ADVERTISEMENT

ಚಿಕ್ಕಬಳ್ಳಾಪುರ: ವಾರ್ಷಿಕ ಕ್ರೀಡಾಕೂಟ ವಿದ್ಯುಕ್ತ ತೆರೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 14:05 IST
Last Updated 19 ಜನವರಿ 2020, 14:05 IST
ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಸುಧಾಕರ್ ಅವರು ವಿಜೇತರಿಗೆ ಬಹುಮಾನ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಸುಧಾಕರ್ ಅವರು ವಿಜೇತರಿಗೆ ಬಹುಮಾನ ಪ್ರದಾನ ಮಾಡಿದರು.   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ನಡೆದಿದ್ದ ಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕೂಟಕ್ಕೆ ಭಾನುವಾರ ವಿದ್ಯುಕ್ತವಾಗಿ ತೆರೆ ಬಿತ್ತು. ಪ್ರೇಮಾಮೃತಂ ಸಭಾಭವನದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ.ಕೆ.ಸುಧಾಕರ್ ಅವರು, ‘ಆಸೆಯೇ ದುಃಖಕ್ಕೆ ಮೂಲವಾದರೆ ಎಲ್ಲರನ್ನೂ ಪ್ರೇಮಿಸಿ ಸರ್ವರ ಒಳಿತಿಗಾಗಿ ಸೇವೆ ಸಲ್ಲಿಸುವುದೇ ಲೋಕ ಕಲ್ಯಾಣ. ಅದರಲ್ಲಿಯೇ ಎಲ್ಲರ ಸುಖ, ಶಾಂತಿ, ನೆಮ್ಮದಿ ಮಡುಗಟ್ಟಿರುತ್ತದೆ. ನಾಗರಿಕ ಸಮಾಜ ನೆಮ್ಮದಿ ಕಾಣಬೇಕಾದರೆ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಶಿಕ್ಷಣ ದೊರೆಯಬೇಕು. ಅಂತಹ ಶಿಕ್ಷಣ ದೊರೆತರೆ ಎಲ್ಲರೂ ವಿಶ್ವ ಮಾನವರಾಗಿ ಬೆಳೆಯುತ್ತಾರೆ’ ಎಂದು ಹೇಳಿದರು.

‘ಇದು ಸೇವೆಯ ಕೈಂಕರ್ಯದಲ್ಲಿ ತೊಡಗಿದವರಿಗೆಲ್ಲ ಒಂದು ಆದರ್ಶ, ಎಲ್ಲರೂ ಸಮಾನ ಸುಖಿಗಳಾಗಬೇಕು. ಸರ್ವರಿಗೂ ಸಮಪಾಲು. ಸರ್ವರಿಗೂ ಸಮಬಾಳು ಎಂಬ ಸಮತಾವಾದಕ್ಕೆ ಜೀವಂತ ಉದಾಹರಣೆಯೇ ಸತ್ಯಸಾಯಿ ಸಂಸ್ಥೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ನಿವೃತ್ತ ಡಿಜಿಪಿ ಶಂಕರ ಬಿದರಿ ಮಾತನಾಡಿ, ‘ಪ್ರೀತಿ, ಸ್ನೇಹ, ಸೌಹಾರ್ದ ಬಾಬಾ ಅವರ ಸಂದೇಶ. ಸದಾ ಮಾನವ ಕಲ್ಯಾಣದ ಕುರೀತೇ ಚಿಂತಿಸುವ ಅವರು ಜಗತ್ತಿನ ಆಸ್ತಿ. ಅವರ ಪ್ರೇಮ ಕಾರುಣ್ಯದ ಪ್ರತೀಕಗಳೇ ಈ ಸಂಸ್ಥೆಯ ವಿದ್ಯಾರ್ಥಿಗಳು. ಅವರಿಂದ ಮುಂದೆ ಜಗತ್ತಿನ ಕಲ್ಯಾಣವಾಗುವುದು’ ಎಂದು ತಿಳಿಸಿದರು.

‘ಜಗತ್ತು ಕ್ಷೋಭೆಗೆ ಒಳಗಾಗಿದ್ದಾಗ ಬಾಬಾ ಅವರು ಮಾನವೀಯ ಸಂದೇಶ ಸಾರಿ ಶಾಂತಿ ನೆಮ್ಮದಿಗೆ ಬುನಾದಿ ಹಾಕಿದ್ದಾರೆ. ಅದರ ಪ್ರತಿಫಲ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಕಾರ್ಯ ಚಟುವಟಿಕೆ, ಶಿಕ್ಷಕರ ನಡೆನುಡಿಯಲ್ಲಿ ಎದ್ದು ತೋರುತ್ತಿದೆ’ ಎಂದು ಶ್ಲಾಘಿಸಿದರು.

ಸದ್ಗುರು ಮಧುಸೂದನ ಸಾಯಿ ಮಾತನಾಡಿದ, ‘ಸಂಸ್ಥೆ, ಸಹಕಾರ ಮತ್ತು ಸರಕಾರ ಒಂದಾಗಿ ಕೈ ಜೋಡಿಸಿದಾಗ ಮಹತ್ಕಾರ್ಯ ಸಾಧಿತವಾಗುತ್ತದೆ. ನಮ್ಮೊಳಗೆ ಸದಾ ಸಮನ್ವಯವಿದ್ದಾಗ ಯಾವುದೇ ಭಯವಿಲ್ಲ. ಎಂತಹ ಅಸಾಧ್ಯವಾದ ಕಾರ್ಯವೂ ಸಾಧಿತವಾಗುತ್ತದೆ. ಮುಂದಿನ ದಿನಗಳಲ್ಲಿ ಭಕ್ತರ ನೆರವಿನಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ ಸತ್ಯಸಾಯಿ ಸಂಸ್ಥೆಗಳು ತಲೆ ಎತ್ತಿ ಜಗತ್ತಿನ ಕಲ್ಯಾಣಕ್ಕೆ ನೆರವನ್ನು ನೀಡಲಿವೆ. ಆ ದಿನ ಬಹುಬೇಗನೆ ಬರುವುದು’ ಎಂದು ತಿಳಿಸಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ, ಯುನಿಸೆಫ್ ಸಂಸ್ಥೆಯ ಪ್ರತಿನಿಧಿ ಡಾನಾ ಗುಡ್‍ಮನ್, ಕೆ.ಪಿ.ಸಾಯಿಲೀಲಾ, ಕಲಬುರ್ಗಿ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ, ಶಿಕ್ಷಣ ತಜ್ಞ ಕೆ.ಪ್ರಭಾಕರ ಭಟ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.