ಬಾಗೇಪಲ್ಲಿ: ಸುಪ್ರಿಂ ಕೋರ್ಟ್ ಮುಖ್ಯನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆತ ಘಟನೆ ಖಂಡಿಸಿ ಸಿಪಿಎಂ ಜಿಲ್ಲಾ ಸಮಿತಿ ಮುಖಂಡರು, ಕಾರ್ಯಕರ್ತರು ಬುಧವಾರ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂದೆ ಪ್ರತಿಭಟನೆ ಮಾಡಿದರು.
ಪಟ್ಟಣದ ಸುಂದರಯ್ಯ ಭವನದ ಮುಂಭಾಗದ ಹೊರಟ ಸಿಪಿಎಂ ಮುಖಂಡರು, ಡಿವಿಜಿ ಮುಖ್ಯರಸ್ತೆ ಮೂಲಕ ಡಾ.ಎಚ್.ಎನ್.ವೃತ್ತದವರಿಗೂ ಬೈಕ್ ರ‍್ಯಾಲಿ ಮಾಡಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ‘ಇದೀಗ ನ್ಯಾಯಾಂಗದ ಮೇಲೆ ದಾಳಿ ಆಗಿದೆ. ಸುಪ್ರಿಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಪ್ರಯತ್ನಿಸಿರುವುದು ಪ್ರಜಾಪ್ರಭುತ್ವದ, ಸಂವಿಧಾನದ ಮೇಲಿನ ದಾಳಿ ಆಗಿದೆ. ಬಿಜೆಪಿ, ಆರ್‌ಎಸ್‌ಎಸ್ ಕುಮ್ಮಕ್ಕಿನಿಂದ ದೇಶದಲ್ಲಿ ಅಭದ್ರತೆ ಹೆಚ್ಚಾಗಿದೆ. ಜಾತಿ, ಧರ್ಮಗಳ ನಡುವೆ ಕೋಮುದ್ವೇಷ ಹೆಚ್ಚಾಗಿದೆ’ ಎಂದು ಆರೋಪಿಸಿದರು.
‘ಹಿಂದೂಗಳ ಪರವಾಗಿದ್ದೇವೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಿಜೆಪಿ ಬಂದಿದೆ. ಎನ್‍ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗಗಳ ಮೇಲೆ ಇದುವರಿಗೂ ಜನಸಾಮಾನ್ಯರ ಮೇಲೆ ದಾಳಿ, ದೌರ್ಜನ್ಯ, ದಬ್ಬಾಳಿಕೆ, ಕೊಲೆ ನಡೆಯುತ್ತಿದೆ’ ಎಂದರು.
‘ವಕೀಲ ವೃತ್ತಿ ಮಾಡಿ ಜನರಿಗೆ ನ್ಯಾಯ ಒದಗಿಸುತ್ತೇನೆ ಎಂದು ಪ್ರಮಾಣೀಕರಿಸಿದ ಕಿಶೋರ್ ರಾಕೇಶ ತಮ್ಮ ಮನುವಾದಿತನವನ್ನು ಪ್ರದರ್ಶನ ಮಾಡಿದ್ದಾರೆ. ಕೂಡಲೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಶಿಕ್ಷೆ ಆಗಬೇಕು. ದೇಶದಲ್ಲಿ ಸನಾತನಿಗಳನ್ನು, ಮನುವಾದಿಗಳನ್ನು, ಸಂಘಿಗಳನ್ನು ಹೆಮ್ಮೆಟ್ಟಿಸಬೇಕು. ದೇಶದ ಸಂವಿಧಾನ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉಳಿಸಲು ಪ್ರಗತಿಪರರು, ಚಿಂತಕರು ಒಂದಾಗಬೇಕು’ ಎಂದು ಕರೆ ನೀಡಿದರು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಬಿಳ್ಳೂರುನಾಗರಾಜ್ ಮಾತನಾಡಿ, ‘ದೇಶದಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದವರ್ಗಗಳಿಗೆ ರಕ್ಷಣೆ ಇಲ್ಲ. ಯಾವಾಗ, ಯಾರ ಮೇಲೆ ದಾಳಿ, ಹಲ್ಲೆ ನಡೆಯುತ್ತದೆಯೋ ಎಂಬ ಆತಂಕ ಕಾಡುತ್ತಿದೆ. ಮುಖ್ಯನ್ಯಾಯಮೂರ್ತಿ ಮೇಲೆ ದಾಳಿಯ ಪ್ರಕರಣ ದೇಶದಲ್ಲಿ ದಲಿತರಿಗೆ ರಕ್ಷಣೆ ಇಲ್ಲ ಆಗಿದೆ ಎಂಬಂತೆ ಆಗಿದೆ’ ಎಂದರು.
ಸಿಪಿಎಂ ತಾಲ್ಲೂಕು ಸಮಿತಿ ಎಂ.ಎನ್.ರಘುರಾಮರೆಡ್ಡಿ, ಸದಸ್ಯ ಡಿ.ಟಿ.ಮುನಿಸ್ವಾಮಿ, ಅಶ್ವತ್ಥಪ್ಪ, ಜಿ.ಕೃಷ್ಣಪ್ಪ, ಲಕ್ಷ್ಮಣರೆಡ್ಡಿ, ಎ.ಸೋಮಶೇಖರ, ಜಿ.ಮುಸ್ತಾಫ, ಎಚ್.ಎ.ರಾಮಲಿಂಗಪ್ಪ, ಚನ್ನರಾಯಪ್ಪ, ರಶೀದ್, ಬಿ.ಎಚ್.ರಫೀಕ್, ಬಿ.ಎಚ್.ಸಾದಿಕ್, ಇಮ್ರಾನ್, ನರಸಿಂಹರೆಡ್ಡಿ, ನಾರಾಯಣಸ್ವಾಮಿ, ಸಾಯಿಜ್ಯೋತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.