ADVERTISEMENT

ನಗರಸಭೆಯಿಂದ ಮತ್ತೊಂದು ಹೊಸ ಸಂಕೀರ್ಣ

ನಗರದ ಕೃಷ್ಣ ಟಾಕೀಜ್ ರಸ್ತೆಯಲ್ಲಿದ್ದ ಹಳೆ ಕಟ್ಟಡದ ಜಾಗದಲ್ಲಿಯೇ ಹೊಸ ಕಟ್ಟಡ ನಿರ್ಮಿಸುವ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 13:42 IST
Last Updated 4 ಜುಲೈ 2020, 13:42 IST
ನಗರದ ಕೃಷ್ಣ ಟಾಕೀಜ್ ರಸ್ತೆಯಲ್ಲಿದ್ದ ಹಳೆ ಕಟ್ಟಡವನ್ನು ನೆಲಸಮಗೊಳಿಸಲಾಯಿತು. 
ನಗರದ ಕೃಷ್ಣ ಟಾಕೀಜ್ ರಸ್ತೆಯಲ್ಲಿದ್ದ ಹಳೆ ಕಟ್ಟಡವನ್ನು ನೆಲಸಮಗೊಳಿಸಲಾಯಿತು.    

ಚಿಕ್ಕಬಳ್ಳಾಪುರ: ನಗರದ ಕೃಷ್ಣಾ ಟಾಕೀಜ್‌ ರಸ್ತೆಯಲ್ಲಿರುವ ಹಳೆಯ ವಾಣಿಜ್ಯ ಮಳಿಗೆಗಳನ್ನು ಕೆಡವಿ ಅದೇ ಜಾಗದಲ್ಲಿ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸಲು ನಗರಸಭೆ ಮುಂದಾಗಿದೆ.

ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿದ್ದ ಮಳಿಗೆಗಳು ಶಿಥಿಲಗೊಂಡ ಕಾರಣಕ್ಕೆ ಅವುಗಳನ್ನು ತೆಗೆದು ಹಾಕಿ, ಅಲ್ಲೇ ಹೊಸ ಕಟ್ಟಡ ನಿರ್ಮಿಸುವ ತೀರ್ಮಾನವನ್ನು ನಗರಸಭೆ ಕಳೆದ ವರ್ಷವೇ ತೆಗೆದುಕೊಂಡಿತ್ತು.

2019ರ ಡಿಸೆಂಬರ್‌ನಲ್ಲಿಯೇ ಮಳಿಗೆ ತೆರವುಗೊಳಿಸುವಂತೆ ಬಾಡಿಗೆದಾರರಿಗೆ ನೋಟಿಸ್‌ ನೀಡಿ, ತೆರವಿಗೆ 15 ದಿನಗಳ ಕಾಲಾವಕಾಶ ನೀಡಿತ್ತು. ಕಳೆದ ಜನವರಿಯಲ್ಲಿ ನಡೆಯಬೇಕಿದ್ದ ಶಿಥಿಲ ಕಟ್ಟಡ ನೆಲಸಮಗೊಳಿಸುವ ಕಾರ್ಯ ನಗರಸಭೆ ಚುನಾವಣೆ ನೀತಿ ಸಂಹಿತೆ, ಲಾಕ್‌ಡೌನ್‌ ಕಾರಣಕ್ಕೆ ಮುಂದೂಡುತ್ತಲೇ ಬಂದಿತ್ತು.

ADVERTISEMENT

ಇದೀಗ ಕಟ್ಟಡ ನೆಲಸಮಗೊಳಿಸಲಾಗಿದೆ. ಶೀಘ್ರದಲ್ಲಿಯೇ ಆ ಜಾಗದಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿ ಯೋಜನೆ ಅಡಿ ಸುಮಾರು ₹73 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಹೊಸ ಕಟ್ಟಡ ನಿರ್ಮಿಸುವ ಕಾಮಗಾರಿಗೆ ಇದೀಗ ಚಾಲನೆ ದೊರೆಯಲಿದೆ.

ಹೊಸದಾಗಿ ನಿರ್ಮಾಣವಾಗುವ ವಾಣಿಜ್ಯ ಸಂಕೀರ್ಣದಲ್ಲಿ ನೆಲ ಮಹಡಿಯಲ್ಲಿ 14 ವಾಣಿಜ್ಯ ಮಳಿಗೆಗಳು ಇರಲಿವೆ. ಮೊದಲ ಮಹಡಿಯಲ್ಲಿ ಮೂರು ಸಭಾಂಗಣಗಳನ್ನು ನಿರ್ಮಿಸಲು ನಗರಸಭೆ ಯೋಜನೆ ರೂಪಿಸಿದೆ.

