ADVERTISEMENT

ನಾಗಪ್ಪನ ಕುಂಟೆಯಲ್ಲಿ ಕ್ಯಾಟ್‌ಫಿಶ್ ಸಾಕಣೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 2:14 IST
Last Updated 11 ಫೆಬ್ರುವರಿ 2021, 2:14 IST
ಶಿಡ್ಲಘಟ್ಟ ತಾಲ್ಲೂಕಿನ ನಾಗಪ್ಪನ ಕುಂಟೆಯಲ್ಲಿ ಅಕ್ರಮವಾಗಿ ಕ್ಯಾಟ್‌ಫಿಶ್ ಸಾಕಣೆ ಮಾಡುತ್ತಿರುವುದನ್ನು ತೋರಿಸಿದ ಗ್ರಾಮಸ್ಥರು
ಶಿಡ್ಲಘಟ್ಟ ತಾಲ್ಲೂಕಿನ ನಾಗಪ್ಪನ ಕುಂಟೆಯಲ್ಲಿ ಅಕ್ರಮವಾಗಿ ಕ್ಯಾಟ್‌ಫಿಶ್ ಸಾಕಣೆ ಮಾಡುತ್ತಿರುವುದನ್ನು ತೋರಿಸಿದ ಗ್ರಾಮಸ್ಥರು   

ಶಿಡ್ಲಘಟ್ಟ: ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿಯ ದೇವ ಗುಟ್ಟಳ್ಳಿ ನಾಗಪ್ಪನ ಕುಂಟೆಯಲ್ಲಿ ನಿಷೇಧಿತ ಕ್ಯಾಟ್‌ಫಿಶ್ ಸಾಕಣೆ ನಡೆಸಲಾಗುತ್ತಿದೆ ಎಂದು ಸುತ್ತಲಿನ ಗ್ರಾಮಸ್ಥರಾದ ರಾಮರೆಡ್ಡಿ, ನರಸಿಂಹ ರೆಡ್ಡಿ, ಗಂಗಪ್ಪ, ಆನಂದರೆಡ್ಡಿ, ಬೈರಾರೆಡ್ಡಿ, ಸೀನಪ್ಪ, ನರಸಿಂಹ, ಕೃಷ್ಣಾರೆಡ್ಡಿ ದೂರಿದ್ದಾರೆ.

‘ಮಾಂಸ ಹಾಗೂ ತ್ಯಾಜ್ಯಗಳನ್ನು ಕೆರೆಯಲ್ಲಿ ಬಿಸಾಡುತ್ತಿರುವುದರಿಂದ ಅಕ್ಕಪಕ್ಕದ ಗ್ರಾಮಗಳ ಬೀದಿನಾಯಿಗಳು ಬೀಡು ಬಿಟ್ಟಿವೆ. ಅಕ್ರಮವಾಗಿ ಕಾನೂನುಬಾಹಿರ ದಂಧೆಯನ್ನು ಮಾಡುತ್ತಿದ್ದಾರೆ. ಜನರಿಗೆ ಹಾಗೂ ದನಕರುಗಳಿಗೆ ತೊಂದರೆಯಾಗುತ್ತಿದೆ ಪರಿಸರಕ್ಕೆ ಕೂಡ ಹಾನಿಯಾಗುತ್ತಿದೆ. ಸುತ್ತಮುತ್ತಲ್ಲಿನ ಮೂರು ನಾಲ್ಕು ಗ್ರಾಮಗಳ ದನಕರುಗಳು ನೀರು ಕುಡಿಯುವ ತಾಣವನ್ನು ಕಲುಷಿತಗೊಳಿಸಿದ್ದಾರೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇಲ್ಲಿ ನಾಯಿಗಳ ಕಾಟ ವಿಪರೀತವಾಗಿದೆ’ ಎಂದು ದೇವಗುಟ್ಟಹಳ್ಳಿ ನರಸಿಂಹರೆಡ್ಡಿ ಆರೋಪಿಸಿದ್ದಾರೆ.

‘ಈ ಕೆರೆಯನ್ನು ಮೀನು ಸಾಕಣೆಗೆಂದು ಹರಾಜಿನಲ್ಲಿ ಪಡೆದುಕೊಂಡು ಅಕ್ರಮವಾಗಿ ನಿಷೇಧಿತ ಕ್ಯಾಟ್‌ಫಿಶ್ ಸಾಕುತ್ತಿದ್ದಾರೆ. ಕೋಳಿ ಮಾಂಸ ಹಾಗೂ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ. ನಾವುಗಳು ಎಷ್ಟು ವಿರೋಧಿಸಿದರೂ ಅವರ ಕೆಲಸ ನಿಲ್ಲಿಸಿಲ್ಲ’ ಎಂದು ಹತಾಶೆಯಿಂದ ನುಡಿದರು.

ADVERTISEMENT

ತೆರವಿಗೆ ಸೂಚನೆ: ಈ ಬಗ್ಗೆ ತಹಶೀಲ್ದಾರ್ ರಾಜೀವ್ ಅವರನ್ನು ಪ್ರಶ್ನಿಸಿದಾಗ, ‘ನಾಗಪ್ಪನ ಕುಂಟೆ 15 ಎಕರೆ ವಿಸ್ತೀರ್ಣವಿದೆ ಎಂದು ನಮ್ಮ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕ್ಯಾಟ್‌ಫಿಶ್ ಸಾಕಾಣಿಕೆ ಬಗ್ಗೆ ಮಾಹಿತಿ ಬಂದಿದ್ದು, ರೆವಿನ್ಯೂ ಅಧಿಕಾರಿಗಳಿಗೆ ತಕ್ಷಣವೇ ತೆರವುಗೊಳಿಸಬೇಕೆಂದು ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.