ADVERTISEMENT

ಮಹಿಳಾ ಸಂಘಗಳಿಗೆ ನೆರವು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 3:47 IST
Last Updated 7 ಮಾರ್ಚ್ 2021, 3:47 IST
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಗ್ರಾಮದ ಸಮುದಾಯ ಭವನದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಚೆಕ್ ವಿತರಿಸಿದರು. ಶಾಸಕ ವಿ. ಮುನಿಯಪ್ಪ ಹಾಜರಿದ್ದರು
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಗ್ರಾಮದ ಸಮುದಾಯ ಭವನದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಚೆಕ್ ವಿತರಿಸಿದರು. ಶಾಸಕ ವಿ. ಮುನಿಯಪ್ಪ ಹಾಜರಿದ್ದರು   

ಶಿಡ್ಲಘಟ್ಟ: ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಚೈತನ್ಯ ತುಂಬುವುದು ಹಾಗೂ ಖಾಸಗಿ ವ್ಯಕ್ತಿಗಳ ಬಡ್ಡಿ ಕಿರುಕುಳ ತಪ್ಪಿಸುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ಮೂಲಕ ನೀಡುತ್ತಿರುವ ಬಡ್ಡಿರಹಿತ ಸಾಲದ ಉಪಯೋಗವನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳಬೇಕು. ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳ ಗೋವಿಂದಗೌಡ ಹೇಳಿದರು.

ತಾಲ್ಲೂಕಿನ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಗ್ರಾಮದ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಣ ಡ್ರಾ ಮಾಡಲು ಮೊಬೈಲ್ ಬ್ಯಾಂಕಿಂಗ್ ವಾಹನ ನಿಮ್ಮ ಮನೆ ಬಾಗಿಲಿಗೆ ಬರುವ ವ್ಯವಸ್ಥೆ ಕಲ್ಪಿಸಲಾಗಿದೆ. ಯಾರೂ ಬೇರಾವುದೇ ಎಟಿಎಂಗೆ ಹೋಗುವ ಅವಶ್ಯಕತೆಯಿಲ್ಲ. ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಲಾ ಒಂದೊಂದು ಲಕ್ಷ ಸಾಲ ನೀಡಲಾಗುವುದು ಎಂದು ಹೇಳಿದರು.

ADVERTISEMENT

ತಾಯಂದಿರು ತಮ್ಮ ಉಳಿತಾಯದ ಹಣವನ್ನು ಸಹಕಾರ ಸಂಘದಲ್ಲಿಯೇ ಠೇವಣಿ ಇಡಬೇಕು. ಡಿಸಿಸಿ ಬ್ಯಾಂಕ್ ಬಡವರ ಹಾಗೂ ಮಹಿಳೆಯರ ಪರವಾಗಿದೆ ಎಂದರು.

ಶಾಸಕ ವಿ. ಮುನಿಯಪ್ಪ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರ ಬರೀ ಆಶ್ವಾಸನೆಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಇದರಿಂದ ಯಾವೊಬ್ಬರಿಗೂ ಉಪಯೋಗವಾಗಿಲ್ಲ. ಕೇಂದ್ರ ಸರ್ಕಾರ ಪ್ರತಿಯೊಬ್ಬ ಮತದಾರರಿಗೂ ತಲಾ ಹದಿನೈದು ಲಕ್ಷ ಹಣ ನೀಡುತ್ತೇವೆ ಎಂದು ಹೇಳಿದ್ದ ಆಶ್ವಾಸನೆ ಬರೀ ಆಶ್ವಾಸನೆಯಾಗಿಯೇ ಉಳಿದಿದೆ ಎಂದರು.

ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಸುಮಾರು 50 ಸ್ವಸಹಾಯ ಸಂಘಗಳಿಗೆ ₹ 2.26 ಕೋಟಿ ಸಾಲ ವಿತರಿಸಲಾಯಿತು.ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ. ನಾಗರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಜಂಗಮಕೋಟೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಮಂಜುಳಮ್ಮ, ಮಾಜಿ ಅಧ್ಯಕ್ಷ ಗಣೇಶ್, ನಿರ್ದೇಶಕರಾದ ಹನುಮಂತಪ್ಪ, ಮುನಿರಾಜು, ಎಚ್.ಎಂ. ಮಂಜುನಾಥಗೌಡ, ಶ್ರೀನಿವಾಸ್, ಅಶ್ವತನಾರಾಯಣ, ಮುನೇಗೌಡ, ಶ್ರೀನಿವಾಸ್, ದೇವರಾಜು, ಪರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.