
ಬಾಗೇಪಲ್ಲಿ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿರವರ 70 ನೇ ಜನ್ಮ ದಿನಾಚರಣೆ ಅಂಗವಾಗಿ ಗುರುವಾರ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಜಿವಿಎಸ್ ರವರ ಪ್ರತಿಮೆಯನ್ನು ಅವರ ಅಭಿಮಾನಿಗಳು, ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರುಗಳು ಲೋಕಾರ್ಪಣೆ ಮಾಡಿ, ಜಿವಿಎಸ್ ರವರಿಗೆ ಮಾಲಾರ್ಪಣೆ ಮಾಡಿದರು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಖ್ಯರಸ್ತೆಯ ಪಕ್ಕದಲ್ಲಿ ವಿಧಾನಸಭಾಕ್ಷೇತ್ರದ ಚುನಾವಣೆಗೆ ನೀತಿ ಸಂಹಿತೆ ಇರುವ 3 ದಿನಗಳಲ್ಲಿ ಜಿ.ವಿ.ಶ್ರೀರಾಮರೆಡ್ಡಿರವರ ಪ್ರತಿಮೆಯನ್ನು ಇಡಲು ಮುಂದಾದರು. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಜಿವಿಎಸ್ ಪ್ರತಿಮೆಯನ್ನು ಅನಾವರಣ ಮಾಡಿರಲಿಲ್ಲ. ಜಿವಿಎಸ್ ರವರ ಅಭಿಮಾನಿಗಳು ಗುರುವಾರ ಅನ್ನದಾನ ಮಾಡುವ ಮೂಲಕ ಸರಳವಾಗಿ ಜನ್ಮದಿನಾಚರಣೆಯನ್ನು ಮಾಡಿದರು.
ತಾಲ್ಲೂಕಿನ ಸರ್ಕಾರಿ ನೌಕರರು, ದಲಿತ, ರೈತಪರ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸೇರಿದಂತೆ ಅವರ ಅಭಿಮಾನಿಗಳು ಜಿ.ವಿ.ಶ್ರೀರಾಮರೆಡ್ಡಿರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜೈಕಾರಗಳನ್ನು ಹಾಕಿದರು.
ಮುಖಂಡ ಪಿ.ಮಂಜುನಾಥರೆಡ್ಡಿ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಹಾಗೂ ಚುನಾವಣೆ ಪ್ರಕ್ರಿಯೆಗಳು ಇರುವುದರಿಂದ ಜಿವಿಎಸ್ ರವರ ಪ್ರತಿಮೆ ಲೋಕಾರ್ಪಣೆ ಮಾಡಲು ಆಗಿರಲಿಲ್ಲ. ಗುರುವಾರ ಜಿವಿಎಸ್ ರವರ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ. ಜಿವಿಎಸ್ ರವರು ಕ್ಷೇತ್ರದಲ್ಲಿ ಮಾಡಿರುವ ಶಾಶ್ವತ ಯೋಜನೆಗಳಿಂದ ಜನರ ಮನದಲ್ಲಿ ಇದ್ದಾರೆ. ಅವರ ಹೋರಾಟದ ಹಾದಿ, ನಡೆ ಹಾಗೂ ನುಡಿಗಳು ನಮ್ಮಲ್ಲಿ ಹೋರಾಟದ ಕಿಚ್ಚನ್ನು ಬೆಳಿಸಿದೆ. ಮುಂದಿನ ದಿನಗಳಲ್ಲಿ ಅವರ ಕನಸು ನನಸು ಮಾಡಲು ಅಭಿಮಾನಿಗಳು ಒಂದಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಪ್ರಧಾನಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬಿ.ವಿ.ವೆಂಕಟರವಣ, ಮುಖಂಡರಾದ ಎಚ್.ಪಿ.ಲಕ್ಷ್ಮೀನಾರಾಯಣ, ಬಿ.ಆಂಜನೇಯರೆಡ್ಡಿ, ಮಹಮದ್ ಅಕ್ರಂ, ಎ.ಎನ್.ಶ್ರೀರಾಮಪ್ಪ, ರತ್ನಮ್ಮ, ಗೀತಮ್ಮ, ಇ.ಟಿ.ನರಸಿಂಹಾರೆಡ್ಡಿ, ಜೆ.ಪಿ.ಚಂದ್ರಶೇಖರರೆಡ್ಡಿ, ಕೆಂಪರೆಡ್ಡಿ, ರಾಮಾಂಜಿ, ಕಲೀಮುಲ್ಲಾ ಹಾಗೂ ಅಭಿಮಾನಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.