
ಬಾಗೇಪಲ್ಲಿ: ಪಟ್ಟಣದ ಪುರಸಭೆ ಎದುರು ಗುರುವಾರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ವಿ. ಬಾಬುರೆಡ್ಡಿ ಅವರ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಯಿತು.
ಡಾ.ಎಚ್.ಎನ್ ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಬಾಗೇಪಲ್ಲಿ ಹೋರಾಟಗಳ ತವರೂರು. ಅಪ್ಪಸ್ವಾಮಿರೆಡ್ಡಿ, ಜಿ.ವಿ. ಶ್ರೀರಾಮರೆಡ್ಡಿ ಅವರಂತಹ ಅನೇಕರು ಹೋರಾಟಗಳನ್ನು ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ನಡುವೆ ಕಮ್ಯೂನಿಸ್ಟ್ ಭದ್ರಕೋಟೆಯಲ್ಲಿ ಬಿ.ವಿ. ಬಾಬುರೆಡ್ಡಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಧ್ವಜ ಹಾರಾಡುವಂತೆ ಮಾಡಿದರು. ಈ ಮೂಲಕ ಈ ಕ್ಷೇತ್ರವು ಕಾಂಗ್ರೆಸ್ ಕೋಟೆಯಾಯಿತು. ಅವರು ಹಣ ಮತ್ತು ಅಧಿಕಾರದ ಆಸೆ ತ್ಯಜಿಸಿ ಕಾಂಗ್ರೆಸ್ ಅನ್ನು ಬೆಳೆಸಿದರು ಎಂದು ಹೇಳಿದರು.
ಬಾಬುರೆಡ್ಡಿ ಅವರು ಕೋಲಾರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. 3 ಬಾರಿ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ಹೆಂಡತಿ ಸುಜಾತಾರೆಡ್ಡಿ ಪುರಸಭೆ ಅಧ್ಯಕ್ಷೆಯಾಗಿದ್ದಾರೆ. ಸಿ.ವಿ. ವೆಂಕಟರಾಯಪ್ಪ, ನಾರಾಯಣಸ್ವಾಮಿ, ರೇಣುಕಾ ರಾಜೇಂದ್ರನ್ ಅವರು ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಲು ಬಾಬುರೆಡ್ಡಿ ಶ್ರಮಿಸಿದರು ಎಂದು ಹೇಳಿದರು.
ಪ್ರಸ್ತುತ ರಾಜಕೀಯ ಕ್ಷೇತ್ರವು ವ್ಯಾಪಾರೀಕರಣವಾಗಿದೆ. ಇಂದಿನ ರಾಜಕಾರಣವು ಹಣ ಕೊಟ್ಟು ಮತ ಪಡೆಯುವಂತಾಗಿದೆ. ಜನರು ಸಹ ಯಾರು, ಎಷ್ಟು ಹಣ ನೀಡುತ್ತಾರೊ ಎಂಬ ನಿರೀಕ್ಷೆಯಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ರಾಜಕಾರಣದಲ್ಲಿ ಸ್ವಾರ್ಥ, ಹಣ, ಅಧಿಕಾರದ ಆಸೆ ಇರಲಿಲ್ಲ. ಈಗ ಎಲ್ಲವೂ ಸ್ವಾರ್ಥ, ಹಣ, ಅಧಿಕಾರದ ಆಸೆ ಹೆಚ್ಚಾಗಿದೆ. ಸ್ವಾರ್ಥ, ಹಣ, ಅಧಿಕಾರ ಬೇಡ ಎನ್ನುವ ರಾಜಕಾರಣದ ನಾಯಕರು ವಿರಳ ಆಗಿದ್ದಾರೆ ಎಂದು ತಿಳಿಸಿದರು.
