ADVERTISEMENT

ಬದಲಾಗುವರೇ ಸಚಿವರು; ಯಾರಿಗೆ ಅದೃಷ್ಟ?

ನವೆಂಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ; ಗರಿಗೆದರಿದ ಚರ್ಚೆ

ಡಿ.ಎಂ.ಕುರ್ಕೆ ಪ್ರಶಾಂತ
Published 14 ಅಕ್ಟೋಬರ್ 2025, 3:17 IST
Last Updated 14 ಅಕ್ಟೋಬರ್ 2025, 3:17 IST
ಎಸ್.ಎನ್.ಸುಬ್ಬಾರೆಡ್ಡಿ
ಎಸ್.ಎನ್.ಸುಬ್ಬಾರೆಡ್ಡಿ   

ಚಿಕ್ಕಬಳ್ಳಾಪುರ: ‘ನವೆಂಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ’– ಈ ಮಾತುಗಳು ರಾಜ್ಯ ರಾಜಕೀಯದಲ್ಲಿ ಚರ್ಚೆಗಳನ್ನು ಗರಿಗೆದರಿಸಿದೆ. ಖುದ್ದು ಮುಖ್ಯಮಂತ್ರಿ ಅವರೇ ಈ ಬಗ್ಗೆ ಮಾತನಾಡಿರುವುದು ವಿಸ್ತರಣೆಯ ಸುಳಿವನ್ನೂ ನೀಡಿದೆ. 

ಸಚಿವ ಸಂಪುಟ ವಿಸ್ತರಣೆ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿಯೂ ಚರ್ಚೆಗಳು ಜೋರಾಗಿವೆ. ಚಿಂತಾಮಣಿ ಶಾಸಕರಾದ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಮುಂದುವರಿಯುವರೇ ಅಥವಾ ಬೇರೊಬ್ಬರಿಗೆ ಅವಕಾಶಗಳು ದೊರೆಯುವುದೇ ಎನ್ನುವ ವಿಚಾರ ಚರ್ಚೆಗೆ ಕಾರಣವಾಗಿದೆ. 

ಇತ್ತೀಚೆಗೆ ಶಾಸಕರಾದ ಎಸ್‌.ಎನ್.ಸುಬ್ಬಾರೆಡ್ಡಿ ಮತ್ತು ಪ್ರದೀಪ್ ಈಶ್ವರ್ ಈ ಬಗ್ಗೆ ಬಹಿರಂಗವಾಗಿಯೇ ತಮ್ಮ ಬಯಕೆ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಜಿಲ್ಲೆಯಲ್ಲಿ ಸಚಿವರು ಬದಲಾಗುವರೇ ಎನ್ನುವ ಕುತೂಹಲ ಮೂಡಿದೆ.

ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಡಾ.ಎಂ.ಸಿ.ಸುಧಾಕರ್ ಮತ್ತು ಬಾಗೇಪಲ್ಲಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಅವರ ನಡುವೆ ಸಚಿವ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಹೈಕಮಾಂಡ್ ಸುಧಾಕರ್ ಅವರಿಗೆ ನಿಶಾನೆ ತೋರಿತು. ಈ ಇಬ್ಬರು ಮೂರು ಬಾರಿ ಶಾಸಕರಾಗಿದ್ದಾರೆ.  

ಸುಬ್ಬಾರೆಡ್ಡಿ ಅವರು ಸಚಿವ ಸ್ಥಾನದ ವಿಚಾರವಾಗಿ ವರಿಷ್ಠರ ಭೇಟಿ ಮಾಡಲು ನವದೆಹಲಿಗೆ ತೆರಳದಿರುವುದೇ ಅವರು ಸ್ಥಾನದಿಂದ ವಂಚಿತವಾಗಲು ಕಾರಣ ಎನ್ನುವ ಮಾತುಗಳು ಸಹ ಆಗ ಕೇಳಿ ಬಂದವು. ಸುಧಾಕರ್ ಉನ್ನತ ಶಿಕ್ಷಣ ಸಚಿವರಾಗುವ ಜೊತೆಗೆ ಜಿಲ್ಲಾ ಉಸ್ತುವಾರಿಯೂ ಆದರು. ಅಲ್ಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರಲ್ಲಿ ‘ಸಚಿವ’ರ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಗೆ ವಿರಾಮ ಬಿದ್ದಿತ್ತು. 

