ADVERTISEMENT

ಶಿಡ್ಲಘಟ್ಟ: ನೈಸರ್ಗಿಕ ಸಂಪನ್ಮೂಲದ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 6:56 IST
Last Updated 8 ಅಕ್ಟೋಬರ್ 2021, 6:56 IST
ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯಲ್ಲಿ ಬುಧವಾರ ಸಾಮೂಹಿಕ ಆಸ್ತಿಗಳ ಸಾಪ್ತಾಹಿಕ ಆಚರಣೆ ಕಾರ್ಯಕ್ರಮದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮಹತ್ವ ಕುರಿತು ಗ್ರಾಮಸ್ಥರಿಗೆ ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆಯ ಸದಸ್ಯರು ತಿಳಿವಳಿಕೆ ಮೂಡಿಸಿದರು
ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯಲ್ಲಿ ಬುಧವಾರ ಸಾಮೂಹಿಕ ಆಸ್ತಿಗಳ ಸಾಪ್ತಾಹಿಕ ಆಚರಣೆ ಕಾರ್ಯಕ್ರಮದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮಹತ್ವ ಕುರಿತು ಗ್ರಾಮಸ್ಥರಿಗೆ ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆಯ ಸದಸ್ಯರು ತಿಳಿವಳಿಕೆ ಮೂಡಿಸಿದರು   

ಶಿಡ್ಲಘಟ್ಟ: ಸಾಮೂಹಿಕ ಆಸ್ತಿ ರಕ್ಷಣೆ ಹಾಗೂ ನಿರ್ವಹಣೆ ನಮ್ಮೆಲ್ಲರ ಹೊಣೆ ಎಂದು ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆಯ ಉಪ ಯೋಜನಾಧಿಕಾರಿ ಆಗಟಮಡಕ ರಮೇಶ್ ಹೇಳಿದರು.

ತಾಲ್ಲೂಕಿನ ಹರಳಹಳ್ಳಿಯಲ್ಲಿ ಬುಧವಾರ ಸಾಮೂಹಿಕ ಆಸ್ತಿಗಳ ಸಾಪ್ತಾಹಿಕ ಆಚರಣೆ ಕಾರ್ಯಕ್ರಮದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮಹತ್ವ ಕುರಿತು ಅವರು ಮಾತನಾಡಿದರು.

ವಿಶ್ವದಾದ್ಯಂತ ಅ. 10ರವರೆಗೆ ಸಾಮೂಹಿಕ ಆಸ್ತಿಗಳ ಸಾಪ್ತಾಹಿಕ ನಡೆಯುತ್ತಿದೆ. ಎಫ್ಇಎಸ್ ಸಂಸ್ಥೆಯು ವಿವಿಧ ಕಾರ್ಯಕ್ರಮ ಆಯೋಜಿಸಿದೆ. ಸಮುದಾಯಕ್ಕೆ ಗ್ರಾಮೀಣಭಾಗದಲ್ಲಿರುವ ಸಾಮೂಹಿಕ ಆಸ್ತಿಗಳ ವೀಕ್ಷಣೆ, ಮಕ್ಕಳಿಗೆ ಸಾಮೂಹಿಕ ಆಸ್ತಿಗಳ ಕುರಿತು ತಿಳಿಸಿಕೊಡುವುದು, ಸಂಪನ್ಮೂಲ ನಕ್ಷೆಯನ್ನು ಸಮುದಾಯದವರಿಂದ ತಯಾರಿಸುವ ಮೂಲಕ ಅವುಗಳ ಸ್ಥಿತಿಗತಿ ಕಡೆಗೆ ಗಮನ ಹರಿಸಲಾಗುತ್ತಿದೆ ಎಂದರು.

ADVERTISEMENT

ಗ್ರಾಮೀಣ ಭಾಗದ ಸಾಮೂಹಿಕ ಆಸ್ತಿಗಳನ್ನು ಗ್ರಾಮ ಪಂಚಾಯಿತಿಯ ಆಸ್ತಿ ವಹಿಯಲ್ಲಿ ನಮೂದಿಸಬೇಕು. ಈ ಆಸ್ತಿಗಳನ್ನು ಉಳಿಸಿ ಅಭಿವೃದ್ಧಿಪಡಿಸುವ ಗುರುತರ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಲಾಗಿದೆ ಎಂದು ತಿಳಿಸಿದರು.

ಎಲ್. ಮುತ್ತಕದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ ಮಾತನಾಡಿ, ಇಲ್ಲಿನ ಕೆರೆಯು ಹರಳಹಳ್ಳಿ, ಎಲ್. ಮುತ್ತಕದಹಳ್ಳಿ ಮತ್ತು ಕುರಬಚ್ಚಪಡೆ ಮೂರು ಗ್ರಾಮಗಳಿಗೆ ಸೇರಿದ್ದು ನಮ್ಮೆಲ್ಲರ ಜೀವನೋಪಾಯದ ಜೀವನಾಡಿಯಾಗಿದೆ. ಆದರೆ, ಇಂದು ನಮ್ಮೆಲ್ಲರ ತಾತ್ಸಾರದಿಂದ ಕೆರೆಯಂಗಳದ ಬಹುತೇಕ ಭಾಗ ಒತ್ತುವರಿಯಾಗಿದೆ. ಅಮ್ಮನಕೆರೆಗೆ ಎಚ್.ಎನ್. ವ್ಯಾಲಿ ನೀರು ಬರುವ ಕಾರಣದಿಂದ ಕೆರೆಯ ಸುತ್ತಲೂ ಬದುವನ್ನು ನಿರ್ಮಿಸಲಾಗಿದೆ. ಹೀಗಾಗಿ ಜಾನುವಾರು ಮೇಯಿಸಲು ತೊಂದರೆಯಾಗಿದೆ ಎಂದುತಿಳಿಸಿದರು.

ಗ್ರಾಮ ಪರಿಸರ ಅಭಿವೃದ್ಧಿ ಸಮಿತಿ ಸದಸ್ಯರಾದ ಮಂಜುನಾಥ್, ಮಹೇಶ್, ವಸಂತ್, ನಾಗರಾಜು, ನಾರಾಯಣಪ್ಪ, ಹರಳಹಳ್ಳಿ ಮುನಿಯಪ್ಪ, ಸಂಪನ್ಮೂಲ ವ್ಯಕ್ತಿ ವಿ.ಎಲ್. ಮಧುಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.