ADVERTISEMENT

ಅರ್ಧದಷ್ಟೂ ‍ಪೂರ್ಣವಾಗದ ಸ್ಟಿಕ್ಕರ್ ಅಂಟಿಸುವ ಕಾರ್ಯ

ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚಿವೆ ಕುಟುಂಬಗಳು; ಬೆಸ್ಕಾಂ ಸಿಬ್ಬಂದಿಗೆ ಜವಾಬ್ದಾರಿ

ಡಿ.ಎಂ.ಕುರ್ಕೆ ಪ್ರಶಾಂತ
Published 7 ಸೆಪ್ಟೆಂಬರ್ 2025, 8:32 IST
Last Updated 7 ಸೆಪ್ಟೆಂಬರ್ 2025, 8:32 IST
ಮನೆಗಳಿಗೆ ಅಂಟಿಸುತ್ತಿರುವ ಸ್ಟಿಕ್ಕರ್
ಮನೆಗಳಿಗೆ ಅಂಟಿಸುತ್ತಿರುವ ಸ್ಟಿಕ್ಕರ್   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಸೆ.22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಿದ್ಧತೆಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಲು ಜಿಲ್ಲಾಡಳಿತ ಅಗತ್ಯ ಪೂರ್ವ ಸಿದ್ಧತೆ ಕೈಗೊಂಡಿದೆ. 

ಸಮೀಕ್ಷೆಯ ಭಾಗವಾಗಿ ಜಿಲ್ಲೆಯ ಎಲ್ಲ ಕುಟುಂಬಗಳ ಮನೆಗಳಿಗೆ ಶೈಕ್ಷಣಿಕ ಸಮೀಕ್ಷಾ ಸ್ಟಿಕ್ಕರ್ ಅಂಟಿಸಬೇಕಾಗಿದೆ. ವಿದ್ಯುತ್ ಮೀಟರ್‌ಗಳು ಇರುವ ಮನೆಗಳನ್ನು ಆಧರಿಸಿ ಕುಟುಂಬಗಳನ್ನು ಲೆಕ್ಕ ಹಾಕಲಾಗಿದೆ.

ಪ್ರತಿ ಮನೆಗಳಿಗೆ ಮೀಟರ್ ರೀಡಿಂಗ್‌ಗೆ ತೆರಳುವ ಬೆಸ್ಕಾಂ ಸಿಬ್ಬಂದಿಯು ಈ ಸ್ಟಿಕ್ಕರ್‌ಗಳನ್ನು ಅಳವಡಿಸಬೇಕು. ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಕುಟುಂಬಗಳ ಮನೆಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಬೇಕಿದೆ. ಆದರೆ ಇಲ್ಲಿಯವರೆಗೂ ಇದರ ಅರ್ಧದಷ್ಟೂ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲು ಸಾಧ್ಯವಾಗಿಲ್ಲ. 

ADVERTISEMENT

ಜಿಲ್ಲೆಯ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯವನ್ನು ಸೆ.5ರೊಳಗೆ ಬೆಸ್ಕಾಂನವರು ಪೂರ್ಣಗೊಳಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿತ್ತು. ಆದರೆ ಈ ಕಾರ್ಯ ಪೂರ್ಣಗೊಳ್ಳದ ಕಾರಣ ಸೆ.15ರವರೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯವನ್ನು ವಿಸ್ತರಿಸಲಾಗಿದೆ. ಇನ್ನು 10 ದಿನಗಳು ಮಾತ್ರ ಈ ಕೆಲಸಕ್ಕೆ ಅವಧಿ ಇದೆ.

ಚಿಂತಾಮಣಿ ತಾಲ್ಲೂಕಿನಲ್ಲಿ ಗರಿಷ್ಠ ಮೀಟರ್‌ಗಳು ಇವೆ. ಉಳಿದ ತಾಲ್ಲೂಕುಗಳಿಗೆ ಹೋಲಿಸಿದರೆ ಇಲ್ಲಿ ಸ್ಟಿಕ್ಕರ್ ಅಂಟಿಸುವ ಕಾರ್ಯ ಮೊದಲ ಸ್ಥಾನದಲ್ಲಿ ಇದೆ. ಗೌರಿಬಿದನೂರು ಗುರಿ ಸಾಧನೆಯಲ್ಲಿ ಕೊನೆಯ ಸ್ಥಾನದಲ್ಲಿ ಇದೆ. ಹೀಗೆ ಸಮೀಕ್ಷೆಗಾಗಿ ಬೆಸ್ಕಾಂ ಸಿಬ್ಬಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  

ಸ್ಟಿಕ್ಕರ್‌ಗಳನ್ನು ಸಾರ್ವಜನಿಕರು ತೆಗೆದುಹಾಕುವುದು, ಮುಚ್ಚುವುದು ಅಥವಾ ನಾಶಪಡಿಸುವುದು ಮಾಡಬಾರದು ಎಂದು ‌ಜಿಲ್ಲಾಡಳಿತ ಮನವಿ ಸಹ ಮಾಡಿದೆ. ಸಮೀಕ್ಷೆಯ ಉಸ್ತುವಾರಿಗೆ ತಾಲ್ಲೂಕು ಮಟ್ಟದಲ್ಲಿ ನಗರ ವ್ಯಾಪ್ತಿಗೆ ತಹಶೀಲ್ದಾರರು ಹಾಗೂ ಗ್ರಾಮೀಣ ಭಾಗದಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

ವಿದ್ಯುತ್ ಸಂಪರ್ಕ ಪಡೆದಿರುವ ಮನೆಗಳ ಮೀಟರ್‌ ಆಧರಿಸಿ ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 3.70 ಲಕ್ಷ ಮನೆಗಳಿವೆ. ಇದರಲ್ಲಿ ಸುಮಾರು 50 ಸಾವಿರದಷ್ಟು  ಮನೆಗಳಿಗೆ ಮೀಟರ್‌ಗಳಿಲ್ಲ. ಎಲ್ಲ ಮನೆಗಳನ್ನು ಗುರುತಿಸಿ ಸಮೀಕ್ಷೆ ನಡೆಸಲು ಹಿಂದುಳಿದ ವರ್ಗಗಳ ಆಯೋಗ ಮತ್ತು ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.