ADVERTISEMENT

ಬಾಗೇಪಲ್ಲಿ | ಶಾಲೆ, ಅಂಗನವಾಡಿಗೆ ‘ನರೇಗಾ’ ಬಲ

ಕಟ್ಟಡ, ಮೂಲ ಸೌಕರ್ಯ ಅಭಿವೃದ್ಧಿ, ಗ್ರಾಮೀಣ ಶಾಲೆಗೆ ಹೈಟೆಕ್‌ ಸ್ಪರ್ಶ

ಪಿ.ಎಸ್.ರಾಜೇಶ್
Published 18 ಜೂನ್ 2025, 7:13 IST
Last Updated 18 ಜೂನ್ 2025, 7:13 IST
ಬಾಗೇಪಲ್ಲಿ ತಾಲ್ಲೂಕಿನ ಚಿನ್ನಓಬಯ್ಯಗಾರಿಪಲ್ಲಿ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿ ಮನರೇಗಾ ಯೋಜನೆಯ ಅನುದಾನದಲ್ಲಿ ಅಡುಗೆಕೋಣೆ ನಿರ್ಮಿಸಿರುವುದು
ಬಾಗೇಪಲ್ಲಿ ತಾಲ್ಲೂಕಿನ ಚಿನ್ನಓಬಯ್ಯಗಾರಿಪಲ್ಲಿ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿ ಮನರೇಗಾ ಯೋಜನೆಯ ಅನುದಾನದಲ್ಲಿ ಅಡುಗೆಕೋಣೆ ನಿರ್ಮಿಸಿರುವುದು   

ಬಾಗೇಪಲ್ಲಿ: ಗ್ರಾಮಸ್ಥರು ಮತ್ತು ನಿರುದ್ಯೋಗಿಗಳಿಗೆ ಆಸರೆಯಾಗಿರುವ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ(ಮನರೇಗಾ) ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳಿಗೂ ಬಲ ತುಂಬಿದೆ.

ಸ್ಥಳೀಯ ಗ್ರಾಮ ಪಂಚಾಯಿತಿಗಳು ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕೊಠಡಿ, ಶೌಚಾಲಯ, ತಡೆಗೋಡೆ, ಆಟದ ಮೈದಾನ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕಲ್ಪಿಸಲಾಗುತ್ತಿದೆ.

ಗ್ರಾಮೀಣ ಮಕ್ಕಳಿಗೆ ಸೌಲಭ್ಯ ಕಲ್ಪಿಸಲು, ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಕಟ್ಟಡ, ಅಂಗವಾಡಿ ಕೇಂದ್ರಗಳಿಗೆ ಹೊಸ ಕಟ್ಟಡ, ಶೌಚಾಲಯ, ಆಟದ ಮೈದಾನ, ಮಳೆ ಕೊಯ್ಲು, ಎರೆಹುಳುತೊಟ್ಟಿ, ಅಡುಗೆ ಕೋಣೆಯನ್ನು ನಿರ್ಮಿಸಲಾಗುತ್ತಿದೆ.

ADVERTISEMENT

ತಾಲ್ಲೂಕಿನಲ್ಲಿ 10 ಶಾಲೆಗಳಲ್ಲಿ ₹25 ಲಕ್ಷ ವೆಚ್ಚದಲ್ಲಿ ತಡೆಗೋಡೆ, ₹14 ಲಕ್ಷ ವೆಚ್ಚದಲ್ಲಿ ಶೌಚಾಲಯ, ₹15 ಲಕ್ಷ ವೆಚ್ಚದಲ್ಲಿ ಅಡುಗೆ ಕೋಣೆ, ಮಳೆ ನೀರು ಸಂಗ್ರಹ ಘಟಕ ನಿರ್ಮಿಸಲಾಗಿದೆ.

ಚಿನ್ನಓಬಯ್ಯಗಾರಿಪಲ್ಲಿ ಸರ್ಕಾರಿ ಶಾಲೆ, ಪಾತಬಾಗೇಪಲ್ಲಿ ಸರ್ಕಾರಿ ಶಾಲೆ, ಗೌನಪಲ್ಲಿ ಸರ್ಕಾರಿ ಶಾಲೆ, ತಿಮ್ಮಂಪಲ್ಲಿ ಸರ್ಕಾರಿ, ಮಿಟ್ಟೇಮರಿ ಸರ್ಕಾರಿ ಶಾಲೆ, ಪಾತಪಾಳ್ಯ ಸರ್ಕಾರಿ ಶಾಲೆ, ಚಂಚುರಾಯನಪಲ್ಲಿ ಸರ್ಕಾರಿ ಶಾಲೆ ಶೌಚಾಲಯ ನಿರ್ಮಿಸಲಾಗಿದೆ.

