ADVERTISEMENT

ಚಿಕ್ಕಬಳ್ಳಾಪುರ: ಬಯಲು ಸೀಮೆಯಲ್ಲೂ ಶತಮಾನಗಳ ಹಳೆಯ ಬೇವಿನ ಮರ

ಎಸ್.ವೆಂಕಟಾಪುರದ ಬೇವಿನ ಮರಗಳ ಸಾಲು ಆಕರ್ಷಣೀಯ

ಡಿ.ಜಿ.ಮಲ್ಲಿಕಾರ್ಜುನ
Published 21 ಏಪ್ರಿಲ್ 2025, 7:13 IST
Last Updated 21 ಏಪ್ರಿಲ್ 2025, 7:13 IST
ಶಿಡ್ಲಘಟ್ಟ ತಾಲ್ಲೂಕಿನ ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಬೃಹತ್ ಬೇವಿನ ಮರ
ಶಿಡ್ಲಘಟ್ಟ ತಾಲ್ಲೂಕಿನ ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಬೃಹತ್ ಬೇವಿನ ಮರ   

ಸಾದಲಿ: ಸುತ್ತಲೂ ಏಳು ಬೆಟ್ಟಗಳು, ನಡುವೆ ಮೂರು ಕೆರೆಗಳು. ಮೊದಲ ಕೆರೆ ಕಟ್ಟೆಯ ಮೇಲೆ ದಶಕ - ಶತಮಾನಗಳ ಬೇವಿನ ಮರಗಳ ಸಾಲು. ಅವುಗಳಲ್ಲಿ ಒಂದು ಇನ್ನೂರು ವರ್ಷಕ್ಕೂ ಹಳೆಯದು - ಇದು ಕಥೆಯಲ್ಲ. ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ವೆಂಕಟಾಪುರದ ಬಳಿಯಿರುವ ಸುಂದರ ತಾಣ.

ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಬೇವಿನ ಮರ ಸಾಮಾನ್ಯವಾದುದ್ದೇನಲ್ಲ. ಜೈವಿಕ ವಿಜ್ಞಾನ ವೈವಿಧ್ಯ ಕಾಯ್ದೆ 2002ರ ಕಲಂ 63 (2) (ಜಿ) ಅನ್ವಯ ಕರ್ನಾಟಕ ಜೀವ ವೈವಿಧ್ಯ ಮಂಡಳಿಯೂ ಪರಂಪರಾಗತ ಮರಗಳು (ಹರಿಟೇಜ್ ಟ್ರೀಸ್) ಎಂದು ಆಯ್ದುಕೊಂಡಿರುವ ರಾಜ್ಯದ ಹತ್ತು ಮರಗಳಲ್ಲಿ ಈ ಮರವೂ ಒಂದು. ಬಯಲುಸೀಮೆ ಮತ್ತು ಬರಡು ಸೀಮೆ ಎಂದು ಕರೆಯಲ್ಪಡುವ ಜಿಲ್ಲೆಯಲ್ಲಿ ಈ ಅಪರೂಪದ ಮರ ಪೋಷಣೆ, ರಕ್ಷಣೆಯಿದ್ದರೆ ಇಲ್ಲಿಯೂ ವನರಾಜಿ ನಗಬಲ್ಲದು ಎಂಬ ಸಂದೇಶ ನೀಡುವಂತಿದೆ.

ಸುಮಾರು ಇಪ್ಪತ್ತು ಅಡಿ ಸುತ್ತಳತೆ ಹೊಂದಿರುವ ಈ ಮರವು ಎಸ್.ವೆಂಕಟಾಪುರ, ಪೂಸಗಾನದೊಡ್ಡಿ, ನೇರಳೇಮರದಹಳ್ಳಿ ಮತ್ತು ಎಸ್.ಗೊಲ್ಲಹಳ್ಳಿ ಎಂಬ ನಾಲ್ಕು ಗ್ರಾಮಗಳಿಗೆ ಸೇರಿದೆ. ಕೆರೆ ಕಟ್ಟೆಯು ಬೆಟ್ಟಗಳ ನಡುವೆ ನಿರ್ಮಾಣಗೊಂಡಿದೆ. ಎಸ್.ವೆಂಕಟಾಪುರ ಗ್ರಾಮದ ಗದ್ದೆಗಳಿಗೆ ಈ ಕೆರೆಯೇ ನೀರಿನ ಮೂಲ. ಈ ಪಾರಂಪರಿಕ ವೃಕ್ಷದೊಂದಿಗೆ ಇನ್ನೂ ಹತ್ತು ಬೃಹತ್ ಗಾತ್ರದ ಬೇವಿನ ಮರಗಳಿವೆ. ಸುತ್ತಲೂ ಹೊಂಗೆ ತೋಪಿದೆ. ವೃಕ್ಷದ ಕೆಳಗೆ ಮುನೇಶ್ವರನ ಪುಟ್ಟ ದೇಗುಲವಿದೆ. ಆದರಿಂದಲೇ ಈ ಕಟ್ಟೆಗೆ ಮುನಿಯಪ್ಪನ ಕಟ್ಟೆ ಎಂದು ಕರೆಯಲಾಗುತ್ತದೆ. ಇಲ್ಲಿ ಗಂಗಮ್ಮ ಮತ್ತು ಅಕ್ಕಯ್ಯಗಾರು ಪುಟ್ಟ ಗುಡಿಗಳೂ ಇವೆ. ದೇಗುಲದ ಮುಂಭಾಗದಲ್ಲಿ ದೇವಕಣಿಗಲೆ ಮರವಿದೆ. ಕಟ್ಟೆಯ ಬಲಭಾಗದಲ್ಲಿ ಬಿಲ್ಲುಬಾಣಗಳನ್ನು ಹಿಡಿದಿರುವ ಮೂವರು ವೀರರ ವೀರಗಲ್ಲುಗಳಿವೆ. ಎಷ್ಟೇ ಬಿರುಬಿಸಿಲಿದ್ದರೂ ಈ ಪ್ರದೇಶ ತಂಪಾಗಿರುತ್ತದೆ.