ಆಂಧ್ರಪ್ರದೇಶದ ರಾಪ್ತಾಡು ಕ್ಷೇತ್ರದ ಮಾಜಿ ಶಾಸಕ ತೋಪುದುರ್ತಿ ಪ್ರಕಾಶರೆಡ್ಡಿ ಮಾತನಾಡಿ, ‘ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಮ್ಮ ಮಾವ ಜಿ.ವಿ.ಬಾಬುರೆಡ್ಡಿ ಅವರು ಕಾಂಗ್ರೆಸ್ ಪಕ್ಷ ಬೆಳಿಸಿದ್ದಾರೆ. ರಾಜಕೀಯ ಒಡನಾಟವು ಹೆಚ್ಚು ಇದೆ. ನಾನು ಸಹ ಬಾಗೇಪಲ್ಲಿಯಲ್ಲಿ ಓದಿದವನೇ. ಬಾಗೇಪಲ್ಲಿಯ ಅನ್ನದ ಋಣ ನಮ್ಮ ಕುಟುಂಬ ತೀರಿಸಲಿದೆ. ನಾವು ಎಂದಿಗೂ ಬಾಗೇಪಲ್ಲಿ ಜನರನ್ನು ಮರೆಯುವುದಿಲ್ಲ’ ಎಂದರು.
‘ಆಂಧ್ರಪ್ರದೇಶದಲ್ಲಿ ವೈ.ಎಸ್.ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡಿ ಕಾಲುವೆಗಳ ಮೂಲಕ ಕೃಷ್ಣಾನದಿ ನೀರು ಹರಿಸುತ್ತೇನೆ’ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೇಶವರೆಡ್ಡಿ, ಪುರಸಭೆ ಉಪಾಧ್ಯಕ್ಷೆ ಸುಜಾತಾ ನಾಯ್ಡು, ಪುರಸಭಾ ಸದಸ್ಯ ಶ್ರೀನಿವಾಸರೆಡ್ಡಿ, ಬಿ.ಆರ್.ನರಸಿಂಹನಾಯ್ಡು, ಸರಸ್ವತಮ್ಮ ಶಿವರಾಮರೆಡ್ಡಿ, ಎಚ್.ವಿ.ನಾಗರಾಜ್, ಎಡಿಎಟಿಎಸ್‍ನ ರಾಮ್‌ಸ್ಟೀವ್, ಜಿ.ಎಂ.ರಾಮಕೃಷ್ಣಪ್ಪ, ನಾರಾಯಣಸ್ವಾಮಿ, ಪ್ರೊ.ಕೆ.ಟಿ.ವೀರಾಂಜನೇಯ, ಗಡಿದಂ ಶಿವರಾಮರೆಡ್ಡಿ ಇದ್ದರು.
ಕಾಂಗ್ರೆಸ್ ಸರ್ಕಾರ ಭದ್ರ
ನವೆಂಬರ್ ಡಿಸೆಂಬರ್‌ನಲ್ಲಿ ರಾಜ್ಯ ಸಂಪುಟ ಪುನರ್‌ರಚನೆಯ ಕ್ರಾಂತಿ ಇಲ್ಲ. ಇದೆಲ್ಲ ಕೇವಲ ಭ್ರಾಂತಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಐದು ವರ್ಷ ಭದ್ರವಾಗಿರಲಿದೆ. ಚುನಾವಣೆ ಪೂರ್ವದಲ್ಲಿ ಜನರಿಗೆ ನಾವು ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಕಾಂಗ್ರೆಸ್ ಪಕ್ಷ ಬಡಜನರ ಕಲ್ಯಾಣ ಯೋಜನೆಗಳನ್ನು ಮಾಡುತ್ತದೆ ಎಂದು ಡಾ.ಎಚ್.ಎನ್.ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು. ಸುಬ್ಬಾರೆಡ್ಡಿ ಮೂರು ಬಾರಿ ಶಾಸಕರಾಗಿದ್ದಾರೆ. ಹೈಕಮಾಂಡ್ ತೀರ್ಮಾನಿಸಿದರೆ ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗಲಿದೆ. ಇದಕ್ಕೆ ನಮ್ಮ ವಿರೋಧ ಇಲ್ಲ. ಎಲ್ಲರಿಗೂ ಸಮಾನವಾಗಿ ಸ್ಥಾನಮಾನ ಸಿಗಬೇಕು ಅಲ್ಲವೇ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.