ADVERTISEMENT

ಬಿಜೆಪಿ ಬೆಂಬಲಿತರಿಗೆ ಚಿಂತಾಮಣಿಯಲ್ಲಿ ಸನ್ಮಾನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 6:21 IST
Last Updated 8 ಜನವರಿ 2021, 6:21 IST
ಗ್ರಾಮ ಪಂಚಾಯಿತಿಯಲ್ಲಿ ಗೆಲುವು ಸಾಧಿಸಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಚಿಂತಾಮಣಿಯಲ್ಲಿ ಸನ್ಮಾನಿಸಲಾಯಿತು
ಗ್ರಾಮ ಪಂಚಾಯಿತಿಯಲ್ಲಿ ಗೆಲುವು ಸಾಧಿಸಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಚಿಂತಾಮಣಿಯಲ್ಲಿ ಸನ್ಮಾನಿಸಲಾಯಿತು   

ಚಿಂತಾಮಣಿ: ‘ದೇಶ, ಧರ್ಮ, ಪಕ್ಷದ ನಂತರ ನಾವು ಎಂಬುದು ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ಸಿದ್ಧಾಂತವಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸತ್ಯನಾರಾಯಣ ಮಹೇಶ್ ನುಡಿದರು.

ಬಿಜೆಪಿ ತಾಲ್ಲೂಕು ಘಟಕವು ಗ್ರಾಮ ಪಂಚಾಯಿತಿಯ ನೂತನ ಸದಸ್ಯರಿಗೆ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ದೇಶದಲ್ಲಿ ಬಿಜೆಪಿ ವಿರುದ್ಧ ದೊಡ್ಡ ಅಲೆಯಿದ್ದಾಗಲೂ ಪಕ್ಷದ ಧ್ವಜ ಹಿಡಿದು 20-25 ವರ್ಷಗಳಿಂದಲೂ ದುಡಿದಿ
ದ್ದೇವೆ. ಅವಳಿ ಜಿಲ್ಲೆಯಲ್ಲಿ ವಿಧಾನಸಭಾ ಸದಸ್ಯರ ಸಂಖ್ಯೆ ಕಡಿಮೆ ಇದ್ದರೂ ತಾಲ್ಲೂಕಿನ 5 ಗ್ರಾಮ ಪಂಚಾಯಿತಿಗಳಲ್ಲಿ 7 ಸದಸ್ಯರು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

‘ಗ್ರಾಮ ಪಂಚಾಯಿತಿಯಲ್ಲಿ ಖಾತೆ ತೆರೆದಿದ್ದೇವೆ. ಮುಂದಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಖಾತೆಯನ್ನು ತೆರೆಯುತ್ತೇವೆ. ಹಣ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ಜನರಿಗೆ ಸ್ಪಂದಿಸಿದರೆ ಪ್ರತಿಫಲ ದೊರೆಯುತ್ತದೆ. ನಾವು ಸಿದ್ಧಾಂತವನ್ನು ಇಟ್ಟುಕೊಂಡು ಗೆಲುವು ಸಾಧಿಸಿದ್ದೇವೆ. ಬೇರೆ ಪಕ್ಷದಲ್ಲಿ ಒಳ ಒಪ್ಪಂದದಲ್ಲಿ ಗೆಲುವು ಸಾಧಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಇತರೆ ಎಂದು ನಮೂದಿಸಿರುವುದು ಬೇಸರವಾಗಿದೆ’ ಎಂದರು.

ತಾಲ್ಲೂಕಿನ ಗ್ರಾಮೀಣ ಮಂಡಲ್ ಅಧ್ಯಕ್ಷ ಶಿವಾರೆಡ್ಡಿ ಮಾತನಾಡಿ, ‘ಎಷ್ಟು ಮಂದಿ ಗೆದ್ದಿದ್ದಾರೆ ಎನ್ನುವುದಕ್ಕಿಂತ ಸಾಧನೆ ಎಷ್ಟು ಎನ್ನುವುದು ಮುಖ್ಯ. ಇಬ್ಬರು ಪ್ರಬಲ ನಾಯಕರ ಗುಂಪುಗಳ ನಡುವೆ ಚುನಾವಣೆ ಎದುರಿಸುವುದು ಕಷ್ಟಕರವಾಗಿದ್ದರೂ ಸಾಕಷ್ಟು ಕೆಲಸ ಮಾಡಿದ್ದೇವೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸದಸ್ಯರು ಈ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹಿಂದೆ ಇಬ್ಬರು ಸಂಸತ್ ಸದಸ್ಯರಿದ್ದರು. ಇಂದು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದೇವೆ’ ಎಂದರು.

ತಳಗವಾರ ಪ್ರತಾಪ್, ಚೊಕ್ಕರೆಡ್ಡಿಹಳ್ಳಿ ಶ್ರೀನಿವಾಸರೆಡ್ಡಿ, ಬತ್ತಲಹಳ್ಳಿ ಶ್ರೀನಿವಾಸಪ್ಪ ಮಾತನಾಡಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲದಿಂದ ಆಯ್ಕೆಯಾಗಿರುವ ಕಾಗತಿ ಗ್ರಾಮ ಪಂಚಾಯಿತಿಯ ಶ್ರೀನಿವಾಸರೆಡ್ಡಿ, ಶಾರದ ನಾ.ಶಂಕರ್, ಕರಿಯಪ್ಪಲ್ಲಿ ಕ್ಷೇತ್ರ ಶ್ರೀನಾಥ್, ಊಲವಾಡಿ ಗ್ರಾಮ ಪಂಚಾಯಿತಿಯ ಬಿ.ಎನ್.ಶ್ರೀನಿವಾಸಪ್ಪ, ತಳಗವಾರ ಪವಿತ್ರ ಪ್ರತಾಪ್, ರಾಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ಸುಕನ್ಯಾಮಧು, ಸಂತೆಕಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಸರೋಜಮ್ಮ ವೆಂಕಟರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಆಂಜನೇಯರೆಡ್ಡಿ, ವೆಂಕಟಶಿವಾರೆಡ್ಡಿ, ನಾರಾಯಣರೆಡ್ಡಿ, ನಗರ ಮಂಡಲ್ ಅಧ್ಯಕ್ಷ ಮಹೇಶಬೈ, ಬಿ.ಸಿ.ಜಯರಾಂ, ಗೋಕುಲ್ ಶ್ರೀನಿವಾಸ್, ಸಿ.ಆರ್.ವೆಂಕಟೇಶ್, ಭಾಗ್ಯಮ್ಮ, ಕುರುಟಹಳ್ಳಿ ಮಂಜುನಾಥ್, ನವೀನ್, ಮನೋಹರ್, ಕಾಗತಿ ಎಂ.ಎನ್.ನಾಗರಾಜ್, ಶೋಭಾ, ಗೌತಮಿ, ಮಂಗಳಗೌರಿ, ಪಂಕಜ, ಬಾಲಕೃಷ್ಣ, ಸುನೀಲ್, ಪ್ರದೀಪ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.