ADVERTISEMENT

ರಕ್ತಕ್ರಾಂತಿಯ ಎಚ್ಚರಿಕೆ ನೀಡಿದ ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ

ನೂತನ ಮಂಚೇನಹಳ್ಳಿ ತಾಲ್ಲೂಕು ರಚನೆ ವಿರೋಧಿ ಪ್ರತಿಭಟನೆಯಲ್ಲಿ ಸರ್ಕಾರಕ್ಕೆ ಶಾಸಕ ಎನ್.ಎಚ್‌.ಶಿವಶಂಕರರೆಡ್ಡಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 13:44 IST
Last Updated 5 ನವೆಂಬರ್ 2019, 13:44 IST
   

ಚಿಕ್ಕಬಳ್ಳಾಪುರ: ‘ರಾಜ್ಯ ಸರ್ಕಾರ ನೂತನವಾಗಿ ಘೋಷಿಸಿದ ಮಂಚೇನಹಳ್ಳಿ ತಾಲ್ಲೂಕಿಗೆ ಅವೈಜ್ಞಾನಿಕವಾಗಿ ಸೇರಿಸಿದ ಗೌರಿಬಿದನೂರು ಕ್ಷೇತ್ರ ವ್ಯಾಪ್ತಿಯ ಗ್ರಾಮಗಳನ್ನು ಕೈಬಿಡದಿದ್ದರೆ ರಕ್ತಕ್ರಾಂತಿ ನಡೆಯುತ್ತದೆ’ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಗುಡುಗಿದರು.

ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿಯಲ್ಲಿ ಮಂಗಳವಾರ ನೂತನ ಮಂಚೇನಹಳ್ಳಿ ತಾಲ್ಲೂಕು ರಚನೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಹೊಸ ತಾಲ್ಲೂಕಿಗೆ ನನ್ನ ಕ್ಷೇತ್ರದ ತೊಂಡೇಬಾವಿ, ನಾಮಗೊಂಡ್ಲು, ಬಿ.ಬೊಮ್ಮಸಂದ್ರ ಹಾಗೂ ಡಿ.ಪಾಳ್ಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಗ್ರಾಮಗಳನ್ನು ಸೇರಿಸದಂತೆ ಕಂದಾಯ ಸಚಿವರಿಗೆ ಆಕ್ಷೇಪಣೆ ಸಲ್ಲಿಸಿದ್ದೆ. ಆದರೆ ಅನರ್ಹ ಶಾಸಕ ಸುಧಾಕರ್ ಅವರನ್ನು ಓಲೈಸಲು ಸರ್ಕಾರ ನಮ್ಮ ಆಕ್ಷೇಪಣೆಗೆ ಬೆಲೆ ನೀಡದೆ ತಾಲ್ಲೂಕು ರಚನೆ ಮಾಡಿದೆ’ ಎಂದು ಆರೋಪಿಸಿದರು.

‘ಈ ಹೋರಾಟದಲ್ಲಿ ರಾಜೀ ಪ್ರಶ್ನೆಯೇ ಇಲ್ಲ. ಸ್ವಾತಂತ್ರ್ಯ ನಂತರದಲ್ಲಿ ಭಾರತ, ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಯಾವ ರೀತಿಯ ರಕ್ತಕ್ರಾಂತಿ ನಡೆಯಿತೋ ಅದೇ ರೀತಿ ಗೌರಿಬಿದನೂರು ತಾಲ್ಲೂಕಿನಲ್ಲಿ ರಕ್ತಕ್ರಾಂತಿ ನಡೆಯಬೇಕು ಎನ್ನುವ ಇಚ್ಛೆ ಇದ್ದರೆ ಅದು ಆಗಿಯೇ ತೀರುತ್ತದೆ. ಅದಕ್ಕೆ ಸರ್ಕಾರ, ಜಿಲ್ಲಾಧಿಕಾರಿ ಹೊಣೆಗಾರರಾಗುತ್ತಾರೆ ಎಂದು ಈಗಲೇ ಎಚ್ಚರಿಕೆ ಕೊಡುತ್ತಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ನಗರಸಭೆ ಚುನಾವಣೆಯ ಬಳಿಕ ತಾಲ್ಲೂಕು ಆಡಳಿತ ಅಸ್ತವ್ಯಸ್ತಗೊಳಿಸುವ ಕೆಲಸ ಮಾಡುತ್ತೇವೆ. ಪ್ರತೀ ಗ್ರಾಮ ಮತ್ತು ಮನೆಗಳ ಜನ ಸ್ವಯಂಪ್ರೇರಿತರಾಗಿ ಪ್ರತಿಭಟನೆ ಮಾಡಲು ಸಿದ್ಧರಿದ್ದಾರೆ. ಎಲ್ಲೆಡೆ ಉಗ್ರ ಪ್ರತಿಭಟನೆಗೆ ಮುಂದಾಗುತ್ತೇವೆ. ಯಾರು ಸತ್ತರೂ ಸರಿಯೇ ಪ್ರತಿಭಟನೆ ಮಾತ್ರ ಬಿಡುವುದಿಲ್ಲ. ಈ ಬಾರಿಯ ಉಪ ಚುನಾವಣೆಯಲ್ಲಿ ಸುಧಾಕರ್ ಅವರಿಗೆ ತಕ್ಕ ಪಾಠ ಕಲಿಸಿ, ಹಣ ಮತ್ತು ಅಧಿಕಾರದ ಮದ ಬಿಡಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.