ADVERTISEMENT

ಸಿಎಎ: ಜನರಿಗೆ ಸತ್ಯಾಂಶ ತಿಳಿಸಿ

ಬಿಜೆಪಿ ವತಿಯಿಂದ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 13:28 IST
Last Updated 10 ಜನವರಿ 2020, 13:28 IST
ನಗರದಲ್ಲಿ ಕೆಲ ಮನೆಗಳಿಗೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಎ ಕುರಿತಂತೆ ನಾಗರಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಿದರು.
ನಗರದಲ್ಲಿ ಕೆಲ ಮನೆಗಳಿಗೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಎ ಕುರಿತಂತೆ ನಾಗರಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಿದರು.   

ಚಿಕ್ಕಬಳ್ಳಾಪುರ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತಾಗಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತ, ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಸಿಎಎ ಕುರಿತಾಗಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಜತೆಗೆ ಸತ್ಯಾಂಶ ತಿಳಿಸುವ ಕೆಲಸ ಮಾಡಬೇಕು’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಶುಕ್ರವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತದಲ್ಲಿ ಹುಟ್ಟಿದವರು ಸಹಜವಾಗಿ ಇಲ್ಲಿನ ಪೌರತ್ವ ಪಡೆಯುತ್ತಾರೆ. ಹೀಗಾಗಿ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ. ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಬೌದ್ಧ, ಸಿಖ್ಖರು, ಪಾರ್ಸಿ, ಜೈನರು ದೌರ್ಜನ್ಯ, ಅತ್ಯಾಚಾರಕ್ಕೆ ತುತ್ತಾಗಿ ಮನೆ, ಕುಟುಂಬ ಕಳೆದುಕೊಂಡು ಶರಣಾಗತಿಯ ಮೂಲಕ ಭಾರತಕ್ಕೆ ಬಂದವರು ನೌಕರಿ, ಪಡಿತರ ಚೀಟಿ, ಆಧಾರ್‌ ಕಾರ್ಡ್ ಇಲ್ಲದೆ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದೆ ಭಿಕ್ಷುಕರಾಗಿ ಜೋಪಡಿಯಲ್ಲಿ ಬದುಕುತ್ತಿದ್ದಾರೆ. ಅಂತಹವರಿಗೆ ಸಿಎಎ ಅನ್ವಯವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಸಿಎಎ ಬಿಜೆಪಿ ಹೊಸದಾಗಿ ತಂದ ಕಾಯ್ದೆಯಲ್ಲ. ಹಿಂದೆ ಈ ಕಾಯ್ದೆಯನ್ನು ಕಾಂಗ್ರೆಸ್‌ ತಂದಿತ್ತು. ಅದನ್ನು ಈಗ ಬಿಜೆಪಿ ತಿದ್ದುಪಡಿ ಮಾಡಿದೆ. ಆದರೆ ಇವತ್ತು ಕಾಂಗ್ರೆಸ್‌ ಸಿಎಎ ಕುರಿತಂತೆ ಸುಳ್ಳು ಹೇಳುತ್ತ, ಜನ ಸಂಘರ್ಷ ಉಂಟು ಮಾಡಿ, ಆ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುವ ಕೆಲಸ ಮಾಡುತ್ತಿದೆ. ಇಂತಹ ಅಪಪ್ರಚಾರದಿಂದ ತಮ್ಮ ಮತ ಬ್ಯಾಂಕ್‌ ಮತ್ತಷ್ಟು ಗಟ್ಟಿಗೊಳಿಸಬಹುದು ಎಂದು ಭಾವಿಸಿಕೊಂಡಿರುವ ಕಾಂಗ್ರೆಸ್‌ನವರು, ದೇಶದಲ್ಲಿ ಎರಡು ಸಮುದಾಯದವರನ್ನು ಸಂಘರ್ಷಕ್ಕೆ ಈಡು ಮಾಡುವ ಪಾಪದ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ವೈಚಾರಿಕ ಸಂಘರ್ಷಕ್ಕೆ ಸ್ವಾಗತವಿದೆ. ಆದರೆ ದೇಶದಲ್ಲಿ ಇವತ್ತು ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ದೇಶದ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತಿದ್ದೆ. ಅದಕ್ಕೆ ಜೆಎನ್‌ಯು, ಮೈಸೂರು ಘಟನೆಗಳೇ ಉದಾಹರಣೆ. ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಮಾಡಬೇಕು. ಜೆಎನ್‌ಯು ಮತ್ತು ರಾಜ್ಯದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ನಿಲಯಗಳಲ್ಲಿ ಅವಧಿಗೂ ಮೀರಿ ಬೀಡು ಬಿಟ್ಟು ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ದೇಶದ್ರೋಹಿ ಶಕ್ತಿಗಳನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಬೇಕಾಗಿದೆ’ ಎಂದು ಹೇಳಿದರು.

ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ಸಿಎಎ ಭಾರತೀಯರಿಗೆ ಅನ್ವಯವಾಗುವುದಿಲ್ಲ. ಆದರೂ ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಕ್ಷಗಳು ಅಮಾಯಕ ಜನರ ದಿಕ್ಕು ತಪ್ಪಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಜತೆಗೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿವೆ. ಜತೆಗೆ ವಿದ್ಯಾರ್ಥಿಗಳು, ಅಲ್ಪಸಂಖ್ಯಾತರ ಮನಸ್ಸನ್ನು ಕೆಡಿಸುವ ಕೆಲಸ ಮಾಡುತ್ತಿವೆ. ಇದರಿಂದ ದೇಶದಲ್ಲಿ ಒಬ್ಬೇ ಒಬ್ಬರಿಗೂ ತೊಂದರೆಯಾಗುವುದಿಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು ಲಭ್ಯವಾಗಲಿವೆ. ವಿಶೇಷವಾಗಿ ಮುಸ್ಲಿಮರು ರಾಜಕೀಯ ದುರುದ್ದೇಶಕ್ಕೆ ಬಲಿಯಾಗಬಾರದು’ ಎಂದು ತಿಳಿಸಿದರು.

‘ರಾಜಕೀಯವಾಗಿ ದಿವಾಳಿಯಾದವರು ಸಿಎಎ ವಿಚಾರ ಎತ್ತಿಕೊಂಡು ಮುಂದೆ ಬರಲು ನೋಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ಸಿಎಎ ಬಗ್ಗೆ ಜನರಿಗೆ ಭರವಸೆ ನೀಡಿದರೂ ವಿರೋಧ ಪಕ್ಷದವರು ಶಾಂತಿ ಕದಡುವ, ಸಮಾಜದ ಸಾಮರಸ್ಯ ಹಾಳು ಮಾಡುತ್ತ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಆತಂಕದಲ್ಲಿ ಇರುವವರ ಮನಸು ಪರಿವರ್ತನೆ ಮಾಡುವ ಕೆಲಸ ಮಾಡಬೇಕು’ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶೋಭಾ ಅವರು ನಗರದಲ್ಲಿ ಕೆಲ ಮನೆಗಳಿಗೆ ತೆರಳಿ ಕರಪತ್ರಗಳನ್ನು ವಿತರಿಸುವ ಮೂಲಕ ಸಿಎಎ ಕುರಿತ ಜನ ಜಾಗೃತಿ ಅಭಿಯಾನದ ಮನೆ ಮನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ಜ್ಯೋತಿ ರೆಡ್ಡಿ, ನಗರ ಮಂಡಲ ಅಧ್ಯಕ್ಷ ಶ್ರೀನಿವಾಸ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕೃಷ್ಣಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.