ADVERTISEMENT

ಚಿಕ್ಕಬಳ್ಳಾಪುರ: ಸ್ಮಶಾನಗಳನ್ನು ಉದ್ಯಾನಗಳಂತೆ ರೂಪಿಸಿ; ಡಾ.ಕೆ.ಸುಧಾಕರ್

ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 16:48 IST
Last Updated 9 ಸೆಪ್ಟೆಂಬರ್ 2020, 16:48 IST
ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರುದ್ರಭೂಮಿ ಇಲ್ಲದ ಕಡೆ ಆದ್ಯತೆ ಮೇರೆಗೆ ಭೂಮಿ ಒದಗಿಸಿ ನರೇಗಾ ಅಡಿಯಲ್ಲಿ ಅಭಿವೃದ್ಧಿ ಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ಗ್ರಾಮದಲ್ಲಿನ ಸ್ಮಶಾನ ಗಳನ್ನು ಉದ್ಯಾನಗಳಂತೆ ರೂಪಿಸ ಬೇಕು. ಯಾವುದೇ ಜಾತಿ, ಜನಾಂಗಕ್ಕೆ ತೊಂದರೆಯಾಗದಂತೆ ಎಚ್ಚರವಹಿಸ ಬೇಕು. ಕಂದಾಯ ಇಲಾಖೆಯಲ್ಲಿ ಆರ್‌ಟಿಸಿ ಬಾಕಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಗುಡಿಬಂಡೆ ಮಾದರಿ ಯಲ್ಲಿ ತಹಶೀಲ್ದಾರ್‌ಗಳು ಗಮನಹರಿಸಿ ಕ್ರಮ ಜರುಗಿಸಬೇಕು. ವಿವಿಧ ಪಿಂಚಣಿ ಯೋಜನೆಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು. ಬಾಕಿ ಇರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕಾಗಿದೆ ಎಂದರು.

ADVERTISEMENT

ಕಂದಾಯ ಇಲಾಖೆ ವಿಷಯಗಳ ಬಗ್ಗೆ ರೈತರನ್ನು ಅಲೆದಾಡಿಸುತ್ತಿರುವುದು ಗಮನಕ್ಕೆ ಬಂದಿದೆ. ಸಣ್ಣಪುಟ್ಟ ವಿಷಯಗಳಿಗೆ ಅಲೆದಾಡಿಸಬಾರದು. ಅರ್ಜಿ ಸ್ವೀಕಾರ ಮತ್ತು ವಿಲೇವಾರಿ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಕಾನೂನು ನೆಪ ಹೇಳಿ ರೈತರಿಗೆ ತೊಂದರೆ ನೀಡಬಾರದು ಎಂದು ಸೂಚಿಸಿದರು.

‘ಯಾವುದೇ ಇಲಾಖೆಯಲ್ಲಿ ದಲ್ಲಾಳಿಗಳ ಕಾಟ ಇರಬಾರದು. ಏಜೆಂಟರು ಇಲ್ಲದೆ ಕೆಲಸ ಮಾಡಲು ಯಾಕೆ ಆಗಲ್ಲ? ಆರ್‌ಟಿಒ ಮತ್ತು ಉಪ ನೋಂದಣಿ ಇಲಾಖೆಗಳಲ್ಲಿ ದಳ್ಳಾಳಿಗಳ ಕಾಟ ಹೆಚ್ಚು ಎಂಬ ದೂರುಗಳಿವೆ. ಅನಿರೀಕ್ಷಿತ ಭೇಟಿ ನೀಡಿದಾಗ ಸ್ಥಳದಲ್ಲಿಯೇ ಅಮಾನತು ಮಾಡಿ ಸೇವಾ ಪುಸ್ತಕದಲ್ಲಿ ನಮೂದಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಲಾರಿ‌ ಮತ್ತು ಟಿಪ್ಪರ್‌ಗಳ ಓವರ್ ಲೋಡ್ ಸಾಗಾಣಿಕೆಯಿಂದ ರಸ್ತೆ ಹಾಳಾಗುತ್ತಿವೆ. ಇದು ಮುಂದುವರಿಯದಂತೆ ನೋಡಿಕೊಳ್ಳ ಬೇಕು. ಗಣಿ, ಪೋಲಿಸ್ ಮತ್ತು ಸಾರಿಗೆ ಅಧಿಕಾರಿಗಳು ಒಟ್ಟಿಗೆ ಕುಳಿತು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಅಗತ್ಯ ಬಿದ್ದರೆ ಕಾರ್ಯಪಡೆ ರಚನೆ ಮಾಡಿ. ಕಾನೂನು ಬದ್ಧವಾದ ನಿರ್ಧಾರ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಪ್ರಕರಣಗಳ ಬಗ್ಗೆ ದೂರು ಬಂದಿವೆ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ರಾಜಧನ ಕಟ್ಟದ ಪ್ರಕರಣಗಳು ಸಾಕಷ್ಟಿವೆ. ಅವುಗಳ ವಸೂಲಿಗೆ ಮತ್ತು ಅಂತಹ ಪ್ರಕರಣಗಳಲ್ಲಿ ಪರವಾನಗಿ ನವೀಕರಣ ಮಾಡಬಾರದು. ಒಂದು ವೇಳೆ ಮಾಡಿರುವ ನಿದರ್ಶನ ಇದ್ದರೆ ಮಾಹಿತಿ ನೀಡಿ ಎಂದು ಸೂಚನೆ ನೀಡಿದರು.

‘ಹೊರ ರಾಜ್ಯಗಳ ಗುತ್ತಿಗೆದಾರರಿಗೆ ಹೆಚ್ಚಿನ ಕ್ವಾರಿ ಗುತ್ತಿಗೆ ನೀಡಲಾಗಿದೆ. ಸ್ಥಳೀಯರಿಗೆ ಆದ್ಯತೆ ನೀಡಬೇಕು. ಇಲ್ಲಿನ ಜನ ಹೊರಗಿನವರಿಗೆ ಗುಲಾಮರಾಗಿರಬೇಕಾ?. ಕೊಡಿ, ಆದರೆ, ಶೇ 95ರಷ್ಟು ಅವರಿಗೆ ಕೊಡುವುದು ಸರಿಯಲ್ಲ’ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಜಿ.ಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ನಿರ್ಮಲಾ, ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಬಿ.ಫೌಜಿಯಾ ತರನ್ನುಮ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ರಘುನಂದನ್, ಶಾಸಕರಾದ ಜೆ.ಕೃಷ್ಣಾರೆಡ್ಡಿ, ಎಸ್.ಎನ್.ಸುಬ್ಬಾರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.