ADVERTISEMENT

ಚಿಂತಾಮಣಿ: ಶ್ರದ್ಧಾ ಭಕ್ತಿಯ ಬಕ್ರೀದ್ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 15:25 IST
Last Updated 7 ಜೂನ್ 2025, 15:25 IST
ಚಿಂತಾಮಣಿಯ ಈದ್ಗಾ ಮೈದಾನದಲ್ಲಿ ಶನಿವಾರ ಬಕ್ರೀದ್ ಅಂಗವಾಗಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು 
ಚಿಂತಾಮಣಿಯ ಈದ್ಗಾ ಮೈದಾನದಲ್ಲಿ ಶನಿವಾರ ಬಕ್ರೀದ್ ಅಂಗವಾಗಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು    

ಚಿಂತಾಮಣಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಮುಸ್ಲಿಮರು ಶನಿವಾರ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಶಾಂತಿಯುತವಾಗಿ ಆಚರಿಸಿದರು.

ನಗರದ ವಿವಿಧ ಭಾಗಗಳ ಮುಸ್ಲಿಮರು ದೊಡ್ಡಪೇಟೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ಜಮಾವಣೆಗೊಂಡರು. ಹೊಸ ಉಡುಗೆಗಳನ್ನು ಧರಿಸಿದ್ದ ಜನರು ಒಟ್ಟಾಗಿ ಮೆರವಣಿಗೆಯಲ್ಲಿ ಜಾಮಿಯಾ ಮಸೀದಿಯಿಂದ ಮೆರವಣಿಗೆಯಲ್ಲಿ ಬಾಗೇಪಲ್ಲಿ ವೃತ್ತದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿದರು. ಅಲ್ಲಿ ಸಾಮೂಹಿಕವಾಗಿ ಈದ್ ನಮಾಜ್ ಮತ್ತು ಖತುಬಾ ಪಾರಾಯಣ ಮಾಡಿದರು.

ಮೆರವಣಿಗೆಯು ನಗರದ ಅಜಾದ್‌ಚೌಕ, ಪಿಸಿಆರ್ ಕಾಂಪ್ಲೆಕ್ಸ್, ಎಂ.ಜಿ.ರಸ್ತೆ, ಬಾಗೇಪಲ್ಲಿ ವೃತ್ತದ ಮೂಲಕ ಈದ್ಗಾ ಮೈದಾನ ತಲುಪಿತು. ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ADVERTISEMENT

ಜಾಮಿಯಾ ಮಸೀದಿಯ ಧರ್ಮಗುರು ಹಜರತ್ ಮೌಲಾನ ಮೊಹಮ್ಮದ್ ಸಾಧಿಕ್ ರಜಾ ಆಜ್ಹಾರಿ ಉಪನ್ಯಾಸ ನೀಡಿ, ಬಕ್ರೀದನ್ನು ಈದ್-ಅಲ್-ಅದಾ ಎಂದು ಕರೆಯುತ್ತಾರೆ. ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದೆ. ಮುಸ್ಲಿಮರು ವಿಶ್ವದೆಲ್ಲೆಡೆ ಬಕ್ರೀದ್ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಾರೆ. ಪ್ರವಾದಿ ಇಸ್ಮಾಯಿಲ್‌ರ ಅಲ್ಲಾ ಇಚ್ಚೆಯಂತೆ ತಮ್ಮ ಮಗನನ್ನೇ ಬಲಿದಾನ ನೀಡಲು ಸಿದ್ದವಾಗಿದ್ದರು. ಇಸ್ಮಾಯಿಲ್ ಅವರ ಭಕ್ತಿಯನ್ನು ಮೆಚ್ಚಿ ಕುರಿಯನ್ನು ಬಲಿ ಪಡೆಯಲಾಗಿತ್ತು. ಈ ಪದ್ಧತಿಯನ್ನು ಕುರ್ಬಾನಿ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ನಗರದ ದೊಡ್ಡಪೇಟೆಯ ಜಾಮಿಯಾ ಮಸೀದಿ, ಕೋಲಾರ ರಸ್ತೆಯಲ್ಲಿರುವ ಮಸೀದಿ ಸೇರಿದಂತೆ ತಾಲೂಕಿನ ಚಿನ್ನಸಂದ್ರ, ಕೈವಾರ, ಸಿದ್ದಿಮಠ ಸೇರಿದಂತೆ ವಿವಿಧಡೆ ಸಹ ಸಾಮೂಹಿಕ ನಮಾಜ್ ನಡೆಯಿತು. ಉತ್ತಮ ಮಳೆ-ಬೆಳೆ ಆಗಲಿ. ಸಮಾಜದಲ್ಲಿ ಶಾಂತಿ, ಅಹಿಂಸೆ, ನೆಮ್ಮದಿ, ಸುಖ,ದು:ಖಗಳು ಪರಿಹಾರವಾಗಲಿ. ಹಿಂದೂ-ಮುಸ್ಲಿಮರು ಒಟ್ಟಾಗಿ ಬಾಳಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಜಾಮಿಯಾ ಮಸೀದಿ ಅಧ್ಯಕ್ಷ ಮೂನಸ್ಟಾರ್ ಗೌಸ್ ತಿಳಿಸಿದರು.

ಸಾಮೂಹಿಕ ಪ್ರಾರ್ಥನೆ ನಂತರ ಮನೆಗಳಿಗೆ ತೆರಳಿ ಸ್ನೇಹಿತರು, ಸಂಬಂಧಿಕರೊಂದಿಗೆ ಮಾಂಸದ ಊಟ ಸವಿದರು.

ಚಿಂತಾಮಣಿಯ ಈದ್ಗಾ ಮೈದಾನದಲ್ಲಿ ಶನಿವಾರ ಬಕ್ರೀದ್ ಅಂಗವಾಗಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.