ತಾಲ್ಲೂಕಿನ ಪೈಪಾಳ್ಯ, ಚಿನ್ನ ಓಬಯ್ಯಗಾರಿಪಲ್ಲಿ, ತೋಳ್ಳಪಲ್ಲಿ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಯಿಂದ ನರೇಗಾದ ಅನುದಾನದಲ್ಲಿ ಅಡುಗೆಕೋಣೆ ನಿರ್ಮಿಸಲಾಗಿದೆ.

ಬಿಳ್ಳೂರು, ಮಾರ್ಗಾನುಕುಂಟೆ, ಕಲ್ಲಿಪಲ್ಲಿ, ತೋಳ್ಳಪಲ್ಲಿ ಗ್ರಾಮದ ಎ.ಕೆ.ಕಾಲೋನಿಯ ಸರ್ಕಾರಿ ಶಾಲೆಗಳ ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದೆ. ತಾಲ್ಲೂಕಿನ ನಲ್ಲಚೆರುವು(ನಗುರ್ಲು), ತೊಳ್ಳಪಲ್ಲಿ ಗ್ರಾಮದ ಎ.ಕೆ ಕಾಲೋನಿಯ ಸರ್ಕಾರಿ ಶಾಲೆಗಳಿಗೆ ಆಟದ ಮೈದಾನ ನಿರ್ಮಾಣಕ್ಕೆ ನರೇಗಾ ಅನುದಾನ ಬಳಕೆ ಮಾಡಲಾಗಿದೆ.

ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮದ ಅಂಗನವಾಡಿ ಕೇಂದ್ರ ಹಾಗೂ ಸಡ್ಲವಾರಿಪಲ್ಲಿಯ ಸರ್ಕಾರಿ ಶಾಲೆಗೆ ಮಳೆ ನೀರು ಸಂಗ್ರಹ ಘಟಕ ನಿರ್ಮಿಸಲಾಗಿದೆ.

ಶಿಕ್ಷಣ ಇಲಾಖೆಯಿಂದ ಮಾತ್ರವಲ್ಲದೇ ಪಂಚಾಯತ್ ರಾಜ್ ಇಲಾಖೆ ಕೂಡ ನರೇಗಾ ಯೋಜನೆಯಡಿ ಗ್ರಾಮೀಣ ಶಾಲೆಗಳನ್ನು ಅಭಿವೃದ್ಧಿಗೊಳಿಸಿ ಮಾದರಿಯಾಗಿಸುತ್ತಿವೆ. ಇದರಿಂದ ಗ್ರಾಮೀಣ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಹೈಟೆಕ್‌ ಸ್ಪರ್ಶ ದೊರೆಯುತ್ತಿದೆ.

ಮನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳ ಅಂಗನವಾಡಿ ಕೇಂದ್ರಗಳಲ್ಲಿ ಕಟ್ಟಡ ಶೌಚಾಲಯ ಆಟದ ಮೈದಾನ ನಿರ್ಮಿಸಲಾಗಿದೆ. ಇದರಿಂದ ಗ್ರಾಮೀಣ ಮಕ್ಕಳ ಕಲಿಕಾ ಕೇಂದ್ರ ಆಕರ್ಷಣೆಯಾಗಿದೆ.
ನಾರಾಯಣ ತಾಲ್ಲೂಕು ಅಧಿಕಾರಿ ಮನರೇಗಾ
ನರೇಗಾ ಇತಿಮಿತಿ ಅನುದಾನದಲ್ಲಿ ಸರ್ಕಾರಿ ಶಾಲೆ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸರ್ಕಾರ ಮತ್ತಷ್ಟು ಅನುದಾನ ನೀಡಿದರೆ ಈ ಯೋಜನೆಯನ್ನು ವಿಸ್ತರಿಸಲಾಗುವುದು.
ವಿ.ರಮೇಶ್ ಇಒ ತಾ.ಪಂ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.