ಚಿಕ್ಕಬಳ್ಳಾಪುರ: ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಬಾಬೂ ಜಗಜೀವನ ರಾಮ್ ಅವರ ಮತ್ತೊಂದು ಪುಣ್ಯಸ್ಮರಣೆ ಮುಗಿದಿದೆ. ಜಿಲ್ಲಾಡಳಿತದ ಅಧಿಕಾರಿಗಳೇ ಖುದ್ದು ಪುಣ್ಯಸ್ಮರಣೆಯ ಸಾರಥ್ಯವಹಿಸಿದ್ದಾರೆ.
ಆದರೆ ಬಾಬೂಜಿ ಅವರ ಹೆಸರಿನಲ್ಲಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾಗಬೇಕಿದ್ದ ಬಾಬೂ ಜಗಜೀವನ ರಾಮ್ ಭವನ ಮಾತ್ರ ಇಂದಿಗೂ ನಿರ್ಮಾಣವಾಗಿಲ್ಲ.
ಎಂಟು ವರ್ಷಗಳ ಹಿಂದೆ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಬಿಡುಗಡೆಯಾಗಿರುವ ₹ 4 ಕೋಟಿ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿಯೇ ಉಳಿದಿದೆ. 2016ರಿಂದಲೂ ದಲಿತ ಸಮುದಾಯದ ಮಾಜಿ ಶಾಸಕರು, ದಲಿತ ಸಂಘರ್ಷ ಸಮಿತಿ ಮುಖಂಡರು ಬಾಬೂಜಿ ಭವನ ನಿರ್ಮಾಣಕ್ಕೆ ಆಗ್ರಹಿಸುತ್ತಲೇ ಇದ್ದಾರೆ. ಅವರ ಆಗ್ರಹ ಇನ್ನೂ ಆಡಳಿತಕ್ಕೆ ಮುಟ್ಟಿಲ್ಲ. ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಹಿಂದೆ ಭವನದ ವಿಚಾರವೂ ತೀವ್ರ ಸದ್ದು ಮಾಡಿತ್ತು.
ಬಾಬೂ ಜಗಜೀವನ ರಾಮ್ ಅವರ ಪುಣ್ಯ ಸ್ಮರಣೆ, ಜಯಂತಿಗಳನ್ನು ಪ್ರತಿ ವರ್ಷ ನಡೆಸುವ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಭವನದ ವಿಚಾರವಾಗಿ ಮಾತ್ರ ತಾತ್ಸಾರ ಧೋರಣೆ ಹೊಂದಿದ್ದಾರೆ. ಬಾಬೂ ಜಗಜೀವನ ರಾಮ್ ಅವರ ಸಾಧನೆಗಳ ಪ್ರಶಂಸೆಗಷ್ಟೇ ಜಯಂತಿಗಳು, ಪುಣ್ಯ ಸ್ಮರಣೆಗಳು ಸೀಮಿತವಾಗಿವೆ.
2022ರ ಏಪ್ರಿಲ್‌ನಲ್ಲಿ ಜಟಾಪಟಿ: ನಗರದ ಜೈ ಭೀಮ್ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ 2022ರ ಏಪ್ರಿಲ್‌ನಲ್ಲಿ ಅಂದಿನ ಸಚಿವರಾದ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್ ಬಾಬೂಜಿ ಭವನದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿದ್ದರು. ಅಂದು ಅಲ್ಲಿ ಬಾಬೂ ಜಗಜೀವನರಾಂ ಜಯಂತಿ ಸಹ ಹಮ್ಮಿಕೊಳ್ಳಲಾಗಿತ್ತು.
ದಲಿತ ಸಮುದಾಯದ ನಾಯಕರೂ ಆದ ಮಾಜಿ ಶಾಸಕರಾದ ಎಂ.ಶಿವಾನಂದ್, ಕೆ.ವಿ.ಅನುಸೂಯಮ್ಮ ನಟರಾಜ್, ಎಸ್.ಎಂ.ಮುನಿಯಪ್ಪ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್ ನೇತೃತ್ವದಲ್ಲಿ ದಲಿತ ಸಮುದಾಯವರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಇದೇ ಸ್ಥಳದಲ್ಲಿ ಸಾಂಕೇತಿಕ ಪ್ರತಿಭಟನೆಗೆ ಮುಂದಾಗಿದ್ದರು. ಆಗ ಪೊಲೀಸರು ಮತ್ತು ಪ್ರತಿಭಟನಕಾರರು ನಡುವೆ ಜಟಾಪಟಿ ನಡೆದಿತ್ತು.
ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ ₹ 4 ಕೋಟಿ ಇದೆ. ಕೂಡಲೇ ಭವನ ನಿರ್ಮಾಣವಾಗಬೇಕು ಎಂದು ಮುಖಂಡರು ಆಗ್ರಹಿಸಿದ್ದರು. ಈ ಜಟಾಪಟಿ ನಂತರ ಪ್ರತಿಭಟನನಿರತರ ಮೇಲೆ ಪೊಲೀಸರು ಪ್ರಕಟಣದ ದಾಖಲಿಸಿದ್ದರು. ಈ ಪ್ರಕರಣದ ಕಾವು ಹೆಚ್ಚಿತು. ನಂತರ ಪೊಲೀಸರೇ ಬಿ ರಿಪೋರ್ಟ್ ಸಲ್ಲಿಸಿದರು. ಹೀಗೆ ಬಾಬೂಜಿ ಭವನದ ವಿಚಾರವೂ 2022ರಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.
ಅಂದು ಡಾ.ಕೆ.ಸುಧಾಕರ್ ಭೂಮಿ ಪೂಜೆ ನೆರವೇರಿಸಿದರಷ್ಟೇ. ಅದರ ಹೊರತು ಯಾವುದೇ ಕಾರ್ಯಗಳೂ ನಡೆಯಲಿಲ್ಲ. ಪ್ರದೀಪ್ ಈಶ್ವರ್ ಶಾಸಕರಾಗಿ ಎರಡು ವರ್ಷಗಳು ಪೂರ್ಣವಾಗಿದೆ. ಭವನ ನಿರ್ಮಾಣದ ವಿಚಾರವಾಗಿ ಯಾವುದೇ ಸಣ್ಣ ಹೆಜ್ಜೆಗಳನ್ನು ಸಹ ಇಟ್ಟಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.