ADVERTISEMENT

ಚಿಕ್ಕಬಳ್ಳಾಪುರ: ಮಾದರಿ ಕಾರ್ಯಗಳಿಗೆ ಆಯುಕ್ತರ ಮೆಚ್ಚುಗೆ

ವಿವಿಧೆಡೆ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿದ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 16:16 IST
Last Updated 3 ಸೆಪ್ಟೆಂಬರ್ 2020, 16:16 IST
ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ದೇವಸ್ಥಾನ ಹೊಸಹಳ್ಳಿಯ ಮಾದರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. 
ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ದೇವಸ್ಥಾನ ಹೊಸಹಳ್ಳಿಯ ಮಾದರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.    

ಚಿಕ್ಕಬಳ್ಳಾಪುರ: ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಗುರುವಾರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಮಾದರಿ ಪ್ರೌಢಶಾಲೆ ಹಾಗೂ ದೇವಸ್ಥಾನದ ಹೊಸಹಳ್ಳಿಯ ಅಂಗನವಾಡಿ ಸೇರಿದಂತೆ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಆಟದ ಮೈದಾನ, ಉದ್ಯಾನ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಮಹಾತ್ಮ ಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜಿಲ್ಲೆಯಾದ್ಯಂತ ಮಳೆ ನೀರು ಸಂರಕ್ಷಣೆ, ಆರೋಗ್ಯ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ದೇವಸ್ಥಾನದ ಹೊಸಹಳ್ಳಿ ಹಾಗೂ ಮುದ್ದೇನಹಳ್ಳಿ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಫ್ರೌಢ ಶಾಲೆಗೆ ಭೇಟಿ ನೀಡಿ ಆಕರ್ಷಣಿಯವಾಗಿ ವಿನ್ಯಾಸಗೊಳಿಸಿರುವ ಕಲಿಕಾ ಸಾಮಗ್ರಿಗಳು, ಕೊಠಡಿಗಳು, ಮಕ್ಕಳ ಆಟಿಕೆಗಳು, ಮೈದಾನವನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ADVERTISEMENT

ಅಗಲಗುರ್ಕಿ ಗ್ರಾಮ ಪಂಚಾಯಿತಿಯಲ್ಲಿ ಕೋವಿಡ್-19 ತುರ್ತು ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೈಗೊಂಡಿರುವ ವಿವಿಧ ಮುಂಜಾಗ್ರತಾ ಕ್ರಮಗಳು ಹಾಗೂ ಗ್ರಾಮ ಪಂಚಾಯಿತಿಯಲ್ಲಿರುವ ಕೊರೊನಾ ಸಹಾಯವಾಣಿ ಕೇಂದ್ರದ ಕಾರ್ಯಚಟುವಟಿಕೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಗ್ರಾಮ ಪಂಚಾಯಿತಿ ಕಾರ್ಯವಿಧಾನಗಳ ಬಗ್ಗೆ ಪರಿಶೀಲನೆ ನಡೆಸಿದರು.

ನರೇಗಾ ಯೋಜನೆಯಡಿ ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ನಿರ್ಮಾಣ ಮಾಡಿರುವ ಮಳೆ ನೀರು ಸಂಗ್ರಹ ಪದ್ದತಿ ಕಾಮಗಾರಿಯನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಸಂಗ್ರಹ ಪದ್ದತಿ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ‘ಕೋವಿಡ್ 19 ತಡೆಗಟ್ಟಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸುವ ಜತೆಗೆ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದರು.

ನಂತರ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಆರೋಗ್ಯ ಸೇವಾ ಕೇಂದ್ರಕ್ಕೆ ಹಾಗೂ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಮಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ‘ನರೇಗಾ ಯೋಜನೆ ಅಡಿ ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆ, ಕಾರ್ಮಿಕರಿಗೆ ಉದ್ಯೋಗ, ಆರೋಗ್ಯ ಹಾಗೂ ಶೈಕ್ಷಣಿಕ ಅಭಿವೃದ್ಧಿ ಮೊದಲ ಆದ್ಯತೆ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ನರೇಗಾ ಯೋಜನೆಯಡಿ ಕೆಲಸ ಮಾಡುವ ಗಂಡು ಮತ್ತು ಹೆಣ್ಣಿಗೆ ಸಮಾನವಾಗಿ ₹275 ಕೂಲಿ ನೀಡಲಾಗುತ್ತದೆ. ಒಂದು ಉದ್ಯೋಗ ಚೀಟಿಗೆ 100 ದಿನಗಳ ಕೆಲಸ ನೀಡಲಾಗುತ್ತದೆ. ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ.ನಾಗೇಶ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.