ADVERTISEMENT

ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವರ ಪೂಜೆಗಾಗಿ ಇಲ್ಲಿ ಜನ ಸೇರುತ್ತಾರೆ. ಪ್ರತಿ ವರ್ಷ ಏಪ್ರಿಲ್‌ನಲ್ಲಿ ನಾಲ್ಕೂ ಗ್ರಾಮಗಳ ಜನ ಕೂಡಿ ಜಾತ್ರೆ ನಡೆಸುತ್ತಾರೆ. ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿಂದ ಅನೇಕ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಕಟ್ಟೆಯ ಮೇಲಿರುವ ಮರಗಳಲ್ಲಿನ ರೆಂಬೆ, ಕೊಂಬೆಗಳನ್ನು ಯಾರೂ ತೆಗೆದುಕೊಂಡು ಹೋಗಬಾರದು. ಕೆಡುಕಾಗುತ್ತದೆ ಎಂಬ ನಂಬಿಕೆಯಿದೆ ಎಂದು ದೇವಾಲಯದ ಅರ್ಚಕರು ತಿಳಿಸುತ್ತಾರೆ.

ಏಳು ಬೆಟ್ಟಗಳನ್ನೂ ನಲ್ಲಕೊಂಡಲು ಎಂದು ಕರೆಯುತ್ತಾರೆ. ಇಲ್ಲಿರುವ ಮೂರು ಕೆರೆಗಳನ್ನು ಮೂವರು ವೇಶ್ಯೆಯರು ಕಟ್ಟಿಸಿದ್ದು, ತಿಪ್ಪಸಾನಿಕೆರೆ, ರಾಜಸಾನಿಕೆರೆ ಮತ್ತು ನಲ್ಲಸಾನಿಕೆರೆ ಎಂದು ಅವರ ಹೆಸರಿನಿಂದಲೇ ಕರೆಯಲ್ಪಡುತ್ತವೆ. ಈ ಬೆಟ್ಟಗಳಲ್ಲಿ ಚಿರತೆ, ಜಿಂಕೆ, ಮೊಲ, ಕರಡಿ, ನರಿ ಮುಂತಾದ ಪ್ರಾಣಿಗಳು ಇದ್ದವು. ತಿಪ್ಪಸಾನಿಕೆರೆ ಅಥವಾ ತಿಪ್ಪರಾಸಕೆರೆಯ ಕಟ್ಟೆಯ ಮೇಲಿರುವ ಬೇವಿನ ಮರಗಳನ್ನು ನಾವು ಚಿಕ್ಕಂದಿನಿಂದಲೇ ನೋಡಿದ್ದೇವೆ. ಕೆರೆಗಳನ್ನು ಕಟ್ಟಿದ ಮಹಾ ತಾಯಂದಿರೆ ಇವನ್ನೂ ನೆಟ್ಟಿರಬೇಕು ಎಂಬುದು ಗ್ರಾಮದ ಹಿರಿಯರ ಮಾತಾಗಿದೆ.

ಇಲ್ಲಿ ಸುತ್ತ ಇರುವ ಬೆಟ್ಟಗಳೆಲ್ಲಾ ಚಾರಣಕ್ಕೆ ಯೋಗ್ಯವಾಗಿವೆ. ಒಂದೊಂದರಲ್ಲೂ ಒಂದೊಂದು ವಿಶೇಷವಿದೆ. ಪರಂಪರಾಗತ ವೃಕ್ಷವೆಂದು ಸರ್ಕಾರ ಹೆಸರಿಸಿರುವುದರಿಂದ ಪ್ರವಾಸೋದ್ಯಮ ಇಲಾಖೆ ಇದನ್ನು ಅಭಿವೃದ್ಧಿ ಪಡಿಸಿದರೆ ಇದೊಂದು ಪ್ರವಾಸಿ ತಾಣವಾಗಬಲ್ಲದು. ಇದರಿಂದ ಈ ಪ್ರದೇಶದ ಅಭಿವೃದ್ಧಿ ಮತ್ತು ಸಂರಕ್ಷಣೆಯಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ.

ಬೇವಿನ ಮರದ ಸುತ್ತಳತೆ ತೋರಿಸುವ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.