ಚಿಂತಾಮಣಿ: ‘ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣ ಮಾಡಿದ್ದ ಬಿಜೆಪಿ ಮತ್ತು ಜೆಡಿಎಸ್ ‘ಹನಿಮೂನ್’ ಮುಕ್ತಾಯ ಹಂತಕ್ಕೆ ಬಂದಿದೆ. ನಾನೊಂದು ತೀರ-ನೀನೊಂದು ತೀರದಂತೆ ನಡೆದುಕೊಳ್ಳುತ್ತಿವೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
‘ತತ್ವ-ಸಿದ್ಧಾಂತದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಉತ್ತರ ಮತ್ತು ದಕ್ಷಿಣ ಧೃವಗಳಾಗಿವೆ. ಕೇವಲ ಅಧಿಕಾರಕ್ಕಾಗಿ ಮಾಡಿಕೊಂಡಿದ್ದ ಹೊಂದಾಣಿಕೆ ಕೊನೆಯಾಗುತ್ತಿದೆ. ಬಿಜೆಪಿಗೆ ಕುಮಾರಸ್ವಾಮಿ ಅವರನ್ನು ಕಂಡರೆ ಭಯ. ಅವರ ಜತೆ ಹೊಂದಾಣಿಕೆ ಮುಂದುವರಿಸಿದರೆ ಮುಂದೆ ಎಲ್ಲವನ್ನು ಅವರೇ ಕಬಳಿಸುತ್ತಾರೆ ಎಂಬ ಭಯ ಕಾಡುತ್ತಿದೆ. ಜೆಡಿಎಸ್ ಅನ್ನು ದೂರವಿಟ್ಟು ಹೋರಾಟ ಮಾಡುತ್ತಿವೆ. ಬಂದ ದಾರಿಗೆ ಸುಂಕವಿಲ್ಲ ಎಂದು ಜೆಡಿಎಸ್ ಕೂಡ ಪ್ರತ್ಯೇಕವಾಗಿ ಹೋರಾಟ ಹಮ್ಮಿಕೊಳ್ಳುತ್ತಿದೆ’ ಎಂದರು.
ನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮ ಪ್ರಗತಿಯಲ್ಲಿವೆ. ಶೀಘ್ರದಲ್ಲೇ ಮತ್ತಷ್ಟು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಕಸ ಸಂಗ್ರಹಕ್ಕಾಗಿ ಪ್ರತಿ ವಾರ್ಡ್‌ಗೂ ಒಂದೊಂದು ವಾಹನ ಒದಗಿಸಲಾಗುತ್ತಿದೆ. ನಗರೋತ್ಥಾನ ಯೋಜನೆ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್, ಟೋಲ್ ಶುಲ್ಕ ಏರಿಕೆಗೆ ಏಕೆ ಜನಾಕ್ರೋಶವಿಲ್ಲ ಎಂದು ಪ್ರಶ್ನಿಸಿದರು. ಜನರ ಮುಂದೆ ವಿಷಯ ಮಂಡಿಸಲಾಗುವುದು ಎಂದರು.
ಹಾಲಿನ ಬೆಲೆ ಏರಿಕೆ ಮಾಡಿರುವುದು ಸರ್ಕಾರದ ಸಂಪನ್ಮೂಲ ಸಂಗ್ರಹಕ್ಕೆ ಅಲ್ಲ. ರೈತರ ಅಭಿವೃದ್ಧಿಗಾಗಿ ಬೆಲೆ ಏರಿಕೆ ಪ್ರಸ್ತಾಪವನ್ನು ಕೆ.ಎಂ.ಎಫ್ ಸಲ್ಲಿಸಿತ್ತು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆ ಇದೆ. ರೈತರಿಗೆ ಅನುಕೂಲವಾಗಬಾರದು ಎಂದು ಜನಾಕ್ರೋಶ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ಯಗವಕೋಟೆ ಸರ್ಕಾರಿ ಶಾಲೆಯಲ್ಲಿ ಬಾಲಕನೊಬ್ಬನ ಕಣ್ಣಿಗೆ ಹಾನಿಯಾಗಿರುವುದು ವಿಷಾದಕರ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿದುಕೊಂಡು ಸೋಮವಾರ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ವೃತ್ತ ನಿರೀಕ್ಷಕರಿಗೆ ಸೂಚಿಸಲಾಗಿದೆ ಎಂದರು.
ಶಾಲೆ ಶಿಕ್ಷಕಿ ಮೇಲೆ ಎಫ್.ಐ.ಆರ್ ಮಾಡಿರಬಹುದು. ಆದರೆ, ಸಂಬಂಧವೇ ಇಲ್ಲದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿರುದ್ಧ ಎಫ್.ಐ.ಆರ್ ಹಾಕಿಸಿರುವುದು ಸರಿಯೇ? ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡು ಅಧಿಕಾರಿಗಳ ನೈತಿಕ ಬಲ ಕುಗ್ಗಿಸುವುದನ್ನು ಸಹಿಸುವುದಿಲ್ಲ ಎಂದರು.
ನಗರಸಭೆ ಅಧ್ಯಕ್ಷ ಆರ್.ಜಗನ್ನಾಥ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.