ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆಯಿಂದ ವಿಜಯಪುರದ ಕಡೆಗೆ ಸಂಚರಿಸುವ ಮುಖ್ಯ ಹೆದ್ದಾರಿಯಲ್ಲಿ ಭದ್ರನಕೆರೆ ಏರಿಯ ಮೇಲೆ ಒಂದು ಕಡೆ ಮಾತ್ರ ತಡೆಗೋಡೆ ನಿರ್ಮಿಸಲಾಗಿದ್ದು, ಮತ್ತೊಂದು ಕಡೆ ತಡೆಗೋಡೆ ಇಲ್ಲದೆ ವಾಹನಗಳು ಅಪಾಯಕ್ಕೆ ಸಿಲುಕುತ್ತಿವೆ. ಹಾಗಾಗಿ ಕೂಡಲೇ ತಡೆಗೋಡೆ ನಿರ್ಮಿಸುವಂತೆ ವಾಹನ ಸವಾರರು ಒತ್ತಾಯಿಸಿದ್ದಾರೆ.
ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತದೆ. ಕೆರೆ ಏರಿಯ ಮೇಲಿನಿಂದ ಕೆಳಗೆ ಸುಮಾರು 25 ಅಡಿಗಳಷ್ಟು ಆಳವಿದೆ. ಕೆರೆಯ ಕಡೆಗೆ ಮಾತ್ರ ಕಬ್ಬಿಣದ ಸರಳುಗಳಿಂದ ತಡೆಗೋಡೆ ನಿರ್ಮಿಸಿದ್ದು, ಮತ್ತೊಂದು ಕಡೆ ನಿರ್ಮಾಣ ಮಾಡಿಲ್ಲ. ಇದರಿಂದ ವೇಗವಾಗಿ ಬರುವ ವಾಹನ ಸವಾರರು ಆಯತಪ್ಪಿ ರಸ್ತೆಯಿಂದ ಉರುಳಿ ಬೀಳುವ ಸಾಧ್ಯತೆ ಹೆಚ್ಚಿವೆ. ಜೊತೆಗೆ ಹಲವು ಬಾರಿ ಲಾರಿಗಳು ರಸ್ತೆಯಿಂದ ಮುಗುಚಿಬಿದ್ದು ಪ್ರಾಣಾಪಾಯ ಸಂಭವಿಸಿವೆ. ಹಾಗಾಗಿ ಜಂಗಮಕೋಟೆಯ ಕಡೆಯಿಂದ ಬರುವಾಗ ಸಿಗುವ ಮೋರಿ ಸಮೀಪದಿಂದ ವೆಂಕಟಾಪುರದ ಮೋರಿಯವರೆಗೂ ತಡೆಗೋಡೆ ನಿರ್ಮಾಣ ಮಾಡಲು ಸಂಬಂಧಪಟ್ಟವರು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.