ಶಿಡ್ಲಘಟ್ಟ: ‘ಇನ್ನು ಮುಂದೆ ಪಕ್ಷದ ಒಳಕ್ಕೆ ಬರಲು ಅಡ್ಡಿಯಾಗಿ ಯಾವುದೇ ಕೋಟೆ ಕಂದಕಗಳಿರುವುದಿಲ್ಲ. ಸ್ವಾರ್ಥವಿಲ್ಲದೆ, ತನು ಮನ ಧನ ಅರ್ಪಿಸಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಬರುವವರು ಅನೇಕರಿದ್ದಾರೆ. ಸಕ್ರಿಯರಾಗಿಲ್ಲದ ಹಿರಿಯ ಕಾರ್ಯಕರ್ತರು ಮತ್ತು ಪಕ್ಷ ಪ್ರೀತಿ ಇರುವ ಎಲ್ಲ ನಾಯಕರನ್ನು ಭೇಟಿ ಮಾಡಿ ಪಕ್ಷಕ್ಕೆ ಕರೆತರುವ ಕೆಲಸ ಮಾಡುತ್ತೇನೆ’ ಎಂದು ಬಿಜೆಪಿ ಜಿಲ್ಲಾ ನೂತನ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಬಿಜೆಪಿಯ ಜಿಲ್ಲಾಧ್ಯಕ್ಷರಾದ ನಂತರ ಬಿಜೆಪಿ ಕಾರ್ಯಕರ್ತರು ಶಿಡ್ಲಘಟ್ಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೆರವಣಿಗೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಿಜೆಪಿಯನ್ನು ಜಿಲ್ಲೆಯ ಅನೇಕರು ಕಟ್ಟಿ ಬೆಳೆಸಿದ್ದಾರೆ. ಇಂದು ಜಗತ್ತಿನಲ್ಲಿ ಹೆಚ್ಚು ಸದಸ್ಯತ್ವವುಳ್ಳ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷ ಸಂಘಟನೆಯ ಹಿಂದೆ ಅನೇಕರ ತನು ಮನ ಧನದ ಅರ್ಪಣೆ ಅಡಗಿದೆ. ಪಕ್ಷದ ಆಂತರಿಕ ಗೊಂದಲಗಳ ನಿವಾರಣೆ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆ ಆಶಯ ನಮ್ಮದು’ ಎಂದರು.
‘ಪಕ್ಷಕ್ಕೆ ನೆಲೆ ಇಲ್ಲದ ಶಿಡ್ಲಘಟ್ಟದಲ್ಲಿ ಪಕ್ಷ ಕಟ್ಟುವ ಕೆಲಸಕ್ಕೆ ಬಂದಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಕೆಲಸ ಮಾಡಿದ್ದೇನೆ. ಹೆಚ್ಚಿನ ಸದಸ್ಯತ್ವ ಮಾಡಿದ್ದೇನೆ. ಇದೆಲ್ಲವನ್ನೂ ಗಮನಿಸಿದ ಜಿಲ್ಲಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ’ ಎಂದರು.
ಶಿಡ್ಲಘಟ್ಟದ ಗಡಿಭಾಗ ಹಂಡಿಗನಾಳದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಸೀಕಲ್ ರಾಮಚಂದ್ರಗೌಡ ಅವರನ್ನು ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸ್ವಾಗತಿಸಿದರು. ಬಸ್ ನಿಲ್ದಾಣದಿಂದ ಕೋಟೆ ವೃತ್ತದ ಮೂಲಕ ಬಿಜೆಪಿ ಸೇವಾಸೌಧ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕೋಟೆ ಆಂಜನೇಯ, ವಾಸವಿ ರಸ್ತೆಯ ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಮಾಜಿ ಬಿಜೆಪಿ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಗ್ರಾಮಾಂತರ ಅಧ್ಯಕ್ಷ ಸೀಕಲ್ ಆನಂದಗೌಡ, ನಗರ ಘಟಕದ ಅಧ್ಯಕ್ಷ ನರೇಶ್, ಅನೆಮಡಗು ಮುರಳಿ, ಅರಿಕೆರೆ ಮುನಿರಾಜು, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಆಂಜನೇಯಗೌಡ, ಸೋಮಶೇಖರ್, ಕನ್ನಪನಹಳ್ಳಿ ಲಕ್ಷ್ಮಿನಾರಾಯಣ್, ಡಾ.ಸತ್ಯನಾರಾಯಣರಾವ್, ನರ್ಮದಾರೆಡ್ಡಿ, ಚಾತುರ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.