗಿಲ್ಲ ಪರಿಹಾರ

ಪಿ.ಎಸ್.ರಾಜೇಶ್
Published 17 ಫೆಬ್ರುವರಿ 2022, 7:22 IST
Last Updated 17 ಫೆಬ್ರುವರಿ 2022, 7:22 IST
ಬಾಗೇಪಲ್ಲಿ ಪಟ್ಟಣದ ಸಂತೇಮೈದಾನದ ರಸ್ತೆಯಲ್ಲಿ ಬಿದ್ದಿರುವ ಒಳಚರಂಡಿಯ ಗುಂಡಿಗೆ ಅಡ್ಡವಾಗಿ ಬ್ಯಾರಿಕೇಡ್ ಇಟ್ಟಿರುವುದು
ಬಾಗೇಪಲ್ಲಿ ಪಟ್ಟಣದ ಸಂತೇಮೈದಾನದ ರಸ್ತೆಯಲ್ಲಿ ಬಿದ್ದಿರುವ ಒಳಚರಂಡಿಯ ಗುಂಡಿಗೆ ಅಡ್ಡವಾಗಿ ಬ್ಯಾರಿಕೇಡ್ ಇಟ್ಟಿರುವುದು   

ಬಾಗೇಪಲ್ಲಿ: ಪಟ್ಟಣ ಪಂಚಾಯಿತಿಯಿಂದ ಪುರಸಭೆ ಆಗಿ 10 ವರ್ಷಗಳು ಕಳೆದರೂ, ಪಟ್ಟಣದಲ್ಲಿ ಕುಡಿಯುವ ನೀರು, ಸಿ.ಸಿ ರಸ್ತೆ, ಮುಖ್ಯರಸ್ತೆಯಲ್ಲಿ ಶೌಚಾಲಯಗಳ ಕೊರತೆ, ಅಭಿವೃದ್ಧಿಯಾಗದ ಉದ್ಯಾನಗಳು, ವಾರದ ಸಂತೆಮೈದಾನ, ಒಳಚರಂಡಿ ಕಳಪೆ ಕಾಮಗಾರಿ, ಬಳಕೆಗೆ ಬಾರದ ಮಳಿಗೆಗಳು, ಹಂಚಿಕೆಯಾಗದ ನಿವೇಶನ-ಮನೆ, ವಸೂಲಿ ಆಗದ ಕಂದಾಯ, ಕರ ಬಾಡಿಗೆ, ಹಾಗೂ ಇ ಖಾತೆಗಳನ್ನು ಆಗದೇ ಇರುವುದರಿಂದ ಪಟ್ಟಣದ ಅಭಿವೃದ್ಧಿ ನಿರೀಕ್ಷಿಸಿದಷ್ಟು ಕಾಣಸಿಗುತ್ತಿಲ್ಲ..

ಹೀಗೆ ಹತ್ತಾರು ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂಬುದು ನಾಗರಿಕರ ಅಭಿಪ್ರಾಯ.

ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳು ಇವೆ. ನ್ಯಾಷನಲ್ ಕಾಲೇಜಿನಿಂದ ಚಿತ್ರಾವತಿ ಮೇಲುಸೇತುವೆಯವರಿಗೂ, ರಾಮಸ್ವಾಮಿಪಲ್ಲಿಯಿಂದ ಕೊತ್ತಪಲ್ಲಿ ಗ್ರಾಮದವರಿಗೂ ವ್ಯಾಪಿಸಿದೆ. ಒಂದೇ ಒಂದು ಮುಖ್ಯರಸ್ತೆ ಇದೆ. ಸರ್ಕಾರಿ, ಖಾಸಗಿ ಕಚೇರಿಗಳು, ಶಾಲಾ-ಕಾಲೇಜುಗಳು ಇವೆ. ಬಸ್ ನಿಲ್ದಾಣದ ಮುಂಭಾಗದಿಂದ ಉರ್ದುಶಾಲೆಯವರಿಗೂ ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚಾಗಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯಗಳು ಇಲ್ಲದೇ, ಜನರು ಪರದಾಡುವಂತಾಗಿದೆ. ಪ್ರತ್ಯೇಕವಾದ ಖಾಸಗಿ ಬಸ್ ನಿಲ್ದಾಣ, ಕಾರು, ಆಟೋ, ಟೆಂಪೋಗಳ ನಿಲ್ದಾಣಗಳು ಇಲ್ಲ. ತರಕಾರಿ, ಮಾಂಸ, ಮೀನು ಮಾರುಕಟ್ಟೆಗೆ ಸ್ಥಳ ಇಲ್ಲ. ರಸ್ತೆ ಅತಿಕ್ರಮಣ ಮಾಡಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗಿದೆ.

ADVERTISEMENT

ಪಟ್ಟಣದ ಡಾ.ಎಚ್.ಎನ್. ರೆಡ್ಡಿಕೆರೆ ಪಕ್ಕದಲ್ಲಿ ನಿರ್ಮಿಸಿರುವ, ಏಕೋ ಉದ್ಯಾನಗಳಲ್ಲಿ ಸೂಕ್ತ ನಿರ್ವಹಣೆ ಕೊರತೆಯಿಂದ, ಅಭಿವೃದ್ಧಿ ಆಗಿಲ್ಲ. ಪಟ್ಟಣದ ಚರಂಡಿಗಳನ್ನು, ಖಾಲಿ ನಿವೇಶನಗಳನ್ನು ಸ್ವಚ್ಛ ಮಾಡಿಲ್ಲ. ಪಟ್ಟಣದ ಕೊರ್ಲಕುಂಟೆ ಕೆರೆಗೆ ಕಸ-ಕಡ್ಡಿ, ಮಾಂಸದ ತ್ಯಾಜ್ಯ, ತುಂಡುಗಳು, ಸತ್ತ ಪ್ರಾಣಿಗಳು, ಮಣ್ಣನ್ನು ಹಾಕುತ್ತಿರುವುದರಿಂದ ಕೆರೆಯ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಪಟ್ಟಣದ 1, 2ನೇ ವಾರ್ಡ್‍ನ ವಾಲ್ಮೀಕಿ ನಗರ, ಗೂಳೂರು ಕಡೆಗೆ, ಕಾಲೇಜಿನ ಹಿಂಭಾಗದ ಅಧ್ಯಕ್ಷೆ ಪ್ರತಿನಿಧಿಸುವ 5 ನೇ ವಾರ್ಡ್, ಪೊಲೀಸ್ ವಸತಿ ಗೃಹಗಳಿಗೆ ಸಂಚರಿಸುವ ಕೊತ್ತಪಲ್ಲಿ ರಸ್ತೆ, ಅಂಬೇಡ್ಕರ್ ಕಾಲೋನಿ, ಕುಂಬಾರಪೇಟೆ, ಆವುಲಮಂದೆ ರಸ್ತೆ, ಸಂತೇಮೈದಾನದ ರಸ್ತೆ, ಹೆಲ್ತ್ ಕ್ವಾಟ್ರರ್ಸ್, 21, 22 ನೇ ವಾರ್ಡ್‍ಗಳಲ್ಲಿ ಸುಗಮ ಸಂಚಾರಕ್ಕೆ ಸಿಸಿ ರಸ್ತೆಗಳು ಇಲ್ಲ. ರಸ್ತೆಗಳು ಹದಗೆಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.