ADVERTISEMENT

ಗಡಿ ಶೈಕ್ಷಣಿಕ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 4:11 IST
Last Updated 25 ಜುಲೈ 2021, 4:11 IST
ಚಿಂತಾಮಣಿ ತಾಲ್ಲೂಕಿನ ಕೃಷ್ಣರಾಜಪುರ ಗ್ರಾಮಕ್ಕೆ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಭೇಟಿ ನೀಡಿದ್ದರು. ಸದಸ್ಯರಾದ ಬಿ.ಜಿ.ರಾಜಶೇಖರ್, ಅರುಣ್ ಕುಮಾರ್, ಕಲ್ಯಾಣ್ ಕುಮಾರ್ ಇದ್ದರು
ಚಿಂತಾಮಣಿ ತಾಲ್ಲೂಕಿನ ಕೃಷ್ಣರಾಜಪುರ ಗ್ರಾಮಕ್ಕೆ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಭೇಟಿ ನೀಡಿದ್ದರು. ಸದಸ್ಯರಾದ ಬಿ.ಜಿ.ರಾಜಶೇಖರ್, ಅರುಣ್ ಕುಮಾರ್, ಕಲ್ಯಾಣ್ ಕುಮಾರ್ ಇದ್ದರು   

ಚಿಂತಾಮಣಿ: ರಾಜ್ಯದ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮತ್ತು ತಂಡ ಶುಕ್ರವಾರ ನಗರದ ಹೊರವಲಯದ ಕೃಷ್ಣರಾಜಪುರ ಗ್ರಾಮಕ್ಕೆ ಭೇಟಿ ನೀಡಿ ಆಂಧ್ರಪ್ರದೇಶದಿಂದ ಸುಮಾರು ವರ್ಷಗಳ ಹಿಂದೆ ವಲಸೆ ಬಂದು ಗ್ರಾಮದಲ್ಲಿ ನೆಲೆಸಿರುವ ಪಮ್ಮಲ ಜನಾಂಗದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸಿದರು.

ಕೃಷ್ಣರಾಜಪುರ ಗ್ರಾಮದಲ್ಲಿ ಆಂಧ್ರಪ್ರದೇಶದಿಂದ ವಲಸೆ ಬಂದಿರುವ ಪಮ್ಮಲ ಸಮುದಾಯದ 18 ಕುಟುಂಬಗಳಿವೆ.

ಕರ್ನಾಟಕ ಸರ್ಕಾರದ ಜಾತಿಗಳ ಅಧಿಸೂಚನೆಯಲ್ಲಿ ಜಾತಿ ನಮೂದಾಗಿಲ್ಲ. ಆಂಧ್ರಪ್ರದೇಶದಲ್ಲಿ ಪಮ್ಮಲ, ಪಮ್ಲ, ಪೊಮ್ಲ, ಪೊಮ್ಮಲ, ಪೊಂಬ ಎಂಬುದಾಗಿ ಸರ್ಕಾರದ ಅಧಿಸೂಚನೆಯಲ್ಲಿ ಇದೆ. ಪಮ್ಮಲ ಹಾಗೂ ಪಂಬಲ ಒಂದೇ ಅರ್ಥದ ಪರ್ಯಾಯ ಶಬ್ದಗಳಾಗಿವೆ. ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ಈ ಜಾತಿಯ ಹೆಸರು ಇಲ್ಲದಿರುವುದರಿಂದ ಅವರಿಗೆ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ ಎಂದು ಜನಾಂಗದವರು ಮನವಿ ಸಲ್ಲಿಸಿದ್ದರು ಎಂದು ಜಯಪ್ರಕಾಶ ಹೆಗ್ಡೆ ತಿಳಿಸಿದರು.

ADVERTISEMENT

ಕರ್ನಾಟಕ ಸರ್ಕಾರದ ಜಾತಿಗಳ ಅಧಿಸೂಚನೆಯಲ್ಲಿ ಪಮ್ಮಲ ಹಾಗೂ ಪಂಬಲ ಜಾತಿಯನ್ನು ನಮೂದಿಸಲು ಕೋರಿ ಸುಮಾರು 10 ವರ್ಷಗಳಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಕಾಂತ್‌ರಾಜ್ ಅಧ್ಯಕ್ಷರಾಗಿದ್ದಾಗಲೂ ಅಧಿಕಾರಿಗಳ ತಂಡ ಒಮ್ಮೆ ಭೇಟಿ ನೀಡಿದ್ದರು ಎಂದು ವಕೀಲ ನಾ.ಶಂಕರ್ ತಿಳಿಸಿದರು.

ಸಮಿತಿ ಸದಸ್ಯರಾದ ಬಿ.ಜಿ.ರಾಜಶೇಖರ್, ಅರುಣ್ ಕುಮಾರ್, ಕಲ್ಯಾಣ್ ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಸಮುದಾಯದ ಜನರೊಂದಿಗೆ ಸಂವಾದ ನಡೆಸಿದರು.

ಸಮುದಾಯದವರ ಮನವಿ ಹಾಗೂ ಅವರಲ್ಲಿರುವ ದಾಖಲೆ ಪಡೆದುಕೊಳ್ಳಲಾಗಿದೆ. ಕಾನೂನಿನ ಅಂಶಗಳನ್ನು ಪರಿಶೀಲಿಸಿ ಈ ಜಾತಿಯನ್ನು ಸರ್ಕಾರದ ಅಧಿಸೂಚನೆಯಲ್ಲಿ ಪ್ರಕಟಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಅಶೋಕ್, ತಾಲ್ಲೂಕು ವಿಸ್ತರಣಾಧಿಕಾರಿ ಮುನೇಗೌಡ ತಂಡದಲ್ಲಿ ಇದ್ದರು.

ವಿವಿಧ ಹಿಂದುಳಿದ ಸಮಾಜದ ಸಂಘಗಳ ಪದಾಧಿಕಾರಿಗಳು ಸರ್ಕಾರ ಮಟ್ಟದಲ್ಲಿ ಸಮುದಾಯಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವಂತೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.