ADVERTISEMENT

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಪರ ಸಿನಿಮಾ ತಾರೆಯರ ದಂಡು

ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರ ನಟಿ ಶ್ರುತಿ, ಹರ್ಷಿಕಾ ಪೂಣಚ್ಚ, ಹರಿಪ್ರಿಯಾ ಮತ ಪ್ರಚಾರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 10:03 IST
Last Updated 28 ನವೆಂಬರ್ 2019, 10:03 IST
ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರ ನಟ ದಿಗಂತ್ ಮತಯಾಚನೆ ಮಾಡಿದರು.
ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರ ನಟ ದಿಗಂತ್ ಮತಯಾಚನೆ ಮಾಡಿದರು.   

ಚಿಕ್ಕಬಳ್ಳಾಪುರ: ಈ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ.

ಶತಾಯ ಗತಾಯ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮೂರು ಪಕ್ಷಗಳು ಪಣ ತೊಟ್ಟಿವೆ. ಆ ನಿಟ್ಟಿನಲ್ಲಿ ದಿನದಿಂದ ದಿನಕ್ಕೆ ಪ್ರಚಾರದ ಕಾವು ಹೆಚ್ಚುತ್ತಿದೆ.

ಪ್ರಚಾರಕ್ಕೆಂದು ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಯಕರನ್ನು ರೋಡ್‌ ಶೋ, ಪ್ರಚಾರ ಸಭೆಗಳಿಗೆ ಕರೆತರುತ್ತಿದ್ದಾರೆ. ಇದಲ್ಲದೆ ಸಿನಿಮಾ ತಾರೆಯರನ್ನು ಪ್ರಚಾರಕ್ಕೆ ಕರೆತಂದು ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.

ADVERTISEMENT

ಈ ಕ್ಷೇತ್ರದ ಹಿಂದಿನ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಹಲವರು ಸಿನಿಮಾ ತಾರೆಯರನ್ನು ಕರೆ ತಂದು ತಮ್ಮ ಪರ ಮತ ಪ್ರಚಾರ ಕೈಗೊಂಡಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ್ದು ಈ ಬಾರಿಯೂ ಕೂಡ ಮತದಾರರನ್ನು ಸೆಳೆಯಲು ಸಿನಿಮಾ ತಾರೆಯರನ್ನು ಪ್ರತಿನಿತ್ಯ ಪ್ರಚಾರಕ್ಕೆಂದು ಬಳಸಿಕೊಳ್ಳುತ್ತಿದ್ದಾರೆ. ನಗರದಲ್ಲಿ ಕಳೆದ ಒಂದು ವಾರದಿಂದ ಸಿನಿಮಾ ತಾರೆಯರಾದ ಹಿರಿಯ ನಟಿ ಶ್ರುತಿ, ಹರ್ಷಿಕಾ ಪೂಣಚ್ಚ, ಹರಿಪ್ರಿಯಾ, ನಟರಾದ ಭುವನ್‌, ದಿಗಂತ್‌ ಹೆಗಡೆ ಅವರು ಸುಧಾಕರ್‌ ಪರ ಪ್ರಚಾರ ನಡೆಸುತ್ತಿದ್ದಾರೆ.

ಸಿನಿಮಾ ತಾರೆಯರು ಮತ ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರು ತಾರೆಯರನ್ನು ನೋಡಿ ಅಬ್ಬಾ, ಅಬ್ಬಬ್ಬಾ ನಮ್ಮ ಮನೆ ಬಳಿ ಹರ್ಷಿಕಾ ಬಂದಿದ್ದಾರೆ ಎಂದು ಅವರೊಂದಿಗೆ ಸೆಲ್ಫಿ ಫೋಟೊ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಾವು ಇಂತದೇ ಪಕ್ಷಕ್ಕೆ ಮತ ಹಾಕುತ್ತೇವೆ ಎಂದು ಯಾರೂ ಕೂಡ ಹೇಳುತ್ತಿಲ್ಲ. ಇನ್ನಿತರ ಪಕ್ಷಗಳ ಪ್ರಮುಖ ನಾಯಕರು ಬಂದಾಗಲೂ ಕೂಡ ಆದೇ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಆದರೆ, ಮತದಾರ ಯಾರಿಗೆ ಮಣೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಿತರ ಪಕ್ಷಗಳ ಅಭ್ಯರ್ಥಿಗಳು ತಮ್ಮ ಪಕ್ಷದ ಪ್ರಮುಖರನ್ನು ಕರೆತಂದು ಪ್ರಚಾರ, ರೋಡ್‌ ಶೋಗಳು ಕೈಗೊಳ್ಳುತ್ತಿದ್ದಾರೆ. ಆದರೆ, ಈವರೆಗೂ ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳ ಪರ ಪ್ರಚಾರಕ್ಕೆ ಸಿನಿಮಾ ತಾರೆಯರು ಯಾರೂ ಕೂಡ ಬಂದಿಲ್ಲ.

ಆದರೆ, ಹಿಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ ಕನ್ನಡದ ಸಿನಿಮಾ ತಾರೆಯರನ್ನು ಅಲ್ಲದೇ ತೆಲುಗಿನ ಖ್ಯಾತ ನಟರಾದ ಚಿರಂಜೀವಿ, ಪವನ್‌ ಕಲ್ಯಾಣ್‌ ಅವರನ್ನು ಬಳಸಿಕೊಂಡು ನಗರದಲ್ಲಿ ದೊಡ್ಡ ಮಟ್ಟದ ರೋಡ್‌ ಶೋಗಳನ್ನು ನಡೆಸಿದ್ದರು ಎಂದು ರಾಜಕೀಯ ಮುಖಂಡರಾದ ಶ್ರೀನಿವಾಸ್ ತಿಳಿಸಿದರು.

ಇದು ಕೇವಲ ಗಿಮಿಕ್
ಅನರ್ಹ ಶಾಸಕ ಡಾ.ಕೆ.ಸುಧಾಕರ್ ಎರಡು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ದೊಡ್ಡಮಟ್ಟದ ಯಾವುದೇ ಕಾರ್ಯಕ್ರಮ ನಡೆಸಿದರೂ ಸಿನಿಮಾ ತಾರೆಯರನ್ನು ಪ್ರಚಾರಕ್ಕೆ ಕರೆತರುತ್ತಿದ್ದರು. ಜೊತೆಗೆ, ಕಾರ್ಯಕ್ರಮಗಳಿಗೆ ಜನರನ್ನು ಸೆಳೆಯುವ ನಿಟ್ಟಿನಲ್ಲಿ ಇಂತಹ ಗಿಮಿಕ್‌ಗಳನ್ನು ಮಾಡುತ್ತಾರೆ ಎಂದು ಸಾರ್ವಜನಿಕರೊಬ್ಬರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.