ADVERTISEMENT

ಗುಡಿಬಂಡೆ: ಕ್ಯಾನ್ಸರ್ ತಡೆಗೆ ಜಾಗೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 3:00 IST
Last Updated 11 ಫೆಬ್ರುವರಿ 2022, 3:00 IST
ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಹಶೀಲ್ದಾರ್ ಸಿಗ್ಬತ್‌ ಉಲ್ಲಾ, ಡಾ.ಪ್ರಶಾಂತ್ ರೆಡ್ಡಿ, ಡಾ.ನರಸಿಂಹಮೂರ್ತಿ ಹಾಜರಿದ್ದರು
ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಹಶೀಲ್ದಾರ್ ಸಿಗ್ಬತ್‌ ಉಲ್ಲಾ, ಡಾ.ಪ್ರಶಾಂತ್ ರೆಡ್ಡಿ, ಡಾ.ನರಸಿಂಹಮೂರ್ತಿ ಹಾಜರಿದ್ದರು   

ಗುಡಿಬಂಡೆ: ‘ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳು ಹೆಚ್ಚು ಸಹಕಾರಿಯಾಗಿದ್ದು, ಜನತೆ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಂತಹ ಶಿಬಿರಗಳು ಬಡಜನರು ವಾಸಿಸುವ ಪ್ರದೇಶದಲ್ಲಿ ಹೆಚ್ಚಾಗಿ ನಡೆಯಬೇಕಿದೆ’ ಎಂದು ತಹಶೀಲ್ದಾರ್ ಸಿಗ್ಬತ್‌ ಉಲ್ಲಾ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಂಕರ್ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಇಂತಹ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ರೋಗದ ಕುರಿತು ಅರಿವು ಪಡೆದುಕೊಂಡಾಗ ಮಾತ್ರ ಅದರಿಂದ ಪಾರಾಗಲು ಸಾಧ್ಯ. ಜೊತೆಗೆ, ಯಾವುದೇ ರೋಗಕ್ಕೆ ತುತ್ತಾದರೆ ಕೂಡಲೇ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ADVERTISEMENT

ಶಂಕರ್ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ಪ್ರಶಾಂತ್ ರೆಡ್ಡಿ ಮಾತನಾಡಿ, ದೈನಂದಿನ ಆಹಾರ ಪದ್ಧತಿ, ಮದ್ಯಪಾನ, ಧೂಮಪಾನ, ಕುರಕಲು ತಿಂಡಿಯನ್ನು ಅನಿಯಮಿತ ಸೇವನೆ ಮಾಡುವುದು ಕ್ಯಾನ್ಸರ್ ರೋಗಕ್ಕೆ ಕಾರಣವಾಗಲಿದೆ. ರೋಗವನ್ನು ನಾಲ್ಕು ಹಂತದಲ್ಲಿ ಗುರುತಿಸಬಹುದಾಗಿದೆ. ಪ್ರಥಮ ಹಾಗೂ ಎರಡನೇ ಹಂತದಲ್ಲಿ ತಜ್ಞ ವೈದ್ಯರ ಸೂಕ್ತ ಚಿಕಿತ್ಸೆಯಿಂದ ಸಂಪೂರ್ಣ ಗುಣಪಡಿಸಬಹುದಾಗಿದೆ. ನಂತರದ ಹಂತದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ರೋಗವನ್ನು ಹತೋಟಿಗೆ ತರಲು ಸಾಧ್ಯ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ರೋಗಿಗಳನ್ನು ಧೃತಿಗೆಡಿಸದೆ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ರೀತಿಯಲ್ಲಿ ಕುಟುಂಬಸ್ಥರು ಹೆಚ್ಚಿನ ನಿಗಾವಹಿಸಬೇಕು. ಈ ರೋಗ ಕುರಿತು ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವ ಅವಶ್ಯಕತೆಯಿದೆ. ಆಶಾ ಕಾರ್ಯಕರ್ತೆಯರು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಕಬಾಡೆ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಕೆ.ಟಿ. ನಂಜುಂಡಪ್ಪ, ದಪ್ಪರ್ತಿ ನಂಜುಂಡ, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮೀ, ಹಂಪಸಂದ್ರ ಪಿಎಚ್‌ಸಿ ಅಧಿಕಾರಿ ಡಾ.ಅಕ್ಷಯ್, ಶಂಕರ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರಾದ ಡಾ.ಮೌನಿಶಾ, ಡಾ.ತೇಜಸ್, ಡಾ.ನಿರೂಷ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.