ADVERTISEMENT

ಬಾಗೇಪಲ್ಲಿಗೆ ‘ಭಾಗ್ಯನಗರ’ವಾಗುವ ಭಾಗ್ಯ ಬಂದಿತೇ? ಈಡೇರಲಿದೆಯೇ ವರನಟನ ಆಶಯ?

ಈಡೇರಲಿದೆಯೇ ವರನಟನ ಆಶಯ* ಸಚಿವ ಸಂಪುಟದ ಮುಂದೆ ಟಿಪ್ಪಣಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 20:31 IST
Last Updated 18 ಜೂನ್ 2025, 20:31 IST
   

ಚಿಕ್ಕಬಳ್ಳಾಪುರ: ಈ ಬಾಗೇಪಲ್ಲಿ ಭಾಗ್ಯನಗರವಾಗಲಿ. ಎಲ್ಲ ಭಾಗ್ಯವು ಇಲ್ಲಿ ತುಂಬಿಕೊಳ್ಳಲಿ...

–1987ರ ಸೆ.9ರಂದು ಬಾಗೇಪಲ್ಲಿಯ ಬಾಲಕಿಯರ ಸರ್ಕಾರಿ ಶಾಲೆ ಆವರಣದಲ್ಲಿ ಕನ್ನಡ ಕಲಾ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವರನಟ ರಾಜ್‌ಕುಮಾರ್ ಅವರು ಹೀಗೆ ಆಶಿಸಿದ್ದರು. ಅವರ ಆಶಯ ಮೂರು ಮುಕ್ಕಾಲು ದಶಕದ ನಂತರ ಈಡೇರುವ ನಿರೀಕ್ಷೆ ಕಾಣುತ್ತಿದೆ.

ಬಾಗೇಪಲ್ಲಿ ಹೆಸರನ್ನು ಭಾಗ್ಯನಗರ ಎಂದು ಬದಲಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲು ಬಾಗೇಪಲ್ಲಿ ಶಾಸಕ ಎಸ್‌.ಎನ್. ಸುಬ್ಬಾರೆಡ್ಡಿ ಸರ್ಕಾರಕ್ಕೆ ಕೋರಿದ್ದರು.

ADVERTISEMENT

ಗುರುವಾರ ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯಲ್ಲಿ ‘ಭಾಗ್ಯನಗರ’ ಎಂದು ಬದಲಿಸುವ ಸಂಬಂಧ ಕಂದಾಯ ಇಲಾಖೆಯು ಟಿಪ್ಪಣಿ ಲಗತ್ತಿಸಿದೆ. ಸಚಿವ ಸಂಪುಟದ ಕಾರ್ಯಸೂಚಿ ಪಟ್ಟಿಯಲ್ಲಿ ಈ ವಿಷಯವೂ ಅಡಕವಾಗಿದೆ. ಈಗ ಸಂಪುಟ ಸಭೆ ಬೆಂಗಳೂರಿಗೆ ಸ್ಥಳಾಂತರವಾಗಿದ್ದು, ಕಾರ್ಯಸೂಚಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಆಂಧ್ರ‍ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿಯಲ್ಲಿ ತೆಲುಗು ಭಾಷೆಯ ದಟ್ಟ ಪ್ರಭಾವವಿದೆ. ಹೆಸರು ಬದಲಾವಣೆಗೆ ಆಗ್ರಹಿಸಿ ಹಲವು ದಶಕಗಳಿಂದ ಗಡಿ ತಾಲ್ಲೂಕಿನಲ್ಲಿ ಹೋರಾಟಗಳು ನಡೆದಿವೆ. ಭಾಗ್ಯನಗರ ಹೋರಾಟ ಸಮಿತಿ ಸಹ ಅಸ್ತಿತ್ವಕ್ಕೆ ಬಂದಿತ್ತು.

2021ರಲ್ಲಿ ಹೆಸರು ಬದಲಾವಣೆ ಸಂಬಂಧ ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ‘ಬಾಗೇಪಲ್ಲಿಯನ್ನು ಭಾಗ್ಯನಗರ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ 2021ರ ಜನವರಿಯಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. 

ಆದರೆ, ಆ ನಂತರ ಯಾವುದೇ ಪ್ರಕ್ರಿಯೆಗಳೂ ನಡೆಯಲಿಲ್ಲ. ಸರ್ಕಾರದಿಂದ ಅಧಿಕೃತ ಆದೇಶವೂ ಹೊರ ಬೀಳಲಿಲ್ಲ. ಈಗ ಸಚಿವ ಸಂಪುಟ ಸಭೆ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಿದೆ ಎನ್ನುವ ಆಶಾಭಾವನೆ ಬಾಗೇಪಲ್ಲಿ ಜನರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.