ADVERTISEMENT

ಕ್ಯಾಟ್‌ಫಿಶ್ ಸಾಕಾಣಿಕೆ ಹೊಂಡಗಳ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 16:41 IST
Last Updated 24 ಏಪ್ರಿಲ್ 2020, 16:41 IST
ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರದಲ್ಲಿ ಕ್ಯಾಟ್ ಫಿಶ್ ಹೊಂಡಾ ತೆರವುಗೊಳಿಸಿದ್ದರಿಂದ ವಿಲ ವಿಲ ಹೊದ್ದಾಡುತ್ತಿರುವ ಮೀನುಗಳು.
ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರದಲ್ಲಿ ಕ್ಯಾಟ್ ಫಿಶ್ ಹೊಂಡಾ ತೆರವುಗೊಳಿಸಿದ್ದರಿಂದ ವಿಲ ವಿಲ ಹೊದ್ದಾಡುತ್ತಿರುವ ಮೀನುಗಳು.   

ಚಿಂತಾಮಣಿ: ತಾಲ್ಲೂಕಿನ ಚಿನ್ನಸಂದ್ರ ಗ್ರಾಮದ ಸುತ್ತಮುತ್ತ ನಿಷೇಧಿತ ಆಫ್ರಿಕನ್ ಕ್ಯಾಟ್‌ ಫಿಷ್ ಸಾಕಾಣಿಕೆ ಹೊಂಡಗಳನ್ನು ಅಧಿಕಾರಿಗಳು ಶುಕ್ರವಾರ ಬಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದರು.

ದೆಹಲಿಯ ಹಸಿರು ನ್ಯಾಯಾಧಿಕರಣದ ಕಟ್ಟುನಿಟ್ಟಿನ ಎಚ್ಚರಿಕೆಗೂ ಜಗ್ಗದೆ, ಅಧಿಕಾರಿಗಳ ಮನವಿಗೂ ಸಾಕಾಣಿಕೆದಾರರು ಸ್ಪಂದಿಸಿರಲಿಲ್ಲ.

ಹೊಂಡಗಳನ್ನು ತೆರವುಗೊಳಿಸಲು 2-3 ಬಾರಿ ದಿನಾಂಕ ನಿಗದಿಪಡಿಸಿದರೂ ಒತ್ತಡದಿಂದ ಕಂಡೂ ಕಾಣದಂತೆ ಇದ್ದ, ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ನೂರಾರು ಪೊಲೀಸರ ನೆರವಿನಿಂದ ಧಿಡೀರ್ ದಾಳಿ ನಡೆಸಿ ಸಾಕಾಣಿಕೆ ಹೊಂಡಗಳನ್ನು ತೆರವುಗೊಳಿಸಿದರು.

ADVERTISEMENT

ವಿದೇಶದಿಂದ ಅಕ್ರಮವಾಗಿ ಆಮದಾಗುವ ಈ ಕ್ಯಾಟ್ ಫಿಷ್ ಮರಿಗಳನ್ನು ಪಶ್ಚಿಮ ಬಂಗಾಳ ಹಾಗೂ ಆಂಧ್ರದ ಮೂಲಕ ತಂದು ಕೃಷಿ ಜಮೀನುಗಳ ಹೊಂಡಗಳಲ್ಲಿ ಸಾಕಾಣಿಕೆ ಮಾಡುತ್ತಿದ್ದರು.

ಸತ್ತಕೋಳಿಗಳು, ರೇಷ್ಮೆಹುಳುಗಳು, ಕೋಳಿ ಅಂಗಡಿಗಳ ತ್ಯಾಜ್ಯ, ಸತ್ತ ಬೀದಿ ನಾಯಿಗಳನ್ನು ಈ ಮೀನುಗಳಿಗೆ ಆಹಾರ
ವನ್ನಾಗಿ ನೀಡುತ್ತಾರೆ. ಹೊಂಡಗಳಲ್ಲಿ ಉತ್ಪತ್ತಿಯಾಗುವ ಸೊಳ್ಳೆ, ನೊಣಗಳಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಈ ಮೀನು ಸೇವನೆಯಿಂದ ಮನುಷ್ಯರಿಗೆ ಕ್ಯಾನ್ಸರ್ ಮತ್ತಿತರ ಮಾರಕ ಕಾಯಿಲೆಗಳು ಬರುವ ಸಾಧ್ಯತೆ ಇರುವುದರಿಂದಲೂ ನಿಷೇಧಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗೇಂದ್ರ ಬಾಬು ತಿಳಿಸಿದರು.

ಮೀನುಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹೊಂಡಗಳನ್ನು ತೆರವುಗೊಳಿಸುವಂತೆ ಸಾಕಾಣಿಕೆದಾರರಿಗೆ ಎಚ್ಚರಿಕೆ ನೀಡಿದ್ದರು. ಇದು ಅಫ್ರಿಕನ್ ಕ್ಯಾಟ್ ಫಿಷ್ ಎಂದು ಸಾಬೀತುಪಡಿಸಿದರೆ ನಿಲ್ಲಿಸುವುದಾಗಿ ಸಾಕಾಣಿಕೆದಾರರು ಭರವಸೆ ನೀಡಿದ್ದರು. ವಿಜ್ಞಾನಿಗಳ ತಂಡ 2019 ಅಕ್ಟೋಬರ್ 21ರಂದು ಚಿನ್ನಸಂದ್ರ ಗ್ರಾಮದ ಸುತ್ತಮುತ್ತಲ ಹೊಂಡಗಳನ್ನು ಪರಿಶೀಲಿಸಿ, ಈ ಮೀನು ಅಫ್ರಿಕನ್ ಕ್ಯಾಟ್ ಫಿಷ್ ಎಂದು ವರದಿ ನೀಡಿದ್ದರು.

ಜನವರಿ 11ರಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಈ ಬಗ್ಗೆ ವಿವರವಾದ ವರದಿ ಪ್ರಕಟವಾಗಿತ್ತು. ಸಂಸದ ಮುನಿಸ್ವಾಮಿ ಕ್ಯಾಟ್ ಫಿಶ್ ಸಾಕಾಣಿಕೆ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು.

ತಹಶೀಲ್ದಾರ್ ಎಸ್.ಎಲ್.ವಿಶ್ವನಾಥ್, ನಾಗೇಂದ್ರ ಬಾಬು, ಆಹಾರ ಇಲಾಖೆಯ ಪ್ರಕಾಶ್, ಡಿವೈಎಸ್‌ಪಿ ಶ್ರೀನಿವಾಸ್, ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀನಿವಾಸಪ್ಪ, ನಗರ ಠಾಣೆ ಇನ್‌ಸ್ಪೆಕ್ಟರ್ ಆನಂದ್ ಕುಮಾರ್ ಸೇರಿದಂತೆ ಸುಮಾರು 150 ಜನ ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.