ಸಚಿವ ಸ್ಥಾನ ದೊರೆಯದಿದ್ದಾಗ ಸುಬ್ಬಾರೆಡ್ಡಿ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದರು. ನಂತರ ಕರ್ನಾಟಕ ಬೀಜ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಯಿತು. ಆದರೆ ನಿಗಮದ ಅಧ್ಯಕ್ಷ ಸ್ಥಾನ ತಿರಸ್ಕರಿಸಿದರು. ‘ಸಚಿವ ಸ್ಥಾನ ನೀಡುವುದಾರೆ ನೀಡಿ, ಇಲ್ಲವೆ ಯಾವುದೇ ಹುದ್ದೆ ಬೇಡ’ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಸುದೀರ್ಘವಾದ ಪತ್ರ ಬರೆದಿದ್ದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಅವರ ಬೇಗುದಿ ತಣ್ಣಗಾಗಿತ್ತು. ‘ಮುಂದಿನ ದಿನಗಳಲ್ಲಿ ಸಚಿವ ಸ್ಥಾನದ ಅವಕಾಶ ಕೊಡುವ ಭರವಸೆಯನ್ನು ಪಕ್ಷದ ನಾಯಕರು ನೀಡಿದ್ದರು’ ಎಂದು ಶಾಸಕರ ಆಪ್ತರು ತಿಳಿಸುವರು. 

ಈ ಹಿಂದೆ ಬಿಜೆಪಿಯ ಆಪರೇಷನ್ ಕಮಲದ ವೇಳೆ ಸುಬ್ಬಾರೆಡ್ಡಿ ಅವರಿಗೂ ಸಚಿವ ಸ್ಥಾನದ ಆಮಿಷವೊಡ್ಡಲಾಗಿತ್ತು. ಆದರೆ ಅವರು ಕೈನಲ್ಲಿಯೇ ಗಟ್ಟಿಯಾಗಿ ಉಳಿದರು. ಸಚಿವ ಸ್ಥಾನದ ವಿಚಾರವು ಮುನ್ನೆಲೆಗೆ ಬಂದಾಗ, ಸುಬ್ಬಾರೆಡ್ಡಿ ಅವರು ಆಪರೇಷನ್ ಕಮಲದ ಆಮಿಷ ಬಗ್ಗೆ ಪ್ರಸ್ತಾಪಿಸುವರು. ನಾನು ಪಕ್ಷ ನಿಷ್ಠನಾದ ಕಾರಣದಿಂದಲೇ ಕಾಂಗ್ರೆಸ್‌ನಲ್ಲಿ ಉಳಿದೆ. ಈ ನಿಷ್ಠೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು ಎಂದು ಕೋರುವರು.

‘ನಾನು ಮೂರು ಬಾರಿ ಶಾಸಕನಾಗಿದ್ದೇನೆ. ನನಗೆ ಸಚಿವ ಸ್ಥಾನ ನೀಡಬೇಕು’ ಎಂದು ಸುಬ್ಬಾರೆಡ್ಡಿ ಅವರು ಈ ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದಾರೆ. ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. 

ಪ್ರದೀಪ್ ಈಶ್ವರ್ ದಾಳ: ಮತ್ತೊಂದು ಕಡೆ ಮೊದಲ ಬಾರಿಗೆ ಶಾಸಕರಾಗಿರುವ ಪ್ರದೀಪ್ ಈಶ್ವರ್ ಸಹ ‘ಇನ್ನು ಎರಡು ತಿಂಗಳಲ್ಲಿ ಸಚಿವನಾಗುವೆ’ ಎಂದು ಇತ್ತೀಚೆಗೆ ನುಡಿದ್ದರು. ಕಾಂಗ್ರೆಸ್‌ನಿಂದ ಆಯ್ಕೆ ಆಗಿರುವ ಬಲಿಜ ಸಮುದಾಯದ ಏಕೈಕ ಶಾಸಕ ಪ್ರದೀಪ್ ಈಶ್ವರ್. ಸಮುದಾಯವಾರು ಪ್ರಾತಿನಿಧ್ಯವನ್ನು ಪಕ್ಷವು ನೀಡುತ್ತದೆ. ಆಗ ಸಚಿವ ಸ್ಥಾನ ದೊರೆಯುತ್ತದೆ ಎನ್ನುವ ವಿಶ್ವಾಸವನ್ನು ಅವರ ಬೆಂಬಲಿಗರು ಹೊಂದಿದ್ದಾರೆ. 

ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಪ್ರದೀಪ್ ಈಶ್ವರ್ ಬೆಂಬಲಿಗರು ‘ಬಲಿಜ’ ಸಮುದಾಯದ ಕೋಟಾದಡಿ ಸಚಿವ ಸ್ಥಾನ ನೀಡಬೇಕು ಎಂದು ಕೋರಿದ್ದರು. ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಸಚಿವರಾಗುವ ಸಾಧ್ಯತೆ ಇದೆ. ಇದರಿಂದ ಬಲಿಜ ಸಮುದಾಯದವರೇ ಆದ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ ಅವರಿಗೆ ಅವಕಾಶ ದೊರೆಯುವುದು ಕಷ್ಟ ಸಾಧ್ಯ. ಆದ್ದರಿಂದ ಪ್ರದೀಪ್ ಈಶ್ವರ್‌ಗೆ ಅವಕಾಶ ದೊರೆಯಲಿದೆ ಎಂದು ಶಾಸಕರ ಆಪ್ತರು ಭರವಸೆ ವ್ಯಕ್ತಪಡಿಸುವರು.

ಈ ಹಿರಿಯ ಮತ್ತು ಕಿರಿಯ ಶಾಸಕರು ಸಚಿವ ಸ್ಥಾನದ ಬಯಕೆಯನ್ನು ಇತ್ತೀಚೆಗೆ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಂಪುಟ ವಿಸ್ತರಣೆ ವಿಚಾರವಾಗಿ ಪಕ್ಷದ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಅವರತ್ತ ಬೆರಳು ತೋರುವರು. ಈ ಎಲ್ಲ ಕಾರಣದಿಂದ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಚಿವರು ಬದಲಾಗುವರೇ? ಯಾರು ಸಚಿವ ಸ್ಥಾನ ಪಡೆಯುವರು ಎನ್ನುವ ಚರ್ಚೆ ಆರಂಭವಾಗಿದೆ.

ಪ್ರದೀಪ್ ಈಶ್ವರ್ 

ಈ ಹಿಂದಿನ ಸಚಿವರು

ಅವಿಭಜಿತ ಕೋಲಾರ ಜಿಲ್ಲೆಗೆ ಒಳಪಟ್ಟಿದ್ದ ಚಿಂತಾಮಣಿ ಶಾಸಕರಾಗಿದ್ದ ಚೌಡರೆಡ್ಡಿ ಮತ್ತು ಕೆ.ಎಂ.ಕೃಷ್ಣಾರೆಡ್ಡಿ ಸಚಿವರಾಗಿದ್ದರು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವಿ.ಮುನಿಯಪ್ಪ  ಚಿಕ್ಕಬಳ್ಳಾಪುರ  ಶಾಸಕಿಯಾಗಿದ್ದ ರೇಣುಕಾ ರಾಜೇಂದ್ರನ್ ಸಹ ಮಂತ್ರಿ ಪಟ್ಟ ಅಲಂಕರಿಸಿದ್ದರು.    ಚಿಕ್ಕಬಳ್ಳಾಪುರ ಜಿಲ್ಲೆಯು ರಚನೆಯಾದ ನಂತರ ಗೌರಿಬಿದನೂರಿನ ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್ ಸಚಿವರಾಗಿದ್ದಾರೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ನಾಲ್ಕೂ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳು ಸಚಿವ ಸ್ಥಾನ ಅಲಂಕರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.