‘ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಆರು ತಿಂಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸುತ್ತೇವೆ’ ಎಂದು ನಗರಸಭೆ ಆಯುಕ್ತ ಡಿ.ಲೋಹಿತ್ ತಿಳಿಸಿದರು.

ಧೂಳು ತಿನ್ನುತ್ತಿರುವ ಹಳೆ ಸಂಕೀರ್ಣಗಳು

‘ರಾಜ್ಯ ಹಣಕಾಸು ನಿಗಮ’ (ಎಸ್ಎಫ್‌ಸಿ) ಮತ್ತು ‘ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆ’ (ಸಿಎಂಎಸ್‌ಎಂಟಿಡಿಪಿ) ಅನುದಾನಗಳಡಿ ನಗರಸಭೆ 2012ರಲ್ಲಿ ಸಂತೆ ಮೈದಾನ ಮತ್ತು ಭುವನೇಶ್ವರ ವೃತ್ತದಲ್ಲಿ ಮಾರುಕಟ್ಟೆ ಸಂಕೀರ್ಣಗಳನ್ನು ನಿರ್ಮಿಸಿದೆ. ಈ ಎರಡು ಸಂಕೀರ್ಣಗಳಲ್ಲಿ ಸೇರಿ 125 ಮಳಿಗೆಗಳಿವೆ. ಹತ್ತಾರು ಬಾರಿ ಮಳಿಗೆ ಬಾಡಿಗೆ ನೀಡಲು ಟೆಂಡರ್‌ ಪ್ರಕ್ರಿಯೆ ನಡೆಸಿದರೂ ‘ದುಬಾರಿ’ ಎನ್ನುವ ಕಾರಣಕ್ಕೆ ವರ್ತಕರು ಮುಂದೆ ಬರುತ್ತಿಲ್ಲ.

125 ಮಳಿಗೆಗಳ ಪೈಕಿ ಕೇವಲ 56 ಮಳಿಗೆಗಳಿಗೆ ಮಾತ್ರ ಬಾಡಿಗೆದಾರರು ಬಂದಿದ್ದಾರೆ. ಸದ್ಯ ಎರಡು ಸಂಕೀರ್ಣಗಳ ಪೈಕಿ 69 ಮಳಿಗೆಗಳು ದೂಳು ತಿನ್ನುತ್ತಿವೆ. ಅವುಗಳುಕುಡುಕರು, ಪುಂಡ ಪೋಕರಿಗಳಿಗೆ ಅನೈತಿಕ ಚಟುವಟಿಕೆಗಳ ಆಶ್ರಯ ತಾಣಗಳಾಗಿ ಬದಲಾಗುತ್ತಿವೆ.

ನಗರಸಭೆ ಅಧಿಕಾರಿಗಳು ಬಾಡಿಗೆ, ಠೇವಣಿ ಮೊತ್ತವನ್ನು ಪರಿಷ್ಕರಿಸಿ ಬಡವರ ಕೈಗೆಟುವ ದರ ನಿಗದಿ ಮಾಡಿದರೆ ಬಡವರು ವ್ಯಾಪಾರ ಮಾಡಿಕೊಂಡು ಬದುಕುತ್ತಾರೆ. ಇನ್ನೊಂದೆಡೆ ನಗರಸಭೆಗೂ ಆದಾಯ ಬರಲಿದೆ ಎನ್ನುವುದು ವರ್ತಕರ ಅಭಿಪ್ರಾಯ.

‘ಈ ವಿಚಾರ ಹಲವು ವರ್ಷಗಳಿಂದ ಪ್ರತಿಧ್ವನಿಸುತ್ತಲೇ ಬಂದರೂ ಈವರೆಗೆ ಮತ್ತದೇ ಹರಾಜು ಪ್ರಕ್ರಿಯೆಯ ಪ್ರಹಸನದ ಹೊರತಾಗಿ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ. ನಗರಾಭಿವೃದ್ಧಿ ಇಲಾಖೆಯ ಮೇಲೆ ನಗರಸಭೆ ಸದಸ್ಯರು ಒತ್ತಡ ಹೇರಿ ಬಾಡಿಗೆ ದರ ಕಡಿಮೆ ಮಾಡಿಸುವ ಕೆಲಸ ಮಾಡಿಸಿದರೆ, ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿದ್ದು ಸಾರ್ಥಕವಾಗುತ್ತದೆ’ ಎನ್ನುತ್ತಾರೆ ವರ್ತಕ ಗೋಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.