ಚಿಕ್ಕಬಳ್ಳಾಪುರ ಬಿಜಿಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಂಸ್ಥೆಯ ‘ಶುಭಾರಂಭ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಚಿಕ್ಕಬಳ್ಳಾಪುರ: ನಗರದ ಬಿಜಿಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಂಸ್ಥೆಯಿಂದ ಸೋಮವಾರ ಪ್ರಥಮ ವರ್ಷದ ಬಿಬಿಎ, ಬಿಕಾಂ ಪದವಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ‘ಶುಭಾರಂಭ್’ ನಡೆಯಿತು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಗುರಿ ಇಟ್ಟುಕೊಂಡು ದೃಢ ಸಂಕಲ್ಪದಲ್ಲಿ ಮುನ್ನಡೆಯಬೇಕು. ಪ್ರಾಮಾಣಿಕತೆ, ನಿರಂತರ ಶ್ರಮ ಇದ್ದರೆ ಯಾರೇ ಆಗಲಿ ಜೀವನದಲ್ಲಿ ಮುಂದೆ ಬರಬಹುದು ಎಂದು ಹೇಳಿದರು.
ಶ್ರಮವೇ ಸಾಧನೆಯ ರಹದಾರಿ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮತ್ತು ಶಿಕ್ಷಣದ ಮೂಲಕ ಉನ್ನತ ಸ್ಥಾನ ಪಡೆಯಬೇಕು. ಆ ಮೂಲಕ ಪೋಷಕರಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದರು.
ವಿದ್ಯಾರ್ಥಿಗಳು ಕಾಲೇಜು ದಿನಗಳಿಂದಲೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಆ ವ್ಯಕ್ತಿತ್ವವು ನಿಮ್ಮನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮ್ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ಅವಧಿಯ ಪ್ರತಿ ಕ್ಷಣವನ್ನೂ ಅರ್ಥಪೂರ್ಣವಾಗಿ ಕಳೆಯಬೇಕು. ವಿದ್ಯಾಭ್ಯಾಸದ ಜೊತೆಗೆ ಶಿಸ್ತು, ಸಂಸ್ಕಾರ, ಪ್ರತಿಭೆ ಹಾಗೂ ಉತ್ತಮ ಆಶಯಗಳನ್ನು ತುಂಬಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಲೋಕನಾಥ್, ಬಿಜಿಎಸ್ ವಿದ್ಯಾ ಸಂಸ್ಥೆಗಳ ಸೇವಾ ಕೈಂಕರ್ಯವನ್ನು ಶ್ಲಾಘಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪ್ರಥಮ ರ‍್ಯಾಂಕ್ ಪಡೆದ ಕಾಲೇಜಿನ ಎಂ.ಕಾಂ. ವಿದ್ಯಾರ್ಥಿನಿ ಶ್ರೀವಲ್ಲಿ ಎಚ್.ಎನ್., ಬಿಬಿಎ ವಿಭಾಗದಲ್ಲಿ ತೃತೀಯ ರ‍್ಯಾಂಕ್ ಪಡೆದ ಪಲ್ಲವಿ.ಎಸ್. ಮತ್ತು ಎಸ್.ಶ್ರವಣ್ ಅವರನ್ನು ಅಭಿನಂದಿಸಲಾಯಿತು. ಪಿಯು ವಿಭಾಗದಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಸ್‌ಜೆಸಿಐಟಿ ಕಾಲೇಜಿನ ಪ್ರಾಂಶುಪಾಲ ಜಿ.ಟಿ.ರಾಜು, ಪ್ರಾಂಶುಪಾಲ ವೆಂಕಟೇಶ್ ಬಾಬು ಬಿ.ಆರ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.